ಲೋಕಸಭೆ ಚುನಾವಣೆಗೆ ಸ್ಪರ್ಧೆ : ಯದುವೀರ ಒಡೆಯರ್ ಹೇಳಿದ್ದೇನು?
ಹಾಸನ, ಸೆಪ್ಟೆಂಬರ್ 08 : 'ರಾಜಕೀಯ ಪ್ರವೇಶ ಸದ್ಯಕ್ಕಿಲ್ಲ, ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ' ಎಂದು ಯದುವೀರ್ ಒಡೆಯರ್ ಸ್ಪಷ್ಟಪಡಿಸಿದರು. ಕೆಲವು ದಿನಗಳಿಂದ ಅವರು 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಹಾಸನದಲ್ಲಿ ಶನಿವಾರ ಮಾತನಾಡಿದ ಯದುವೀರ ಒಡೆಯರ್, 'ರಾಜಮನೆತನದ ಪರಂಪರೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ. ರಾಜಕೀಯದಲ್ಲಿ ಆಸಕ್ತಿ ಇಲ್ಲ' ಎಂದು ಹೇಳಿದರು.
2019ರ ಲೋಕಸಭೆ ಚುನಾವಣೆಗೆ ಯದುವೀರ ಒಡೆಯರ್ ಅವರು ಮಂಡ್ಯ ಅಥವ ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಈ ಸುದ್ದಿಗೆ ಇಂದು ಅವರೇ ಸ್ಪಷ್ಟನೆ ಕೊಟ್ಟರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಲಿವೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ಮಾಡುವುದಿಲ್ಲ. ಎಚ್.ಡಿ.ದೇವೇಗೌಡರು ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ. ಅವರನ್ನು ಸೋಲಿಸಲು ಬಿಜೆಪಿ ಯದುವೀರ್ ಒಡೆಯರ್ ಅವರನ್ನು ಕಣಕ್ಕಿಳಿಸಲಿದೆ ಎಂಬ ಸುದ್ದಿ ಹಬ್ಬಿತ್ತು.

ಯದುವೀರ ಒಡೆಯರ್ ಹೇಳಿದ್ದೇನು?
'ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದು ಕೇವಲ ಊಹಾಪೋಹ. ಜನರ ಸೇವೆ ಮಾಡಲು ರಾಜಕೀಯ ಬಿಟ್ಟು ಬೇರೆ-ಬೇರೆ ಕ್ಷೇತ್ರಗಳಿವೆ' ಎಂದು ಯದುವೀರ್ ಒಡೆಯರ್ ಹೇಳಿದರು.

ರಾಜಕೀಯ ಪ್ರವೇಶ ಇಲ್ಲ
'ರಾಜಮನೆತನದ ಜವಾಬ್ದಾರಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ. ರಾಜಕೀಯ ಪ್ರವೇಶ ಸದ್ಯಕ್ಕಿಲ್ಲ. ರಾಜಕೀಯದಲ್ಲಿದಲ್ಲಿ ಆಸಕ್ತಿಯೂ ಇಲ್ಲ' ಎಂದು ಯದುವೀರ ಒಡೆಯರ್ ಅವರು ಸ್ಪಷ್ಟಪಡಿಸಿದರು.

ಅಮಿತ್ ಶಾ ಭೇಟಿ ನೀಡಿದ್ದರು
2018ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮೈಸೂರು ಅರಮನೆಗೆ ಭೇಟಿ ನೀಡಿದ್ದರು. ರಾಜಮಾತೆ ಪ್ರಮೋದಾದೇವಿ ಮತ್ತು ಯದುವೀರ್ ಒಡೆಯರ್ ಅವರನ್ನು ಭೇಟಿ ಮಾಡಿದ್ದರು.
ಆದ್ದರಿಂದ, ಯದುವೀರ ಒಡೆಯರ್ ಅವರು ಬಿಜೆಪಿ ಸೇರಲಿದ್ದಾರೆ. ಮಂಡ್ಯ ಅಥವ ಮೈಸೂರು ಕ್ಷೇತ್ರದಿಂದ ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಬಿಜೆಪಿ ನಾಯಕರು ಹೇಳಿದ್ದೇನು?
ಯದುವೀರ ಒಡೆಯರ್ ಅವರು ಮಂಡ್ಯದಿಂದ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ್ದ ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ,'ಮಂಡ್ಯ ಜಿಲ್ಲೆಯ ಮೇಲೆ ಮೈಸೂರು ರಾಜವಂಶಸ್ಥರ ಋಣವಿದೆ. ಆ ವಂಶದ ಕುಡಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಗೆಲುವು ಖಂಡಿತ. ಪಕ್ಷ ಅವರನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡರೆ ಅದಕ್ಕೆ ಬದ್ಧನಾಗಿರುತ್ತೇವೆ' ಎಂದು ಹೇಳಿದ್ದರು.

ಎಚ್.ಡಿ.ದೇವೇಗೌಡರ ಸ್ಪರ್ಧೆ
2018ರ ಚುನಾವಣೆಯಲ್ಲಿ ಮಂಡ್ಯದಲ್ಲಿ 7 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಜೆಡಿಎಸ್ ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕ್ಷೇತ್ರದಿಂದ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಎಚ್.ಡಿ.ದೇವೇಗೌಡ ಅವರು ಸ್ಪರ್ಧೆ ಮಾಡಿದರೆ ಅವರ ವಿರುದ್ಧ ಯದುವೀರ ಒಡೆಯರ್ ಅವರನ್ನು ಕಣಕ್ಕಿಳಿಸಿ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.












Click it and Unblock the Notifications