ಮಳೆ, ಗುಡ್ಡ ಕುಸಿತ : ಹಾಸನ-ಮಂಗಳೂರು ರೈಲು ಸ್ಥಗಿತ
ಹಾಸನ, ಜೂನ್ 11 : ಹಾಸನ-ಮಂಗಳೂರು ನಡುವಿನ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆಯ ಕಾರಣದಿಂದಾಗಿ ರೈಲು ಮಾರ್ಗದ ಮೂರು ಕಡೆ ಗುಡ್ಡ ಕುಸಿದುಬಿದ್ದಿದೆ. ಆದ್ದರಿಂದ, ರೈಲು ಸಂಚಾರ ಸ್ಥಗಿತವಾಗಿದೆ.
ಯಶವಂತಪುರ-ಕಾರವಾರ ರೈಲನ್ನು ಹಾಸನ ರೈಲು ನಿಲ್ದಾಣದಲ್ಲಿಯೇ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರಿಗೆ ಟಕೆಟ್‌ನ ಹಣವನ್ನು ಮರಳಿಸಿ, ಮುಂದಿನ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಾಗಿದೆ.
ಮಂಗಳೂರು-ಯಶವಂತಪುರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ (16576) ರೈಲಿನ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಪಾಲಘಾಟ್, ಈಡೋಡ್ ಮೂಲಕ ರೈಲು ಬೆಂಗಳೂರು ತಲುಪಲಿದೆ.

ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಮೂರು ಕಡೆ ಗುಡ್ಡ ಕುಸಿದಿದ್ದು, ಶಿರವಾಗಿಲು ಸೇರಿ ಎರಡು ಕಡೆ ಮರಗಳು ರೈಲು ಹಳಿಯ ಮೇಲೆ ಬಿದ್ದಿವೆ. ಗುಡ್ಡ ಕುಸಿದು ಬಿದ್ದಿರುವ ಪ್ರದೇಶ ಸಕಲೇಶಪುರ ತಾಲೂಕು ವ್ಯಾಪ್ತಿಗೆ ಸೇರಿದ್ದು, 241.5 ಮಿ.ಮೀ.ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹಾಸನ ಜಿಲ್ಲೆಯಾದ್ಯಂತ ಮುಂಗಾರು ಬಿರುಸುಗೊಂಡಿದ್ದು, ಭಾರೀ ಮಳೆಯಾಗುತ್ತಿದೆ. ಸಕಲೇಶಪುರ ಮತ್ತು ಆಲೂರು ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಇದರಿಂದಾಗಿ ಹೇಮಾವತಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿದೆ.
ಹೇಮಾವತಿ ಜಲಾಶಯಕ್ಕೆ 9115 ಕ್ಯೂಸೆಕ್ ನೀರು ಹರಿದುಬರುತ್ತಿದೆ. 200 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.












Click it and Unblock the Notifications