Shiradi Ghat: ಶಿರಾಡಿ ಘಾಟ್‌ನಲ್ಲಿ ಮತ್ತೆ ವಾಹನ ಸಂಚಾರ ಬಂದ್
ಹಾಸನ, ಮಾರ್ಚ್ 01: ಕರಾವಳಿ ಮತ್ತು ಬೆಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ-75. ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಗುಡ್ಡ ಕುಸಿತವಾಗಿ ಸಂಚಾರ ಬಂದ್ ಆಗುತ್ತದೆ. ಆದರೆ ಈಗ ಬೇಸಿಗೆಯಲ್ಲಿ ಸುಮಾರು 3 ತಿಂಗಳ ಕಾಲ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಬಂದ್ ಮಾಡಲು ಚಿಂತನೆ ನಡೆಸಲಾಗಿದೆ. ರಾಜ್ಯ ಸರ್ಕಾರದ ಒಪ್ಪಿಗೆ ಸಿಕ್ಕಿದರೆ ಮಾರ್ಚ್‌ನಿಂದ ಜೂನ್ ತನಕ ಶಿರಾಡಿ ಘಾಟ್ ರಸ್ತೆ ಸಂಪೂರ್ಣ ಬಂದ್ ಆಗಲಿದೆ.
ಬೆಂಗಳೂರು-ಮಂಗಳೂರು ನಡುವಿನ ಚತುಷ್ಪಥ ಹೆದ್ದಾರಿ ಯೋಜನೆ ಕುಂಟುತ್ತಾ ಸಾಗಿದೆ. ಇದು ವಾಹನ ಸವಾರರ ಆಕ್ರೋಶಕ್ಕೂ ಕಾರಣವಾಗಿದೆ. ಜೂನ್ 30ರೊಳಗೆ ಯೋಜನೆ ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗಡುವು ನೀಡಲಾಗಿದೆ. ಆದ್ದರಿಂದ ವಾಹನ ಸಂಚಾರ ಬಂದ್ ಮಾಡಿ ಕಾಮಗಾರಿ ಪೂರ್ಣಗೊಳಿಸುವ ಚಿಂತನೆ ಇದೆ.

ಚತುಷ್ಪಥ ಕಾಮಗಾರಿಯನ್ನು ಪೂರ್ಣಗೊಳಿಸಲು ಶಿರಾಡಿ ಘಾಟ್ ರಸ್ತೆಯನ್ನು ಕನಿಷ್ಠ ಒಂದು ತಿಂಗಳು ಬಂದ್ ಮಾಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಸನ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಜಿಲ್ಲಾಡಳಿತ ರಾಜ್ಯ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ.
ಸಂಸದರ ಪರಿಶೀಲನೆ: ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಎನ್‌ಹೆಚ್-75 ಹಾಸನ-ಮಾರನಹಳ್ಳಿ ರಸ್ತೆ 45 ಕಿ. ಮೀ. ತನಕ ನಡೆಯುತ್ತಿರುವ ರಸ್ತೆ ಮತ್ತು ಇನ್ನಿತರ ಕಾಮಗಾರಿಗಳನ್ನು ವೀಕ್ಷಿಸಿದರು. ಮುಂದಿನ 3-4 ತಿಂಗಳ ಒಳಗೆ ಹಾಸನದಿಂದ ಮಾರನಹಳ್ಳಿ ತನಕದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
ಜೂನ್ ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಹಿಂದೆ ಭೂಕುಸಿತ ಉಂಟಾದ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರ ಕುರಿತು ಪರಿಶೀಲನೆ ನಡೆಸಿದರು. ಜೂನ್ 30ರೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗ ಹಾಕಿಕೊಂಡಿರುವ ಗಡುವಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾದರೆ ಶಿರಾಡಿ ಘಾಟ್ ರಸ್ತೆಯನ್ನು ಮತ್ತೆ ಬಂದ್ ಮಾಡಬೇಕು. 30-45 ದಿನಗಳ ಕಾಲ ಶಿರಾಡಿ ಘಾಟ್ ರಸ್ತೆಯನ್ನು ಬಂದ್ ಮಾಡಿ, ಕಾಮಗಾರಿ ಪೂರ್ಣಗೊಳಿಸಲು ಆಲೋಚಿಸಲಾಗಿದೆ.
ಸಕಲೇಶಪುರದ ದೋಣಿಗಲ್ ಕ್ರಾಸ್‌ನಿಂದ ಮಾರನಹಳ್ಳಿ ತನಕ 10 ಕಿ. ಮೀ. ಚತುಷ್ಪಥ ರಸ್ತೆ ಕಾಮಗಾರಿ ನಡೆಯಬೇಕಿದೆ. ಸದ್ಯ 5 ಕಿ. ಮೀ. ಮಾತ್ರ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಮಳೆಗಾಲ ಆರಂಭವಾದರೆ ಮತ್ತೆ ಕಾಮಗಾರಿಗೆ ಅಡ್ಡಿಯಾಗಲಿದೆ. ಅದಕ್ಕೆ ಮಳೆಗಾಲ ಆರಂಭಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸಲು ಯೋಜಿಸಲಾಗಿದೆ.
ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ಹೆಚ್ಚು ಸಮಯ ಬೇಕು. ಒಮ್ಮೆ ಕಾಂಕ್ರೀಟ್ ಹಾಕಿದ ಬಳಿಕ ಅದು ಕ್ಯೂರಿಂಗ್ ಆಗಬೇಕು, ಬಳಿಕ ತಡೆಗೋಡೆ ನಿರ್ಮಾಣ ಮಾಡಬೇಕು. ಆದ್ದರಿಂದ ವಾಹನಗಳ ಸಂಚಾರವಿದ್ದರೆ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಸಾಗುವುದಿಲ್ಲ. ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಿ ಕಾಮಗಾರಿ ಮುಗಿಸಲು ತೀರ್ಮಾನಿಸಲಾಗಿದೆ.
ಶಿರಾಡಿ ಘಾಟ್‌ನಲ್ಲಿ ಮಣ್ಣು ಕುಸಿಯುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಕಾರ್ಯ ಸಹ ನಡೆಯುತ್ತಿದೆ. ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ವಾಹನ ಸಂಚಾರ ಬಂದ್ ಮಾಡುವುದು ಉತ್ತಮ ಎಂಬ ಅಭಿಪ್ರಾಯ ಅಧಿಕಾರಿಗಳದ್ದು. ಮಾರ್ಚ್ 15ರಿಂದ ಆರಂಭವಾಗುವಂತೆ ವಾಹನ ಸಂಚಾರ ಬಂದ್ ಆಗುವ ನಿರೀಕ್ಷೆ ಇದೆ.












Click it and Unblock the Notifications