ಗ್ರಾಮಸ್ಥರು ತೋಡಿದ್ದ ಕಂದಕಕ್ಕೆ ಬಿದ್ದ ಕಾಡಾನೆ: ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
ಹಾಸನ, ಜನವರಿ 3: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾನವ ಕಾಡಾನೆ ನಡುವಿನ ಸಂಘರ್ಷ ಮಿತಿಮೀರಿದ್ದು ಇದರಿಂದ ರೋಸಿ ಹೋದ ಜನರು ಸಕಲೇಶಪುರ ತಾಲೂಕಿನ, ಹೊಸಕೊಪ್ಪಲು ಗ್ರಾಮದ ಅಮೃತ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಡಿಸೆಂಬರ್ 26 ರಂದು 20 ಅಡಿ ಉದ್ದ 20 ಅಡಿ ಅಗಲದ ಕಂದಕ ತೋಡಿದ್ದರು.
ಡಿಸೆಂಬರ್27 ರಂದು ಮರದ ಬಂಬು ಹಾಗೂ ಸೊಪ್ಪಿನಿಂದ ಮುಚ್ಚಿದ್ದರು. ಭಾನುವಾರ ತಡರಾತ್ರಿ 2 ಗಂಟೆ ಸಮಯದಲ್ಲಿ ಐದರಿಂದ ಆರು ವರ್ಷದ ಗಂಡು ಮರಿಯಾನೆ ಈ ಖೆಡ್ಡಾಕೆ ಬಿದ್ದಿದೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.
ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವವರು ಕಾಡಾನೆ ಮರಿಯನ್ನು ಮೇಲೆತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಇತ್ತ ಗುಂಡಿಯಲ್ಲಿ ಬಿದ್ದಿದ್ದ ಮರಿಯಾನೆ ಮೇಲೆ ಹತ್ತಲು ಪರದಾಡುತಿತ್ತು.

ಕಾಡಾನೆ ದಾಳಿಗೆ 77 ಮಂದಿ ಸಾವು
ಕಳೆದ ಇಪ್ಪತ್ತು ವರ್ಷಗಳಿಂದ ಸಕಲೇಶಪುರ, ಆಲೂರು ಹಾಗೂ ಇತ್ತೀಚಿನ ವರ್ಷಗಳಲ್ಲಿ ಬೇಲೂರು ಭಾಗದಲ್ಲಿ ಕಾಡಾನೆಗಳ ದಾಂಧಲೆ ವಿಪರೀತವಾಗಿದೆ. ಕಾಡಾನೆ ಹಿಡಿದು ಸ್ಥಳಾಂತರಿಸಿ ಇಲ್ಲಾ, ಆನೆ ಕಾರಿಡಾರ್ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ನೂರಾರು ಹೋರಾಟ ನಡೆಸಿದರು, ಸರ್ಕಾರಗಳು ಪರಿಹಾರ, ಭರವಸೆ ನೀಡಿ ಕಣ್ಣೊರೆಸುವ ತಂತ್ರ ಮಾಡಿವೆ, ಹೊರತು ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿವೆ. ಇದುವರೆಗೂ 77 ಮಂದಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರೆ, 33 ಕಾಡಾನೆಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ. ಕಾಡಾನೆ ಹಾವಳಿಯಿಂದ ಬೇಸತ್ತ ಸಕಲೇಶಪುರ ತಾಲೂಕಿನ, ಹೊಸಕೊಪ್ಪಲಿನ ಗ್ರಾಮಸ್ಥರು ಸರ್ಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಸೆಡ್ಡು ಹೊಡೆದು ಖೆಡ್ಡಾ ತೋಡಿದ್ದರು. ಆ ಖೆಡ್ಡಾಕ್ಕೆ ರಾತ್ರಿ ಆಹಾರ ಅರಸಿ ಬರುತ್ತಿದ್ದ ವೇಳೆ ಗುಂಪಿನಲ್ಲಿದ್ದ ಗಂಡು ಮರಿಯಾನೆ ಬಿದ್ದಿದೆ.

ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಅಮೃತ್ ತಮ್ಮ ಜಮೀನಿನ ಬಳಿ ತೆರಳಿದಾಗ ಖೆಡ್ಡಾಕ್ಕೆ ಕಾಡಾನೆ ಬಿದ್ದಿರುವುದು ಕಂಡಿದೆ. ಕೂಡಲೇ ಅರಣ್ಯ ಇಲಾಖೆ ಮಾಹಿತಿ ನೀಡಿದ್ದಾರೆ. ಕಾಡಾನೆ ಕಂದಕಕ್ಕೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ನಿಮ್ಮ ಭರವಸೆಗಳು, ಪರಿಹಾರ ಸಾಕು. ಕಾಡಾನೆ ಹಿಡಿಯಲು ಇಪ್ಪತ್ತೈದು ಲಕ್ಷ ಖರ್ಚು ಮಾಡುತ್ತೀರಿ. ನಮಗೆ ಇಪ್ಪತ್ತೈದು ಸಾವಿರ ಕೊಡಿ ಎಲ್ಲಾ ಕಾಡಾನೆಗಳನ್ನು ಖೆಡ್ಡಾಕ್ಕೆ ಕೆಡವುತ್ತೇವೆ ಆಗ ನೀವು ಸ್ಥಳಾಂತರ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆ ಮೇಲೆ ಹತ್ತಲು ಜೆಸಿಬಿ ಬಂದಿದ್ದು, ಗ್ರಾಮಸ್ಥರು ಮಧ್ಯದಲ್ಲೇ ತಡೆದು ವಾಪಾಸ್ ಕಳುಹಿಸಿದರು. ಸ್ಥಳೀಯರ ಆಕ್ರೋಶಕ್ಕೆ ಏನು ಉತ್ತರಿಸಲಾಗದೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು.

ಅರಣ್ಯಾಧಿಕಾರಿಗಳ ಭರವಸೆ ಮೇಲೆ ಜನರ ಒಪ್ಪಿಗೆ
ಸುಮಾರು ಹದಿನಾಲ್ಕು ಗಂಟೆಗಳ ಕಾಲ ಗುಂಡಿಯಲ್ಲಿ ಬಿದ್ದಿದ್ದ ಕಾಡಾನೆ ಮೇಲೆ ಹತ್ತಲು ಪರದಾಡಿತು. ಸೊಂಡಲು, ಮುಂದಿನ, ಹಿಂದಿನ ಕಾಲುಗಳಲ್ಲಿ ಮಣ್ಣನ್ನು ಕೆರೆದು ಮೇಲೆ ಬರಲು ಹರಸಾಹಸಪಟ್ಟಿತ್ತು. ಗುಂಡಿಯಲ್ಲಿ ಬಿದ್ದಿದ್ದ ಮರದ ಕೊಂಬೆ, ಸೊಪ್ಪುನ್ನು ಎಸೆದಾಡಿ ಘೀಳಿಟ್ಟಿತು. ಕೆಸರನ್ನು ಮೈಮೇಲೆ ಎರಚಿಕೊಂಡು ಅತ್ತಿಂದ ಇತ್ತ ಇತ್ತಿಂದ ಅತ್ತ ಓಡಾಡುವ ದೃಶ್ಯ ಮನಕಲುಕುವಂತಿತ್ತು. ಕೊನೆಗೆ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅಧಿಕಾರಿಗಳು ತೀವ್ರ ದಾಂಧಲೆ ನಡೆಸುತ್ತಿರುವ ಐದು ಕಾಡಾನೆಗಳನ್ನು ಹಿಡಿಯಲು ಅನುಮತಿ ಪಡೆಯುತ್ತೇವೆ. ಜಮೀನಿನ ಮಾಲೀಕ ಸೇರಿ ಯಾರ ಮೇಲೂ ಕೇಸ್ ದಾಖಲು ಮಾಡಲ್ಲ. ಬೆಳೆ ನಷ್ಟಕ್ಕೆ ಶೀಘ್ರ ಪರಿಹಾರ ನೀಡುತ್ತೇವೆ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿ ಎಲ್ಲಾ ಕಾಡಾನೆಗಳನ್ನು ಸ್ಥಳಾಂತರ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ನೀಡಿ ಜೆಸಿಬಿ ಬರಲು ಅವಕಾಶ ಮಾಡಿಕೊಟ್ಟರು. ನಂತರ ಜೆಸಿಬಿಯಿಂದ ಟ್ರಂಚ್ ತೆಗೆದು ಕಾಡಾನೆ ಮರಿ ಹತ್ತಲು ದಾರಿ ಮಾಡಲಾಯಿತು. ಟ್ರಂಚ್ ಮೂಲಕ ಮೇಲೆ ಬಂದ ಮರಿಯಾನೆ ಬಡ ಜೀವ ಬದುಕಿತು ಎಂದು ಕಾಫಿ ತೋಟದೊಳಗೆ ಓಡಿ ಹೋಯಿತು. ಜೂನ್‌ವರೆಗೂ ಸರ್ಕಾರ ಕಾಲಾವಕಾಶ ನೀಡುತ್ತೇವೆ, ಆಗಲೂ ಕಾಡಾನೆಗಳ ಸ್ಥಳಾಂತರ ಆಗದೇ ಇದ್ದ ಎಲ್ಲರ ಜಮೀನಿನಲ್ಲಿಯೂ ಖೆಡ್ಡಾ ಸಿದ್ಧ ಮಾಡುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದರು.

ಅಧಿಕಾರಿಗಳ ಕಾಲಿಗೆ ಬಿದ್ದ ರೈತ
ಇನ್ನು ಸಕಲೇಶಪುರ ಉಪವಿಭಾಗಾಧಿಕಾರಿ ಅನ್ಮೂಲ್ಬಜೈನ್, ಎಸಿಎಫ್, ಅರವಳಿಕೆ ತಜ್ಞರು, ಅಪರ ಪೊಲೀಸ್ ವರಿಷ್ಠಾಧಿಕಾರಿ ಕಾಡಾನೆ ಮೇಲೆ ಹತ್ತುವ ಕಾರ್ಯಾಚರಣೆ ಮುಗಿಯುವವರೆಗು ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಈ ವೇಳೆ ಬೆಳೆ ಹಾನಿ ಪರಿಶೀಲನೆ ಬಂದ ರೈತ ಮಹೇಂದ್ರ ಎನ್ನುವವರ ಎಸಿ ಕಾಲಿಗೆ ಬಿದ್ದ ಘಟನೆ ನಡೆಯಿತು. ಮೂರು ಸಾಲ ಮಾಡಿ ಅಡಿಕೆ ತೋಟ ಮಾಡಿದ್ದು ಬ್ಯಾಂಕ್‌ನಿಂದ ನೋಟಿಸ್ ಬಂದಿದೆ ಎಂದು ಅಳಲು ತೋಡಿಕೊಂಡರು. ಸ್ಥಳದಲ್ಲಿ ಬಿಗುಬಿನ ವಾತಾವರಣ ನಿರ್ಮಾಣವಾಗಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಒಟ್ಟಿನಲ್ಲಿ ರೈತರ ಸಹನೆಯ ಕಟ್ಟೆ ಒಡೆದಿದ್ದು ಇನ್ನೊಂದು ಸಾವು ನೋವಾದರೂ, ಮುಖ್ಯಮಂತ್ರಿ ಇರಲಿ ಯಾರೊಬ್ಬ ಜನಪ್ರತಿನಿಧಿಯೂ ಕೂಡ ಈ ಭಾಗಕ್ಕೆ ಬರದಂತಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.












Click it and Unblock the Notifications