Suraj Revanna: ತಮ್ಮ ವಿರುದ್ಧದ ಆರೋಪಗಳಿಗೆ ಸೂರಜ್ ರೇವಣ್ಣ ಪ್ರತಿಕ್ರಿಯೆ
ನನ್ನ ಮೇಲೆ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದು, ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗನ್ನಿಕಡ ಫಾರ್ಮ್ ಹೌಸ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಾ. ಸೂರಜ್ ರೇವಣ್ಣ, ಇಂತಹ ಷಡ್ಯಂತ್ರಗಳು ಎಷ್ಟು ದಿನದಿಂದ ನಡೆಯುತ್ತಿದೆ ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನನ್ನ ಮೇಲೆ ಮಾಡಿರುವ ಆರೋಪಗಳು ಎಲ್ಲಾ ಸುಳ್ಳು, ನನಗೆ ಕೆಟ್ಟ ಹೆಸರು ತರಲು ಮಾಡಿರುವ ಷಡ್ಯಂತ್ರ ಇದಾಗಿದೆ ಎಂದರು.

ಕಾನೂನಿನ ಪ್ರಕಾರ ಏನಾಗಬೇಕು ಅದೇ ತಿರ್ಮಾನ ಆಗುತ್ತದೆ. ಅವರ ಮೇಲೆ ಕೂಡ ದೂರು ಕೊಟ್ಟಿದ್ದು ಎಫ್‌ಐಆರ್ ಆಗಿದೆ. ಪ್ರಕರಣದ ಬಗ್ಗೆ ತನಿಖೆಯಾದ ಬಳಿಕ ಸತ್ಯ ಏನೆಂದು ಜಗತ್ತಿಗೆ ತಿಳಿಯಲಿದೆ. ಕಾನೂನಿನ ಮೇಲೆ ನನಗೆ ನಂಬಿಕೆಯಿದೆ ಎಂದು ಹೇಳಿದರು.
ರಾಜಕೀಯವಾಗಿ ನನಗೆ ಕೆಟ್ಟ ಹೆಸರು ತರಲು ಮಾಡಿರುವ ಷಡ್ಯಂತ್ರ ಇದು. ಅದರ ಬಗ್ಗೆ ಈಗ ನಾನು ಏನೂ ಹೇಳಲ್ಲ. ಅವರು ಮಾಡಿದರು, ಇವರು ಮಾಡಿದರು ಎಂದು ಹೇಳಲ್ಲ. ತನಿಖೆ ನಡೆಯುತ್ತಿದೆ. ರಾಜ್ಯದ ಜನತೆಗೆ ಸತ್ಯ ಏನೆಂದು ಶೀಘ್ರದಲ್ಲೇ ತಿಳಿಯಲಿದೆ ಎಂದು ಹೇಳಿದ್ದಾರೆ.
ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲು
ತನ್ನ ಮೇಲೆ ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದೂರು ಕೊಟ್ಟಿದ್ದು, ಎಫ್‌ಐಆರ್ ದಾಖಲಿಸಲಾಗಿದೆ. ಶುಕ್ರವಾರ ಡಿಜಿ ಕಚೇರಿಯಲ್ಲಿ ದೂರು ನೀಡಲಾಗಿದ್ದು, ದೂರಿನ ಪ್ರತಿಯನ್ನು ಹಾಸನ ಎಸ್‌ಪಿ ಅವರಿಗೂ ಇ ಮೇಲ್ ಮಾಡಿದ್ದ.
ಸಂತ್ರಸ್ತನ ಇ ಮೇಲ್ ದೂರು ಆಧರಿಸಿ 377, 342, 506 ಹಾಗೂ 34 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೂರಜ್ ರೇವಣ್ಣ ಇಂದು ಪೊಲೀಸ್ ಠಾಣೆಗೆ ತೆರಳಿದ್ದು, ಪೊಲೀಸರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂರಜ್ ರೇವಣ್ಣರನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಕೂಡ ಇದೆ.
ಇದಕ್ಕೆ ಪ್ರತಿಯಾಗಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುತ್ತೇನೆ ಎಂದು ಐದು ಕೋಟಿ ಹಣಕ್ಕೆ ಇಟ್ಟು ಬ್ಲಾಕ್‌ಮೇಲ್ ಮಾಡಿದ್ದಾನೆ ಎಂದು ಆರೋಪಿಸಿದ ಸಂತ್ರಸ್ತ ಹಾಗೂ ಮತ್ತೊಬ್ಬನ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಸೂರಜ್ ರೇವಣ್ಣ ಆಪ್ತ ದೂರು ಕೊಟ್ಟಿದ್ದಾರೆ.












Click it and Unblock the Notifications