ಹಾಸನದಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿ: ಸರ್ಕಾರ ವಿರುದ್ಧ ಜಿಲ್ಲೆಯ ಜನತೆ ಗರಂ
ಹಾಸನ, ಜನವರಿ 12: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಂಧಲೆ ದಿನೇದಿನೇ ಹೆಚ್ಚುತ್ತಿದ್ದು, ಕಾಡಾನೆಗಳ ಓಡಾಟ ಜನರನ್ನ ಭಯಭೀತರನ್ನಾಗಿಸಿದೆ. ರೈಲು ಹಳಿಗಳು, ರಸ್ತೆಗಳು, ಕಾಫಿತೋಟಗಳು, ಗದ್ದೆಗಳು, ಗ್ರಾಮದೊಳಗೆ ಸೇರಿದಂತೆ ಎಲ್ಲಾ ಕಡೆಗಳಲ್ಲಿ ನಿರ್ಭೀತಿಯಿಂದ ಕಾಡಾನೆಗಳು ಓಡಾಟ ನಡೆಸುತ್ತಿವೆ.
ಕಾಡಾನೆಗಳು ರೈತರು ಬೆಳೆದ ಬೆಳೆಗಳೆಲ್ಲವನ್ನೂ ತುಳಿದು ಹಾಳು ಮಾಡುತ್ತಿದ್ದು, ಶಾಶ್ವತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸುತ್ತಿದ್ದರೂ ಕೂಡ ರಾಜ್ಯ ಸರ್ಕಾರ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.
ಹಾಸನ ಜಿಲ್ಲೆಯ ಮಲೆನಾಡು ಭಾಗವಾದ ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳಲ್ಲಿ ಕಾಡಾನೆಗಳ ಓಡಾಟ ನಿರಂತರವಾಗಿದೆ. 20 ರಿಂದ 30 ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಎಸ್ಟೇಟ್ ನಿಂದ ಎಸ್ಟೇಟ್‌ಗೆ, ರಸ್ತೆಯಿಂದ ರಸ್ತೆಯಿಂದ ರಸ್ತೆಗೆ, ಊರಿನಿಂದ ಊರಿಗೆ ಹಿಂಡು ಹಿಂಡಾಗಿ ಸಂಚಾರ ಮಾಡುತ್ತಿವೆ. ಇದರಿಂದ ಜನರು ಮನೆಯಿಂದ ಹೊರಗೆ ಬರುವುದಕ್ಕೂ ಭಯ ಪಡುತ್ತಿದ್ದಾರೆ.

ಯಾವುದೇ ಪ್ರಾಣ ಹಾನಿ ಮಾಡದ ಭೀಮಾ
ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಸಮೀಪ ರಸ್ತೆಯಲ್ಲಿಯೇ ಒಂಟಿ ಸಲಗವೊಂದು ಸಾಗಿದೆ. ಸೊಂಡಲಿನಿಂದ ಕಾಫಿತೋಟದ ಗೇಟ್ ತಳ್ಳಿ ಒಂಟಿ ಸಲಗ ರಸ್ತೆಗೆ ಬರುತ್ತಿದ್ದಂತೆ ವಾಹನ ಸವಾರರು ವಾಹನಗಳಲ್ಲಿ ನಿಲ್ಲಿಸಿದ್ದಾರೆ. ಈ ಒಂಟಿ ಸಲಗಕ್ಕೆ ಮಲೆನಾಡಿನ ಜನರು ಭೀಮಾ ಅಂತಾ ಹೆಸರಿಟ್ಟಿದ್ದು, ಭೀಮಾ ಇದುವರೆಗೂ ಯಾವುದೇ ಪ್ರಾಣ ಹಾನಿ ಮಾಡದೆ, ಕಾಫಿ ತೋಟ, ಮನೆಗಳ ಗೇಟ್ ಮೂಲಕವೇ ಸಂಚರಿಸುತ್ತಿದೆ.

ರೈಲು ಡಿಕ್ಕಿಯಾಗಿ ಮೂರು ಕಡಾನೆ ಸಾವು
ಇನ್ನು ಸಕಲೇಶಪುರ ತಾಲೂಕಿನ ಹಸಿಡೆ ಗ್ರಾಮದ ಸಮೀಪ 20 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ರೈಲ್ವೆ ಹಳಿಯನ್ನು ದಾಟಿವೆ. ಹಲಸುಲಿಗೆ ಗ್ರಾಮದ ಕಡೆಯಿಂದ ಒಸ್ಸೂರ್ ಎಸ್ಟೇಟ್ ಕಡೆಗೆ ದಾಟಿರುವ ಕಾಡಾನೆಗಳ ಹಿಂಡನ್ನು ಸ್ಥಳಿಯರು ವಿಡಿಯೋ ಮಾಡಿದ್ದಾರೆ. ರೈಲ್ವೆ ಹಳಿಗಳ ಮೇಲೆ ಕಾಡಾನೆಗಳ ಹಿಂಡು ಸಂಚಾರ ಮಾಡುತ್ತಿರುವುದರಿಂ ಅರಣ್ಯ ಇಲಾಖೆ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆಯನ್ನು ವಹಿಸಬೇಕು, ಈಗಾಗಲೇ ರೈಲಿಗೆ ಡಿಕ್ಕಿಯಾಗಿ ಮೂರು ಕಾಡಾನೆಗಳು ಮೃತಪಟ್ಟಿವೆ, ಜನರ ಹಾಗೂ ಕಾಡಾನೆಗಳ ಹಿತದೃಷ್ಟಿಯಿಂದ ಹೆಚ್ಚಿನ ಆರ್ ಆರ್ ಟಿ ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂದು ಜನರು ಒತ್ತಾಯ ಮಾಡಿದ್ದಾರೆ.

ತಾಯಿ ಮತ್ತು ಮರಿಯನ್ನು ಒಂದಾಗಿಸಿದ ಅರಣ್ಯ ಇಲಾಖೆ
ತಾಯಿಯಾನೆಯ ಗುಂಪಿನಿಂದ ಬೇರೆಯಾಗಿದ್ದ ಮರಿಯಾನೆಯನ್ನು ಅರಣ್ಯಇಲಾಖೆಯ ಅಧಿಕಾರಿಗಳು ಒಂದುಗೂಡಿಸಿ ಮಾನವೀಯತೆ ಮೆರೆದಿದ್ದಾರೆ. ಸಕಲೇಶಪುರ ತಾಲೂಕಿನ ಬೈಕೆರೆ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ಕಾಡಾನೆಯೊಂದು ಎರಡು ಮೂರು ದಿನಗಳ ಹಿಂದೆಯಷ್ಟೇ ಮರಿಹಾಕಿದ್ದು, ಕಾಡಾನೆಗಳ ಹಿಂಡಿನಲ್ಲಿ ವೇಗವಾಗಿ ಸಾಗಲು ಸಾಧ್ಯವಾಗದೇ ಆ ಕಾಡಾನೆ ಮರಿ ಒಂಟಿಯಾಗಿತ್ತು. ಒಂಟಿಯಾಗಿ ನಿಂತಿದ್ದ ಮರಿಯನ್ನು ಸಲಹಿ ಮತ್ತೆ ತಾಯಿ ಆನೆ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಿಟ್ಟಿದ್ದಾರೆ. ಕಾಡಾನೆಗಳ ಹಿಂಡು ಇರೋ ಅಣತಿ ದೂರಕ್ಕೆ ಮರಿಯನ್ನು ಕರೆದೊಯ್ದಿದ್ದಾರೆ, ಕೂಡಲೇ ಮರಿಯನ್ನು ತಾಯಿಯಾನೆ ತನ್ನ ಬಳಿ ಕರೆಯೊಯ್ದಿದೆ. ಇನ್ನು ಬೈಕೆರೆ ಗ್ರಾಮದ ಬಳಿಯೇ 40 ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು, ಸುತ್ತಮುತ್ತಲ ಜನರಿಗೆ ಆತಂಕ ಮನೆಮಾಡಿದೆ.

ಕಾಡಾನೆ ಸಮಸ್ಯೆಗ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯ
ಕಳೆದ ವಾರವಷ್ಟೇ ಕಾಡಾನೆಗೆ ಖೆಡ್ಡಾ ತೋಡಿ, ಕಾಡಾನೆಗಳನ್ನು ಖೆಡ್ಡಾಕ್ಕೆ ಬೀಳಿಸುವ ಮೂಲಕ ಆಕ್ರೋಶದ ಪ್ರತಿಭಟನೆಯನ್ನು ನಡೆಸಿದ್ದ ಜನರು, ಕಾಡಾನೆಗಳಿಂದ ಶಾಶ್ವತ ಪರಿಹಾರಕ್ಕೆ ಎಲ್ಲಾ ಮಾದರಿಯ ಚಳುವಳಿಗಳನ್ನೂ ನಡೆಸಿದ್ದಾರೆ. ಆದರೆ ಅಧಿಕಾರಿಗಳಿಂದ ಹಾಗೂ ಜನಪ್ರತಿನಿಧಿಗಳಿಂದ ಮೂಗಿಗೆ ತುಪ್ಪ ಸವರುವ ಕೆಲಸ ಮಾತ್ರ ಬಿಟ್ಟರೆ ಅದಕ್ಕೆ ಪರಿಹಾರದ ಕ್ರಮ ಮಾತ್ರ ಆಗಿಲ್ಲ ಎನ್ನುವುದು ಜಿಲ್ಲೆಯ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.












Click it and Unblock the Notifications