ಶ್ರೀರಾಮ ದೋಷದಿಂದ ಮುಕ್ತಿಗೊಂಡ ಕ್ಷೇತ್ರ ಯಾವುದು ಗೊತ್ತಾ? ಕರ್ನಾಟಕದ ಈ ಸ್ಥಳದ ಪರಿಚಯ ಇಲ್ಲಿದೆ
ಹಾಸನ, ಜನವರಿ 20: ಶ್ರೀರಾಮ ತನ್ನ ಪಾದಸ್ಪರ್ಶದಿಂದ ಹಲವು ಸ್ಥಳಗಳನ್ನು ಪರಮ ಪವಿತ್ರ ಕ್ಷೇತ್ರವಾಗಿ ಮಾಡಿದ್ದು ಅದರಲ್ಲೊಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರವಾಗಿದೆ. ಕಾವೇರಿ ನದಿಯ ದಡದಲ್ಲಿರುವ ಈ ಸ್ಥಳ ಮೂರು ಯುಗಗಳ ನಂಟು ಹೊಂದಿದ್ದು, ಪಾಪಕಳೆಯುವ ಪುಣ್ಯ ಸ್ಥಳವಾಗಿ ಭಕ್ತರ ಸೆಳೆಯುತ್ತಾ ಬಂದಿದೆ.
ಶ್ರೀರಾಮನು ರಾವಣನನ್ನು ಸಂಹಾರ ಮಾಡಿದ ದೋಷವನ್ನು ಇಲ್ಲಿರುವ ಉದ್ಭವ ಶಿವಲಿಂಗವನ್ನು ಪೂಜಿಸುವ ಮೂಲಕ ಕಳೆದುಕೊಂಡ ಎಂದು ಹೇಳಲಾಗಿದ್ದು, ಆ ಕಾರಣಕ್ಕಾಗಿಯೇ ರಾಮನಾಥಪುರ ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ. ಜತೆಗೆ ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾಪುರ ಎಂಬ ಹೆಸರಿನಿಂದ ಕರೆದರೆ ಕಲಿಯುಗದಲ್ಲಿ ರಾಮನಾಥಪುರವಾಗಿ ಪ್ರಸಿದ್ಧಗೊಂಡಿದೆ.

ಇನ್ನು ಇಲ್ಲಿನ ಕಾವೇರಿ ನದಿಯ ಮಧ್ಯದಲ್ಲಿರುವ ಲಿಂಗವನ್ನು ಆಗಸ್ತ್ಯೇಶ್ವರ ಲಿಂಗವೆಂದು ಕರೆಯಲಾಗುತ್ತಿದೆ. ಲೋಕ ಕಲ್ಯಾಣಕ್ಕಾಗಿ ಪತಿ ಅಗಸ್ತ್ಯರನ್ನು ತೊರೆದು ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಿಂದ ನದಿ ರೂಪದಲ್ಲಿ ಹರಿದ ಕಾವೇರಿಯನ್ನು ಹಿಂಬಾಲಿಸಿ ಬಂದ ಅಗಸ್ತ್ಯರು ಅವಳ ಮೇಲಿನ ವ್ಯಾಮೋಹದಿಂದ ಇಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಿ ಪೂಜಿಸಿದರಂತೆ ಅಗಸ್ತ್ಯರು ಪ್ರತಿಷ್ಠಾಪಿಸಿದ ಲಿಂಗ ಅಗಸ್ತ್ಯಲಿಂಗವೆಂದೇ ಕರೆಯಲ್ಪಡುತ್ತಿದೆ.
ಹೊಯ್ಸಳರ ಕಾಲದ ರಾಮೇಶ್ವರ ದೇಗುಲ
ಕಾಲಾಂತರದಲ್ಲಿ ಶ್ರೀ ವ್ಯಾಸರಾಜರು ಈ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಅಗಸ್ತ್ಯೇಶ್ವರ ದೇಗುಲದ ಬಲಗಡೆ ಹನುಮಂತನನ್ನು ಪ್ರತಿಷ್ಠಾಪಿಸಿದ್ದು, ಅದು ವ್ಯಾಸಾಂಜನೇಯ ಎಂದೇ ಪ್ರಸಿದ್ಧಿ ಹೊಂದಿದೆ. ಇಲ್ಲಿ ಹತ್ತು ಹಲವು ವಿಶೇಷತೆಗಳಿದ್ದರೂ ಶ್ರೀರಾಮನ ಪ್ರಭಾವದಿಂದ ರಾಮನಾಥಪುರ ಖ್ಯಾತಿ ಪಡೆದಿದೆ. ಇಲ್ಲಿ ಹಲವಾರು ದೇಗುಲಗಳಿದ್ದರೂ ರಾಮೇಶ್ವರ ಮತ್ತು ಪಟ್ಟಾಭಿರಾಮ ದೇಗುಲ ಗಮನಸೆಳೆಯುತ್ತವೆ.

ರಾಮೇಶ್ವರ ದೇಗುಲವನ್ನು ಹೊಯ್ಸಳರ ಅರಸ ಮೂರನೆಯ ನರಸಿಂಹನ ಕಾಲ (1235-1292)ದಲ್ಲಿ ಸೋಮದಂಡನಾಯಕ ನಿರ್ಮಿಸಿದ್ದು, ದೇವಾಲಯವು ಹೊಯ್ಸಳ ವಾಸ್ತುಶಿಲ್ಪ ಹೊಂದಿದೆ. ನಕ್ಷತ್ರಾಕಾರದ ಗರ್ಭಗುಡಿ ಹಾಗೂ ಸುಕನಾಸಿ, ಕಲಾಕುಸುರಿಯ ಒಂಬತ್ತು ಅಂಕಣದ ನವರಂಗವು ಮನೋಹರ ಸ್ತಂಭಗಳಿಂದ ಕೂಡಿದೆ. ಹೊಯ್ಸಳ ಲಾಂಛನವು ರಾರಾಜಿಸುತ್ತಿದೆ. ಕಾಲಾನಂತರ ವಿಜಯನಗರ ಅರಸರ ಕಾಲದಲ್ಲಿ ಈ ದೇಗುಲಕ್ಕೆ ಪ್ರಥಮ ಗೋಪುರ ಮತ್ತು ಸುತ್ತಲೂ ಭದ್ರವಾದ ರಕ್ಷಣಾ ತಡೆಗೋಡೆ ಮಂಟಪಗಳನ್ನು ಕಟ್ಟಲಾಯಿತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.
ದೇವಾಲಯವನ್ನು ಪ್ರವೇಶಿಸಿದರೆ, ಒಳಾಂಗಣದಲ್ಲಿ ಮೇಣುಗೋಪಾಲ, ಭೈರವ, ಕೇಶವ, ಸೂರ್ಯ, ಗಣಪತಿ, ಮಹಿಷಮರ್ಧಿನಿ ವಿಗ್ರಹಗಳು ಹಾಗೂ ಗರ್ಭಗುಡಿಯ ದಕ್ಷಿಣಕ್ಕೆ ದಕ್ಷಿಣಾಮೂರ್ತಿ, ಉತ್ತರಕ್ಕೆ ಚಂಡಿಕೇಶ್ವರಮೂರ್ತಿ, ಈಶಾನ್ಯಕ್ಕೆ ಈಶ್ಯಾನೇಶ್ವರ ದೇವರ ಮಂಟಪಗಳನ್ನು ನಿರ್ಮಿಸಿರುವುದು ಕಂಡು ಬರುತ್ತದೆ.

ದ್ರಾವಿಡ ಶೈಲಿಯ ಪಟ್ಟಾಭಿರಾಮ ದೇಗುಲ
ರಾಮೇಶ್ವರ ದೇಗುಲ ಮಾತ್ರವಲ್ಲದೆ ಇಲ್ಲಿ ಪಟ್ಟಾಭಿರಾಮನ ದೇಗುಲವೂ ಇರುವುದು ಮತ್ತೊಂದು ವಿಶೇಷವಾಗಿದೆ. ರಾಮೇಶ್ವರ ದೇಗುಲ ಹೊಯ್ಸಳ ಶೈಲಿಯಲ್ಲಿದ್ದರೆ, ಈ ದೇಗುಲ ದ್ರಾವಿಡ ಶೈಲಿಯಲ್ಲಿರುವುದು ಕಂಡು ಬರುತ್ತದೆ. ಈ ದೇವಾಲಯವನ್ನು 15ನೆಯ ಶತಮಾನದಲ್ಲಿ ವಿಜಯನಗರದರಸರ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿದೆ ಎಂಬುದನ್ನು ಇತಿಹಾಸ ಹೇಳುತ್ತದೆ.
ದೇಗುಲದಲ್ಲಿ ಸುಂದರವಾದ ಶ್ರೀ ಪಟ್ಟಾಭಿರಾಮನ ಮೂರ್ತಿಯಿದ್ದು, ಇದರೊಂದಿಗೆ ಸೀತಾದೇವಿ, ಲಕ್ಷ್ಮಣ, ಭರತ, ಶತೃಘ್ನ ಮತ್ತು ಹನುಮಂತನ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. ಆದಿ ಮೂರ್ತಿ ಶ್ರೀರಾಮ ಕುಳಿತ ಭಂಗಿಯಲ್ಲಿದ್ದು, ಸೀತಾಮಾತೆ ಆತನ ತೊಡೆಯ ಮೇಲೆ ಆಸೀನಳಾಗಿರುವುದನ್ನು ಕಾಣಬಹುದಾಗಿದೆ.
ರಾಮನ ಕಾಡಿದ ಬ್ರಹ್ಮಹತ್ಯಾ ದೋಷ
ರಾಮನಾಥಪುರದಲ್ಲಿ ಇದೆರಡು ದೇಗುಲವಲ್ಲದೆ, ಸುಬ್ರಹ್ಮಣ್ಯ, ಅಗಸ್ತ್ಯೇಶ್ವರ, ಲಕ್ಷಿನರಸಿಂಹ, ವಾಸವಪುರಿ ಆಂಜನೇಯ, ಶ್ರೀ ಪರಕಾಲ ಮಠದ ಹಯಗ್ರೀವಸ್ವಾವ, ಆರ್ಯ ವೈಶ್ಯ ಛತ್ರದಲ್ಲಿ ಕನ್ನಿಕಾಪರವೇಶ್ವರಿ, ವರದಾನ ಬಸವೇಶ್ವರ, ಕಾಲುವೆಯಮ್ಮ, ಲಕ್ಷ್ಮಣೇಶ್ವರ ದೇವಾಲಯಗಳು ಇಲ್ಲಿದ್ದು ದೇಗುಲಗಳ ಸಂಗಮವಾಗಿಯೂ ಭಕ್ತರನ್ನು ಸೆಳೆಯುತ್ತದೆ.
ಇದೆಲ್ಲದರ ನಡುವೆ ರಾಮನಾಥಪುರಕ್ಕೂ ಶ್ರೀರಾಮನಿಗೂ ಇರುವ ನಂಟಿನ ಬಗ್ಗೆ ಪೌರಾಣಿಕ ಕಥೆ ಏನು ಹೇಳುತ್ತದೆ ಎಂಬುದನ್ನು ನೋಡಿದ್ದೇ ಆದರೆ ವನವಾಸದಲ್ಲಿದ್ದಾಗ ಸೀತೆಯನ್ನು ರಾವಣ ಅಪಹರಿಸಿ ಲಂಕೆಯ ಅಶೋಕವನದಲ್ಲಿಡುತ್ತಾನೆ. ಆ ನಂತರ ಲಕ್ಷ್ಮಣ, ಹನುಮಂತ, ಸುಗ್ರೀವ, ವಾನರ ಸಮೇತ ಲಂಕೆಗೆ ಮುತ್ತಿಗೆ ಹಾಕಿದ ಶ್ರೀರಾಮ ರಾವಣ ಸೇರಿದಂತೆ ರಾಕ್ಷಸರನ್ನು ಸಂಹರಿಸಿ ಅಯೋಧ್ಯೆಗೆ ಹಿಂತಿರುಗುತ್ತಾನೆ. ಆದರೆ ರಾವಣನನ್ನು ಕೊಂದ ಹತ್ಯಾದೋಷ ರಾಮನನ್ನು ಕಾಡುತ್ತದೆ.
ರಾಮನಾಥಪುರದಲ್ಲಿ ದೋಷ ಮುಕ್ತನಾದ ರಾಮ
ಬ್ರಹ್ಮಹತ್ಯಾ ದೋಷವನ್ನು ಪರಿಹರಿಸಿಕೊಳ್ಳಲು ಅವತ್ತಿನ ವಾಸವಾಪುರಿ (ರಾಮನಾಥಪುರ) ಸೂಕ್ತ ಸ್ಥಳವಾಗಿದ್ದು, ಅಲ್ಲಿಗೆ ತೆರಳಿ ಶಿವನನ್ನು ಪೂಜಿಸಲು ಕುಲಗುರು ವಶಿಷ್ಟರು ಹೇಳುತ್ತಾರೆ ಅದರಂತೆ ಪರಿವಾರ ಸಹಿತನಾಗಿ ಬಂದ ಶ್ರೀರಾಮನಿಗೆ ಅಗಸ್ತ್ಯ ಮಹರ್ಷಿಗಳು ವಿಹ್ನಿ ಪುಷ್ಕರಣಿಯ ಸಮೀಪದಲ್ಲಿ ಉದ್ಭವಿಸಿರುವ ಶಿವಲಿಂಗದ ಬಗ್ಗೆ ತಿಳಿಸುತ್ತಾರೆ. ಅದರಂತೆ ಪುಷ್ಕರಣಿಯಲ್ಲಿರುವ ಉದ್ಭವ ಶಿವಲಿಂಗವನ್ನು ಪೂಜಿಸಿ ದೋಷದಿಂದ ಮುಕ್ತನಾಗಿ ಶ್ರೀರಾಮ ಅಯೋಧ್ಯೆಗೆ ಹಿಂತಿರುಗಿದ ಎಂದು ಹೇಳಲಾಗಿದೆ. ಅದರಂತೆ ಇಂದಿಗೂ ಇಲ್ಲಿನ ಕಾವೇರಿ ನದಿಯಲ್ಲಿ ಮಿಂದು ರಾಮೇಶ್ವರ ದೇಗುಲದಲ್ಲಿರುವ ರಾಮನ ದರ್ಶನ ಮಾಡಿದರೆ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಇಲ್ಲಿ ಹತ್ತು ಹಲವು ವಿಶೇಷತೆಗಳಿದ್ದು, ಅದರಲ್ಲೊಂದು ವಹ್ನಿ ಪುಷ್ಕರಣಿಯಾಗಿದೆ. ಕಾವೇರಿ ನದಿಯಲ್ಲಿ ಸೃಷ್ಟಿಯಾಗಿರುವ ಮೂರು ಪುಷ್ಕರಣಿ ಪೈಕಿ ಒಂದಾದ ವಹ್ನಿ ಪುಷ್ಕರಣಿ ಇಲ್ಲಿದೆ. ಉಳಿದಂತೆ ಕೆ,ಆರ್.ನಗರದಲ್ಲಿ ಅರ್ಕ ಪುಷ್ಕರಣಿ, ತಮಿಳುನಾಡಿನ ಶ್ರೀರ೦ಗದಲ್ಲಿ ಚ೦ದ್ರಪುಷ್ಕರಣಿಯಿದೆ. ರಾಮನಾಥಪುರವು ಹಾಸನದಿಂದ 49ಕಿ.ಮೀ ದೂರದಲ್ಲಿದ್ದು, ತಾಲೂಕು ಕೇಂದ್ರ ಅರಕಲಗೂಡಿನಿಂದ 19ಕಿ.ಮೀ ಅಂತರದಲ್ಲಿದೆ. ಇಲ್ಲಿಗೆ ಹಾಸನದಿಂದ ಅರಕಲಗೂಡು ಮಾರ್ಗವಾಗಿಯೂ ಕೊಡಗಿನಿಂದ ಕುಶಾಲನಗರ ಹೆಬ್ಬಾಲೆ ಮಾರ್ಗವಾಗಿಯೂ ತೆರಳಬಹುದಾಗಿದೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications