ಹೇಮಾವತಿ ಜಲಾಶಯ ಭರ್ತಿ, ನದಿ ಪಾತ್ರದ ಜನರಿಗೆ ಎಚ್ಚರಿಕೆ
ಹಾಸನ, ಜುಲೈ 13 : ನಾಲ್ಕು ವರ್ಷಗಳ ಬಳಿಕ ಹಾಸನದ ಹೇಮಾವತಿ ಜಲಾಶಯ ಭರ್ತಿಯಾಗಿದೆ. ಶನಿವಾರ ನದಿಗೆ ನೀರನ್ನು ಬಿಡಲು ಅಧಿಕಾರಿಗಳು ತೀರ್ಮಾನಿಸಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ಇಂದ ಇರುವಂತೆ ಸೂಚನೆ ನೀಡಲಾಗಿದೆ.
ಹಾಸನ ತಾಲೂಕಿನ ಗೊರೂರಿನಲ್ಲಿ ಹೇಮಾವತಿ ಜಲಾಶಯವಿದೆ. 2,922 ಅಡಿ ಎತ್ತರದ ಜಲಾಶಯದಲ್ಲಿ ಶುಕ್ರವಾರ ಬೆಳಗ್ಗೆ 2917.41 ಅಡಿ ನೀರಿನ ಸಂಗ್ರವಿದೆ. ಜಲಾಶಯ ಭರ್ತಿಯಾಗಲು ಕೇವಲ 5 ಅಡಿ ಬಾಕಿ ಇದ್ದು, ನೀರನ್ನು ನದಿಗೆ ಬಿಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಹೇಮಾವತಿ ಜಲಾಶಯದಲ್ಲಿ 37.103 ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದಾಗಿದೆ. ಸದ್ಯ ಜಲಾಶಯದಲ್ಲಿ 32.79 ಟಿಎಂಸಿ ನೀರಿದೆ. 26,477 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಶನಿವಾರ ನದಿಗೆ ನೀರು ಬಿಡಲು ನಿರ್ಧರಿಸಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಜಲಾಶಯ ಭರ್ತಿ ಆಗಿರುವುದರಿಂದ ಶೆಟ್ಟಿಹಳ್ಳಿ ಚರ್ಚ್ ಸಂಪೂರ್ಣವಾಗಿ ಜಲಾವೃತವಾಗಿದೆ. 4 ವರ್ಷಗಳಿಂದ ಜಲಾಶಯ ಭರ್ತಿ ಆಗಿರಲಿಲ್ಲ. ಈ ಬಾರಿ ಉತ್ತಮ ಮಳೆಯಿಂದಾಗಿ ಜಲಾಶಯ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.
ಕಾವೇರಿ ನದಿ ಪಾತ್ರದ ಪ್ರಮುಖ ಜಲಾಶಯ ಹೇಮಾವತಿ. ಜಲಾಶಯದಿಂದ ನೀರನ್ನು ಹೊರಬಿಟ್ಟರೆ ಅದು ಕೆಆರ್‌ಎಸ್ ತಲುಪಲಿದೆ. ಆದ್ದರಿಂದ, ಕೆಎಆರ್‌ಗೆ ಒಳಹರಿವು ಇನ್ನಷ್ಟು ಹೆಚ್ಚಾಗಲಿದೆ. ಸುಮಾರು 7 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಜಲಾಶಯ ಒಳಗೊಂಡಿದೆ.
ಹೇಮಾವತಿ ಜಲಾಶಯ ಹಾಸನ ಜಿಲ್ಲೆಯಲ್ಲಿದ್ದರೂ ಮಂಡ್ಯ, ಮೈಸೂರು ಜಿಲ್ಲೆಗಳ 6,720 ಹೆಕ್ಟರ್ ಕೃಷಿ ಭೂಮಿಗೆ ನೀರು ಒದಗಿಸುತ್ತದೆ. ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಹೆಚ್ಚಾಗಿ ಭತ್ತ ಬೆಳೆಯುತ್ತಾರೆ. ನಾಲ್ಕು ವರ್ಷದಿಂದ ನೀರಿಲ್ಲದೇ ಜನರು ಪರ್ಯಾಯ ಬೆಳೆಗಳತ್ತ ಗಮನ ಹರಿಸಿದ್ದರು.












Click it and Unblock the Notifications