ಚಾ ಬಿಡದ ಉತ್ತರ ಕರ್ನಾಟಕ ಮಂದಿ ನಾವು, ಮನ್ಸು ತಂಪ್ ಆತು...!
ಹಾವೇರಿ, ಏಪ್ರಿಲ್ 28: ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಮತದಾನ ಮೇ 7ರಂದು ನಡೆಯಲಿದೆ. ಚುನಾವಣಾ ಪ್ರಚಾರ ಬಿರು ಬಿಸಿಲಿನಲ್ಲಿಯೂ ಸಹ ಕಾವೇರಿದೆ. ಚುನಾವಣಾ ಪ್ರಚಾರದ ನಡುವೆಯೇ ಉತ್ತರ ಕರ್ನಾಟಕ ಭಾಗದ ಜನರ ಚಹಾ ಪ್ರೀತಿಯ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಹಾ ಪ್ರೀತಿ ಬಗ್ಗೆ ಫೇಸ್‌ಬುಕ್ ಪೋಸ್ಟ್ ಒಂದನ್ನು ಹಾಕಿದ್ದಾರೆ. ಶನಿವಾರ ಹಾನಗಲ್, ಹಾವೇರಿಯಲ್ಲಿ ಅವರು ಚುನಾವಣಾ ಪ್ರಚಾರವನ್ನು ನಡೆಸಿದರು.

ಫೇಸ್‌ಬುಕ್ ಪೋಸ್ಟ್: ಚಹಾ ಕುಡಿಯುವ ಫೋಟೋವನ್ನು ಶೇರ್ ಮಾಡಿರುವ ಬಸವರಾಜ ಬೊಮ್ಮಾಯಿ, 'ಬಿಸಿಲು ನೆತ್ತಿ ಮ್ಯಾಗೆ ಇದ್ರು ನಮ್ ಮಂದಿಗೆ ಚಾ ಬೇಕು. ಏನನ್ನೂ ಬಿಟ್ರು ನಾವ್ ಚಾ ಬಿಡದ ಉತ್ತರ ಕರ್ನಾಟಕ ಮಂದಿ ನಾವು...ಹಾನಗಲ್ದಾಗ ರೋಡ್ ಶೋ ಮುಗ್ಸಿದ್ ತಕ್ಷಣ ಚಾ ಕುಡಿಬೇಕು ಅನ್ಸ್ತು. ತಡಾಬಡಿ ಮಾಡ್ದೆ ಅಲ್ಲೇ ಪಕ್ದಾಗ ಇದ್ ಅಂಗ್ಡಿಗೆ ಹೋಗಿ ಒಂದ್ ಕಪ್ ಚಾ ಕುಡ್ದೆ ನೋಡ್ರಿ....ಮನ್ಸು ತಂಪ್ ಆತು' ಎಂದು ಬರೆದಿದ್ದಾರೆ.
ಬಸವರಾಜ ಬೊಮ್ಮಾಯಿ ಅವರ ಜೊತೆ ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಮಾಜಿ ಸಚಿವ ಮನೋಹರ್ ತಹಶಿಲ್ದಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಬಿಸಿಲು ನೆತ್ತಿ ಮ್ಯಾಗೆ ಇದ್ರು ನಮ್ ಮಂದಿಗೆ ಚಾ ಬೇಕು. ಏನನ್ನೂ ಬಿಟ್ರು ನಾವ್ ಚಾ ಬಿಡದ ಉತ್ತರ ಕರ್ನಾಟಕ ಮಂದಿ ನಾವು..
— Basavaraj S Bommai (Modi Ka Parivar) (@BSBommai) April 27, 2024
ಹಾನಗಲ್ದಾಗ ರೋಡ್ ಶೋ ಮುಗ್ಸಿದ್ ತಕ್ಷಣ ಚಾ ಕುಡಿಬೇಕು ಅನ್ಸ್ತು. ತಡಾಬಡಿ ಮಾಡ್ದೆ ಅಲ್ಲೇ ಪಕ್ದಾಗ ಇದ್ ಅಂಗ್ಡಿಗೆ ಹೋಗಿ ಒಂದ್ ಕಪ್ ಚಾ ಕುಡ್ದೆ ನೋಡ್ರಿ....ಮನ್ಸು ತಂಪ್ ಆತು. pic.twitter.com/nJUiQCpYiG
ಬಸವರಾಜ ಬೊಮ್ಮಾಯಿ ಶನಿವಾರ ಗುರು ಕುಮಾರೇಶ್ವರರ ತಪೋಭೂಮಿ, ತಾರಕೇಶ್ವರರ ನಾಡು ಐತಿಹಾಸಿಕ ಹಾನಗಲ್‌ನಲ್ಲಿ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿದರು. ಹಾನಗಲ್ ಜನತೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿ, ನಮ್ಮೆಲ್ಲರ ಬೆಂಬಲ ಕಮಲಕ್ಕೆ ಎಂದು ಅಭಯ ನೀಡಿದರು. ಇದೇ ಸಂದರ್ಭದಲ್ಲಿ ಹಲವಾರು ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶನಿವಾರ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಚಾರಾರ್ಥವಾಗಿ ಹಾವೇರಿ ನಗರದಲ್ಲಿ ಹಾವೇರಿ ಜಿಲ್ಲಾ ಬಣಜಿಗ ಸಮಾಜ, ಸವಿತಾ ಸಮಾಜ, ಮರಾಠಾ ಸಮಾಜ ಹಾಗೂ ವಿಶ್ವ ಕರ್ಮ ಸಮಾಜಗಳ ಸಭೆಗಳಲ್ಲಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ 10 ವರ್ಷಗಳ ಸಾಧನಗಳನ್ನು ತಿಳಿಸಿ, ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಬೆಂಬಲಿಸಿವಂತೆ ವಿನಂತಿಸಿದರು.
ಮೇ 7ರ ಮಂಗಳವಾರ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಮತದಾನ ನಡೆಯಲಿದೆ. ಶಿಗ್ಗಾವಿ ಕ್ಷೆತ್ರದ ಬಿಜೆಪಿ ಶಾಸಕರು ಆಗಿರುವ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ. ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಆನಂದಸ್ವಾಮಿ ಗಡ್ಡದೇವರಮಠ ಅಭ್ಯರ್ಥಿಯಾಗಿದ್ದಾರೆ.
2019ರ ಚುನಾವಣೆಯಲ್ಲಿ ಹಾವೇರಿ-ಗದಗ ಕ್ಷೇತ್ರದಲ್ಲಿ ಬಿಜೆಪಿಯ ಶಿವಕುಮಾರ್ ಉದಾಸಿ 683,660 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಡಿ. ಆರ್. ಪಾಟೀಲ್ 542,778 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಆದರೆ ಈ ಬಾರಿ ಶಿವಕುಮಾರ್ ಉದಾಸಿ ಕಣಕ್ಕಿಳಿಯಲು ನಿರಾಕರಿಸಿದ ಕಾರಣ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿಗೆ ಶಿವಕುಮಾರ್ ಉದಾಸಿ ಭದ್ರ ಬುನಾದಿ ಹಾಕಿದ್ದಾರೆ. ಆದರೆ ಈ ಬಾರಿ ಅವರು ಕಣಕ್ಕಿಳಿದಿಲ್ಲ. ಬಸವರಾಜ ಬೊಮ್ಮಾಯಿ ಶಿಗ್ಗಾವಿಯ ಹಾಲಿ ಶಾಸಕರು. ಆದರೆ ಲೋಕಸಭಾ ಚುನಾವಣೆಗೆ ಅವರಿಗೆ ಪಕ್ಷ ಟಿಕೆಟ್ ನೀಡಿದೆ.
ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಹಾವೇರಿ, ಹಾನಗಲ್, ಬ್ಯಾಡಗಿ, ಹಿರೇಕೆರೂರು-ರಟ್ಟಿಹಳ್ಳಿ, ರಾಣೆಬೆನ್ನೂರು, ಗದಗ, ರೋಣ, ಶಿರಹಟ್ಟಿ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.












Click it and Unblock the Notifications