ಒಳ ಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯದ ಸ್ವಾಮೀಜಿಯಿಂದ ಆತ್ಮಹತ್ಯೆಗೆ ಯತ್ನ
ಹಾವೇರಿ , ಏಪ್ರಿಲ್. 04: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡಿರುವುದನ್ನು ವಿರೋಧಿಸಿ ಬಂಜಾರ ಸಮುದಾಯದ ಮಠಾಧೀಶರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾವೇರಿಯ ಶಿಗ್ಗಾಂವ್ ಪಟ್ಟಣದ ಬಿಆರ್ ಅಂಬೇಡ್ಕರ್ ಪ್ರತಿಮೆ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.
ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡುವ ರಾಜ್ಯ ಸಚಿವ ಸಂಪುಟದ ನಿರ್ಧಾರದ ವಿರುದ್ಧ ಬಂಜಾರ ಸಮುದಾಯದ ಜನರು ಶಿವಮೊಗ್ಗ, ವಿಜಯನಗರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಊರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಗುಂಡೂರು ಗ್ರಾಮದ ತಿಪ್ಪೇಸ್ವಾಮಿ ಶ್ರೀಗಳ ನೇತೃತ್ವದಲ್ಲಿ ಬಂಜಾರ ಸಮುದಾಯದ ಪ್ರತಿಭಟನಾಕಾರರು ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ್ದರು. ಬಿಜೆಪಿ ಸರಜಾರ ಒಳಮೀಸಲಾತಿ ನೀಡಿ ತಮ್ಮ ಸಮುದಾಯಕ್ಕೆ ಅನ್ಯಾಯ ಎಸಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಬಂಜಾರ ಸಮುದಾಯದ ಅಪಾರ ಭಕ್ತರೊಂದಿಗೆ ಸ್ವಾಮೀಜಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ್ದಾರೆ.
ಮೆರವಣಿಗೆ ಮುಗಿಸಿದ ನಂತರ ತಿಪ್ಪೇಸ್ವಾಮಿ ಶ್ರೀಗಳು ಅಂಬೇಡ್ಕರ್ ಪ್ರತಿಮೆಯ ಮುಂದಿನ ಮೆಟ್ಟಿಲುಗಳ ಮೇಲೆ ಹತ್ತಿ, ಮಾಲೆ ಹಾಕುವ ನೆಪದಲ್ಲಿ ಮೆಟ್ಟಿಲಿನ ಗ್ರಿಲ್‌ಗೆ ನೇಣು ಹಾಕಿಕೊಳ್ಳಲು ಯತ್ನಿಸಿದರು. ತಾವು ಧರಿಸಿದ್ಧ ಕಾವಿ ವಸ್ತ್ರದಲ್ಲೇ ನೇಣು ಬಿಗಿಸುಕೊಳ್ಳಲು ಪ್ರಯತ್ನಿಸಿದ್ದಾರೆ. ತಕ್ಷಣ ಪೊಲೀಸರು ಹಾಗೂ ಪ್ರತಿಭಟನಾಕಾರರು ಅವರನ್ನು ರಕ್ಷಿಸಿದ್ದಾರೆ.
ಸದ್ಯ ತಿಪ್ಪೇಸ್ವಾಮಿ ಮಠಾಧೀಶರನ್ನು ಶಿಗ್ಗಾಂವ್‌ನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಗುಂಡೂರು ಗ್ರಾಮದ ಬಂಜಾರ ಮಠದ ಸ್ವಾಮೀಜಿ ತಿಪ್ಪೇಸ್ವಾಮಿ. ಇಂದು ಒಳಮೀಸಲಾತಿ ವಿರೋಧಿಸಿ ಶಿಗ್ಗಾಂವ ತಹಶೀಲ್ಧಾರ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಘಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, "ಹಿಂದೆ ಜಯಮೃತ್ಯುಂಜಯ ಸ್ವಾಮಿಗಳನ್ನು ಬೀದಿಯಲ್ಲಿ ಕೂರಿಸಿದ್ದಲ್ಲದೆ ನಿಂದಿಸಿ ಅವಮಾನಿಸಿತ್ತು ಬಿಜೆಪಿ. ವಾಲ್ಮೀಕಿ ಶ್ರೀಗಳನ್ನು ನೂರಾರು ದಿನ ಬೀದಿಯಲ್ಲಿ ಕೂರಿಸಿ ಅವಮಾನಿಸಿತ್ತು ಬಿಜೆಪಿ. ಈಗ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿ ಬಂಜಾರ ಶ್ರೀಗಳ ಜೀವ ತೆಗೆಯಲು ಹೊರಟಿದೆ ಬಿಜೆಪಿ. ಬಂಜಾರ ಸಮುದಾಯದ ಕೂಗು ಕೇಳದಷ್ಟು ಕಿವುಡಗಿದೆಯೇ ಸರ್ಕಾರ..?" ಎಂದು ಕಿಡಿಕಾರಿದೆ.
ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡಲು ನಿರ್ಧರಿಸಿತ್ತು. ಎಸ್‌ಸಿ (ಎಡ) ಕ್ಕೆ ಶೇಕಡಾ 6, ಎಸ್‌ಸಿ (ಬಲಕ್ಕೆ) ಶೇಕಡಾ 5.5, "ಸ್ಪೃಶ್ಯರಿಗೆ" (ಬಂಜಾರ, ಭೋವಿ, ಕೊರ್ಮಾ ಮತ್ತು ಕೊರ್ಚಾ ಇತ್ಯಾದಿ) 4.5 ಪ್ರತಿಶತ ಮತ್ತು ಇತರರಿಗೆ ಒಂದು ಶೇಕಡಾ ಒಳ ಮೀಸಲಾತಿಯನ್ನು ಶಿಫಾರಸು ಮಾಡಿದೆ. ನಂತರ ರಾಜ್ಯ ಸರ್ಕಾರ ಈ ಶಿಫಾರಸನ್ನು ಕೇಂದ್ರಕ್ಕೆ ಅನುಮೋದನೆಗಾಗಿ ರವಾನಿಸಿದೆ.
ಕೆಲವು ದಿನಗಳ ಹಿಂದೆ ಲಂಬಾಣಿ (ಬಂಜಾರ) ಸಮುದಾಯದ ಜನರು ಅದರಲ್ಲೂ ವಿಶೇಷವಾಗಿ ಯುವಕರು ಶಿವಮೊಗ್ಗದಲ್ಲಿ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ಎಸೆದು ಕಿಟಕಿ ಗಾಜುಗಳನ್ನು ಹೊಡೆದು ಹಾಕಿದ್ದರು. ಅಂದಿನಿಂದಲೂ ರಾಜ್ಯದ ಹಲವು ಭಾಗಗಳಲ್ಲಿ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ.












Click it and Unblock the Notifications