Get Updates
Get notified of breaking news, exclusive insights, and must-see stories!

ಹಾಸನ: ಭಸ್ಮಾಸುರರಂತಾಗದೆ ರೈತರ ಹಿತವನ್ನು ಕಾಯುವಂತವರಾಗಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಕಿವಿಮಾತು

ಹಾಸನ ನವೆಂಬರ್ 17: ಜಿಲ್ಲೆಯಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ಮುಗಿದಿದೆ. ಆದರೆ, ರೈತರ ಒಟ್ಟು ಜಮೀನಿನ ವಿಸ್ತೀರ್ಣದ ಮಾಹಿತಿ ನಿಖರವಾಗಿ ನಮೂದಿಸಲಾಗಿಲ್ಲ. ಎರಡು ತಿಂಗಳ ಹಿಂದೆಯೇ ಈ ಬಗ್ಗೆ ಖಡಕ್ ಸೂಚನೆ ನೀಡಿದ್ದರೂ ಸರ್ಕಾರದ ಸೂಚನೆ ಪಾಲಿಸಲು ನಿಮಗೇನು ಕಷ್ಟ? ಎಂದು ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದರು.

ಹಾಸನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, "ಬರ ಪರಿಹಾರದ ಹಣ ರೈತರಿಗೆ ಆನ್ಲೈನ್ ಮೂಲಕವೇ ತಲುಪಲಿದೆ. "ಫ್ರೂಟ್ಸ್" ತಂತ್ರಾಂಶದಲ್ಲಿ ರೈತರ ಸಂಪೂರ್ಣ ಜಮೀನಿನ ಒಟ್ಟು ವಿಸ್ತೀರ್ಣ ನಮೂದಿಸಿದರೆ ಮಾತ್ರ ಅವರಿಗೆ ನ್ಯಾಯಯುತ ಪರಿಹಾರ ತಲುಪಲಿದೆ.

minister-krishna-byre-gowda-questioned-hassan-officials

ಆದರೆ ಹಾಸನದಲ್ಲಿ ಬೆಳೆ ಸಮೀಕ್ಷೆ ನಡೆದಿದ್ದರು ರೈತರ ಜಮೀನಿನ ಒಟ್ಟು ವಿಸ್ತೀರ್ಣದ ಮಾಹಿತಿ ಫ್ರೂಟ್ಸ್ ತಂತ್ರಾಂಶದಲ್ಲಿ ಸಂಪೂರ್ಣವಾಗಿ ನಮೂದಿಸಲಾಗಿಲ್ಲ ಏಕೆ ? ಸರ್ಕಾರದ ಸೂಚನೆ ಪಾಲಿಸಲೂ ನಿಮಗೆ ಕಷ್ಟವೇ?" ಎಂದು ಅಧಿಕಾರಿಗಳ ವಿರುದ್ಧ ಅವರು ಆಕ್ರೋಶ ಹೊರಹಾಕಿದರು.

ಮುಂದುವರೆದು, "ಗ್ರಾಮ ಆಡಳಿತ ಅಧಿಕಾರಿಗೆ ಆತನ ಅಧಿಕಾರದ ವ್ಯಾಪ್ತಿಯಲ್ಲಿ ಯಾವ ರೈತನಿಗೆ ಎಲ್ಲಿ.. ಎಷ್ಟು ಏಕರೆ ಜಮೀನಿದೆ? ಎಂಬ ಕನಿಷ್ಟ ಮಾಹಿತಿ ಇದ್ದೇ ಇರುತ್ತದೆ.‌ ಅದನ್ನು ಮತ್ತೆ ರೈತನಲ್ಲಿ ಕೇಳಿ ತಂತ್ರಾಂಶದಲ್ಲಿ ನಮೂದಿಸಲು ಕಷ್ಟವೇಕೆ?" ಎಂದು ಅಸಮಾಧಾನ ಹೊರಹಾಕಿದರು.

"ಅಧಿಕಾರಿಗಳು ರೈತರ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು ನಮೂದಿಸದಿದ್ದರೆ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಸಾಧ್ಯವಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಮಳೆ ಇಲ್ಲದ ಕಾರಣ ರೈತರು ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ. ಹೀಗಾಗಿ ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಮುಂದಿನ 10 ದಿನಗಳ ಒಳಗಾಗಿ ಅಧಿಕಾರಿಗಳು ತ್ವರಿತ ಗತಿಯಲ್ಲಿ ರೈತರ ಜಮೀನಿನ ನಿಖರ ಮಾಹಿತಿಯನ್ನು ನಮೂದಿಸಿ, ಅಧಿಕಾರಿಗಳು ಭಸ್ಮಾಸುರರಾಗದೆ ರೈತರ ಹಿತ ಕಾಯುವಂತಾಗಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಕುಡಿಯುವ ನೀರು-ಮೇವಿನ‌ ಬಗ್ಗೆ ಎಚ್ಚೆತ್ತುಕೊಳ್ಳಿ:

ಹಾಸನ ಜಿಲ್ಲೆಯಲ್ಲಿ ಎಲ್ಲೇ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು, ಈಗಲೇ ಟೆಂಡರ್ ಮಾಡಿ ಮುಂಜಾಗ್ರತೆ ವಹಿಸಿ. ಇದೇ ಕಾರಣಕ್ಕೆ ಪ್ರತೀ ತಾಲೂಕಿನಲ್ಲೂ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಅನ್ನೂ ರಚಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಿಳಿಸಿದರು.

ಕುಡಿಯುವ ನೀರಿನ‌ ಸಮಸ್ಯೆ ನೀಗಿಸಲು ಟ್ಯಾಂಕರ್ ಒಂದೇ ಪರಿಹಾರವಲ್ಲ. ಬದಲಿಗೆ ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆಗೆ ಪಡೆದು ನೀರಿನ ಸಮಸ್ಯೆ ಎಲ್ಲೇ ಕಂಡರು 24 ಗಂಟೆಯ ಒಳಗಾಗಿ ನೀರು ಪೂರೈಸುವಂತಿರಬೇಕು. 15 ದಿನಗಳಲ್ಲಿ ಬಿಲ್ ಗೆ ಹಣ ಪಾವತಿ ಮಾಡಬೇಕು. ಮೇವಿನ ವಿಚಾರದಲ್ಲೂ ಮುಂಜಾಗ್ರತಾ ತಯಾರಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.

minister-krishna-byre-gowda-questioned-hassan-officials

25 ವರ್ಷಗಳಿಂದ ಬಾಕಿ ಉಳಿದ ಬಗರ್ ಹುಕುಂ ಅರ್ಜಿ: ಸಚಿವರ ಆಕ್ರೋಶ

ವಿಲೇವಾರಿಯಾಗದ ಬಗರ್ ಹುಕುಂ ಅರ್ಜಿಗಳ ಬಗ್ಗೆ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ ಅವರು, "ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಹಾಸನದಲ್ಲಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ನಮೂನೆ 53ರ ಅಡಿಯಲ್ಲೇ ಸುಮಾರು 20,000 ಅರ್ಜಿಗಳು ಬಾಕಿ ಇವೆ. ಇಡೀ ರಾಜ್ಯದಲ್ಲಿ 53 ನಮೂನೆಯ ಅರ್ಜಿ ಈ ಮಟ್ಟದಲ್ಲಿ ಎಲ್ಲೂ ಬಾಕಿ ಉಳಿದಿಲ್ಲ. ರಾಜ್ಯದ ಮೂರನೇ ಒಂದು ಭಾಗ ಹಾಸನದಲ್ಲೇ ಬಾಕಿ ಇದೆ. ಅದರಲ್ಲೂ ಅರಕಲಗೋಡು ತಾಲೂಕಲ್ಲೇ ಹೆಚ್ಚು ಬಾಕಿ ಇದೆ. ಇದಕ್ಕೆ ಕಾರಣ ಏನು? ಎಂದು ಸಚಿವರು ಪ್ರಶ್ನಿಸಿದರು.

1998 ರಲ್ಲೇ ನಮೂನೆ 53 ರ ಅರ್ಜಿ ಕರೆಯಲಾಗಿತ್ತು. 25 ವರ್ಷ ಆದ್ರೂ ಈ ಅರ್ಜಿಗಳು ಇನ್ನೂ ವಿಲೇವಾರಿ ಆಗಿಲ್ಲ ಅಂದ್ರೆ ಏನರ್ಥ? ಎಂದು ಕಿಡಿಕಾರಿದ ಅವರು, ಅಧಿಕಾರಿಗಳಿಗೆ ಕಂದಾಯ ಇಲಾಖೆಯ ಗಂಧ ಗಾಳಿಯೂ ಗೊತ್ತಿಲ್ಲ ಎಂಬುದು ಇದರಿಂದ ಖಚಿತವಾಗುತ್ತಿದೆ " ಎಂದು ಅಸಮಾಧಾನ ಹೊರಹಾಕಿದರು.

ನಮೂನೆ‌ 57 ರ ಅರ್ಜಿಯೂ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 1 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಮುಂದಿನ ಒಂದು ವರ್ಷದಲ್ಲಿ ಈ ಎಲ್ಲಾ ಅರ್ಜಿಗಳೂ ವಿಲೇವಾರಿ ಆಗಬೇಕು. ಪ್ರತಿ ವಾರದ ಪ್ರಗತಿಯು ಆ್ಯಪ್ ನಲ್ಲಿ ಅಪ್ಡೇಟ್ ಆಗಬೇಕು. ಇಲ್ಲದಿದ್ದರೆ ತಹಶೀಲ್ದಾರ್ ಗಳಿಗೆ ನೋಟೀಸ್ ನೀಡಲಾಗುತ್ತದೆ" ಎಂದು ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಸಿದರು.

"ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ನಿಜಕ್ಕೂ ಉಳುಮೆಯಲ್ಲಿ ತೊಡಗಿರುವ ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಬೇಕು. ಆದರೆ, ಬಗರ್ ಹುಕುಂ ಅಡಿಯಲ್ಲಿ ಗೋಮಾಳ ಜಮೀನನ್ನು ಮಂಜೂರು ಮಾಡಬಾರದು" ಎಂದು ಅವರು ತಾಕೀತು ಮಾಡಿದರು.

ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಆ್ಯಪ್

ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸಹ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಅಲ್ಲದೆ, ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ.

minister-krishna-byre-gowda-questioned-hassan-officials

ಹೀಗಾಗಿ ಬಗರ್ ಹುಕುಂ ತಂತ್ರಾಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ನ್ಯಾಯಸಮ್ಮತವಾಗಲಿದೆ. ಅಲ್ಲದೆ, ಶೀಘ್ರ ಪ್ರಕ್ರಿಯೆಗೂ ಈ ಆ್ಯಪ್ ಸಹಕಾರಿಯಾಗಲಿದೆ. ಶೀಘ್ರದಲ್ಲೇ ಈ ಆ್ಯಪ್ ಅಧಿಕಾರಿಗಳ ಕೈಸೇರಲಿದೆ. ಈ ಆ್ಯಪ್ ಸಹಾಯದೊಂದಿಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ಬಹರ್ ಹುಕುಂ ಅರ್ಜಿ ವಿಲೇವಾರಿಗೊಳಿಸಬಹುದು.

ಅಲ್ಲದೆ, ಅರ್ಜಿ ವಿಲೇವಾರಿಯಾದ ನಂತರ ಅರ್ಹ ಫಲಾನುಭವಿಗಳಿಗೆ ಇ-ಸಾಗುವಳಿ ಚೀಟಿಯನ್ನೂ ತಂತ್ರಾಂಶದ ಮೂಲಕವೇ ಒದಗಿಸಬಹುದು. ಮಂಜೂರಾದ ಪ್ರಕರಣಗಳಲ್ಲಿ ಕಾವೇರಿ 2.0 ಮೂಲಕ ನೋಂದಣಿ ಮಾಡಿಸಿಕೊಡಲು ಕ್ರಮವಹಿಸಲಾಗುವುದು. ಇದರಿಂದ ಜನರಿಗೂ ಅನುಕೂಲವಾಗಲಿದೆ. ಈ ಕ್ರಮದಿಂದಾಗಿ ಮುಂದಿನ ದಿನಗಳಲ್ಲಿ ಭೂ ಮಂಜೂರಾತಿ ತಕರಾರು ಪ್ರಕರಣಗಳನ್ನು ತಡೆಯಬಹುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಕಂದಾಯ ಗ್ರಾಮ ಅಂತಿಮ ಪಟ್ಟಿ ಸಿದ್ದತೆಗೆ ವಾರದ ಗಡುವು

ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು.

ಸಾರ್ವಜನಿಕರ 30 ವರ್ಷಗಳ ಬೇಡಿಕೆಗೆ ಅನುಗುಣವಾಗಿ 2013ರ ಕಾಂಗ್ರೆಸ್ ಸರ್ಕಾರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ನಿರ್ಧಾರ ತೆಗದುಕೊಂಡಿದ್ದರು. ಆದರೆ, ಹಾಸನದಲ್ಲಿ ಈ ಸಂಬಂಧ ಸಮಾಧಾನಕರ ಕೆಲಸ ಆಗದಿರುವುದು ವಿಷಾಧನೀಯ. ಹೀಗಾಗಿ ಶೀಘ್ರದಲ್ಲಿ ಕಾನೂನು ಪ್ರಕಾರ ಕಂದಾಯ ಗ್ರಾಮ ಘೋಷಿಸಿ ಹಕ್ಕುಪತ್ರ ನೀಡಿ ಎಂದರು ಸೂಚಿಸಿದರು.

ಹಾಸನ ಜಿಲ್ಲೆಯಲ್ಲಿ ಒಟ್ಟು 54 ಕಂದಾಯ ಗ್ರಾಮಗಳು ರಚನೆಯಾಗಬೇಕಿತ್ತು. ಆದರೆ, ಈ ಪೈಕಿ 15 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ಸಾಧ್ಯವಿಲ್ಲ‌ ಎಂದು ಅಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ. ಈವರೆಗೆ ಕೇವಲ 666 ಹಕ್ಕುಪತ್ರಗಳು ಮಾತ್ರ ನೀಡಲಾಗಿದ್ದು 1,500 ಕ್ಕೂ ಅಧಿಕ ಹಕ್ಕುಪತ್ರ ನೀಡಬೇಕಿದೆ. ಇದರಿಂದ ಬಡವರು ಸಂಕಷ್ಟಕ್ಕೆ ಒಳಗಾಗಿದ್ದು ಮುಂದಿನ ಒಂದು ವಾರದಲ್ಲಿ ಯಾವೆಲ್ಲಾ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಬಹುದು ಎಂದು ಇಲಾಖೆಗೆ ಪಟ್ಟಿ ಕೊಡಿ. ಜನವರಿ 15 ರ ಒಳಗಾಗಿ ಎಲ್ಲರಿಗೂ ಹಕ್ಕುಪತ್ರ ನೀಡಿ ಎಂದು ಗಡುವು ನೀಡಿದರು.

ಇದೇ ಸಂದರ್ಭದಲ್ಲಿ ಆಧಾರ್ ಮತ್ತು ಆರ್ಟಿಸಿ ಲಿಂಕ್ ಮಾಡುವ ಬಗ್ಗೆಯೂ ಅಧಿಕಾರಿಗಳು ಗಮನವಹಿಸಬೇಕು ಎಂದು ಸಚಿವರು ಸೂಚಿಸಿದರು. ಈ ಕ್ರಮದಿಂದ ಸಣ್ಣ- ಅತಿಸಣ್ಣ ರೈತರ ನೈಜ ಸಂಖ್ಯೆ ಲಭ್ಯವಾಗುತ್ತದೆ. ಈ ಮೂಲಕ‌ ಕೇಂದ್ರದಿಂದ ಹೆಚ್ಚಿನ ಬರ ಪರಿಹಾರ ಪಡೆಯುವುದೂ ಸಾಧ್ಯವಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಜಮೀನು ಉಳಿಸಲು ಬೀಟ್ ವ್ಯವಸ್ಥೆಗೆ ಕರೆ

ಹಾಸನದ ತಾಲೂಕು ಕಚೇರಿ ಡೇಟಾದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ 1.62 ಲಕ್ಷ ಎಕರೆ ಸರ್ಕಾರಿ ಜಮೀನು ಇರುವುದಾಗಿ ನಮೂದಿಸಲಾಗಿದೆ. ಭೂಮಿ ತಂತ್ರಾಂಶದ ಪ್ರಕಾರ 1.23 ಲಕ್ಷ ಎಕರೆ ಭೂಮಿ ಇದೆ ಎಂಬುದಾಗಿ ಮಾಹಿತಿ ಇದೆ. ಆದರೆ, ಅಧಿಕಾರಿಗಳು 90 ಸಾವಿರ ಎಕರೆ ಜಮೀನು ಮಾತ್ರ ಇರುವುದಾಗಿ ಗುರುತಿಸಿದ್ದಾರೆ. ಇದರಲ್ಲಿ ನಿಜವಾದ ದಾಖಲಾತಿ ಯಾವುದು? ಎಂದು ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದರು.

ಅಲ್ಲದೆ, ಈ ವೇಳೆ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ ಸಚಿವರು, "ಹಾಸನ ಜಿಲ್ಲಾ ಸರಹದ್ದಿನಲ್ಲಿ ನಿಖರವಾಗಿ ಎಷ್ಟು ಸರ್ಕಾರಿ ಜಮೀನು ಇದೆ? ಎಸ್ಸಿ-ಎಸ್ಟಿ ಭೂಮಿ ಎಷ್ಟಿದೆ? ಈ ಪೈಕಿ ಎಷ್ಟು ಒತ್ತುವರಿಯಾಗಿದೆ ಎಂಬ ಕುರಿತು ಅಧಿಕಾರಿಗಳು ಸಂಪೂರ್ಣ ಮಾಹಿತಿ ಕಲೆಹಾಕಬೇಕು, ಈ ಭೂಮಿಯನ್ನು ರಕ್ಷಿಸುವ ಕೆಲಸ ಆಗಬೇಕು" ಎಂದರು.

ಸರ್ಕಾರಿ ಭೂಮಿಯನ್ನು ಗುರುತಿಸಿದ ನಂತರ ಮೂರು ತಿಂಗಳಿಗೊಮ್ಮೆ ಸರ್ಕಾರಿ ಭೂಮಿಗಳಿಗೆ ಭೇಟಿ ಕೊಟ್ಟು ಜಮೀನು ಒತ್ತುವರಿ ಆಗಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಈ ಬೀಟ್ ವ್ಯವಸ್ಥೆಯನ್ನು ಎಲ್ಲ ಅಧಿಕಾರಿಗಳೂ ಪಾಲಿಸಬೇಕು. ಈ ಮಾಹಿತಿಯನ್ನು ನಮೂದಿಸಲು "ಬೀಟ್" ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದು, ಶೀಘ್ರದಲ್ಲಿ ಅಧಿಕಾರಿಗಳ ಬಳಕೆಗೆ ಮುಕ್ತವಾಗಲಿದೆ ಎಂದು ತಿಳಿಸಿದರು.

ಹೈಕೋರ್ಟ್ ಕೇಸ್ಗಳ ಬಗ್ಗೆ ಅಸಡ್ಡೆ: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಚಿವ ಕೃಷ್ಣ ಬೈರೇಗೌಡ

ಹಾಸನ‌ ಜಿಲ್ಲೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ 1272 ಪ್ರಕರಣಗಳಿವೆ. ಈ ಪೈಕಿ ಶೇ.70 ರಷ್ಟು ಪ್ರಕರಣಗಳಲ್ಲಿ ತೆಗೆದುಕೊಂಡಿರು ಕ್ರಮ ಶೂನ್ಯ. ಅಲ್ಲದೆ, ನ್ಯಾಯಾಲಯದಲ್ಲಿ ವಕಾಲತ್ತನ್ನೂ ಸಹ ಸಲ್ಲಿಸುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು.

ಹಾಸನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, "ಹಾಸನ ಜಿಲ್ಲೆಯಿಂದ ಅಧಿಕ ಸಂಖ್ಯೆಯ ಪ್ರಕರಣಗಳು ಹೈಕೋರ್ಟ್ ನಲ್ಲಿವೆ. ಆದರೆ, ತಹಶಿಲ್ದಾರರು ಹಾಗೂ ಎಸಿಗಳು ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ.‌ಪರಿಣಾ‌ಮ ಹೈಕೋರ್ಟ್ ಕಂದಾಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ ಎಂದು ಸಚಿವರು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಅಸಮಾಧಾನ ಹೊರಹಾಕಿದರು.

ಅಲ್ಲದೆ, ಈ ಬಗ್ಗೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ ಸಚಿವರು, "ನೀವು ಮಾಡುವ ಕೆಲಸಕ್ಕೆ ಸರ್ಕಾರದ ಜಮೀನು ಖಾಸಗಿಯವರ ಪಾಲಾಗಲು ನಾವು ಸಹಿ ಹಾಕಬೇಕ? ಎಂದು ಕಿಡಿಕಾರಿದರು. ಮುಂದುವರೆದು, ತಹಶಿಲ್ದಾರರು ಈಗಲಾದರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು, ಹೈಕೋರ್ಟ್ ನಲ್ಲಿರುವ ಎಲ್ಲಾ ಪ್ರಕರಣಗಳಲ್ಲೂ ವಕಾಲತ್ತು ಸಲ್ಲಿಸಬೇಕು, ಮೂರು ತಿಂಗಳಲ್ಲಿ ಪ್ರಗತಿ ಕಾಣದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಸಿದರು.

ಇ- ಆಫೀಸ್ ಬಳಕೆಗೆ ತಾಕೀತು!

ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೂ ಇ-ಆಫೀಸ್ ಬಳಸುತ್ತಿದ್ದಾರೆ. ಆದರೂ, ಹಾಸನ ತಾಲೂಕು ಕಚೇರಿ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಗಳಲ್ಲಿ ಇ-ಆಫೀಸ್ ಬಳಸುತ್ತಿಲ್ಲ. ಹಾಗಾದ್ರೆ ಸಚಿವರ ಮಾತಿಗೆ ಬೆಲೆ ಇಲ್ವ? ನಮ್ಮ ಸೂಚನೆಗಳನ್ನು ಯಾರೂ ಪಾಲಿಸೋದಿಲ್ವ?" ಎಂದು ಸಚಿವರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಎಲ್ಲಾ ಕಡತಗಳ ವಿಲೇವಾರಿಯೂ ಇ-ಆಫೀಸ್ ಮೂಲಕವೇ ನಡೆಯಬೇಕು ಎಂದು ತಿಳಿಸಿದರು.

ತಾಲೂಕು-ನಾಡ ಕಚೇರಿಗೆ‌ ದಿಢೀರ್ ಭೇಟಿ ಪರಿಶೀಲನೆ:

ಹಾಸನ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಮುನ್ನವೇ ಸಚಿವ ಕೃಷ್ಣ ಬೈರೇಗೌಡ ಅವರು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಕಚೇರಿ ಹಾಗೂ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಉದಯಪುರ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ತುರುವೇಕೆರೆ ತಾಲೂಕು ಕಚೇರಿಯಲ್ಲಿ ಜನರನ್ನು ಅನಗತ್ಯವಾಗಿ ಕಚೇರಿಗೆ ಅಲೆಸುತ್ತಿದ್ದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಅಲ್ಲದೆ, ಪ್ರಕರಣವೊಂದರಲ್ಲಿ ಕೃಷಿ ಜಮೀನಿಗೆ ರಸ್ತೆ ಗುರುತಿಸಲು 11 ತಿಂಗಳ ಕಾಲಾವಕಾಶ ತೆಗೆದುಕೊಂಡ ಕಸಬ ಹೋಬಳಿ ರೆವೆನ್ಯೂ ಇನ್ಸ್ಪೆಕ್ಟರ್ ಮಂಜುನಾಥ್ ಗೆ ಸ್ಥಳದಲ್ಲಿಯೇ ನೊಟೀಸ್ ಜಾರಿಮಾಡಲಾಯಿತು. ಇ-ಆಫೀಸ್ ನಲ್ಲೂ ಹಲವಾರು ಫೈಲ್ಗಳನ್ನು ಉಳಿಸಿಕೊಂಡಿದ್ದಕ್ಕೆ ತಹಶಿಲ್ದಾರರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.

ಉದಯಪುರ ನಾಡಕಚೇರಿಗೂ ಭೇಟಿ ನೀಡಿದ ಸಚಿವರು, ಗ್ರಾಮ ಲೆಕ್ಕಿಗರು ಹಾಗೂ ಉಪ ತಹಶಿಲ್ದಾರರಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟರು.‌ ಆದರೆ ಸಚಿವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಧಿಕಾರಿಗಳು ತಡವರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+