ಪ್ರಜ್ವಲ್ ವಿಚಾರಣೆ: ಎಸ್‌ಐಟಿಗೆ ಚುನಾವಣಾ ಫಲಿತಾಂಶದ ಚಿಂತೆ!
ಹಾಸನ, ಜೂನ್ 02: ಹಾಸನ ಲೋಕಸಭೆ ಚುನಾವಣೆ 2024ರ ಮತ ಎಣಿಕೆ ಜೂನ್ 4ರ ಮಂಗಳವಾರ ನಡೆಯಲಿದೆ. ಚುನಾವಣೋತ್ತರ ಸಮೀಕ್ಷೆಗಳು ಈಗಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಲಿದ್ದಾರೆ ಎಂದು ಅಂದಾಜಿಸಿವೆ. ಇದು ಎಸ್‌ಐಟಿಯ ಚಿಂತೆಗೆ ಕಾರಣವಾಗಿದೆ.
ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಅವರು ಮೇ 31ರಂದು ರಾಜ್ಯಕ್ಕೆ ವಾಪಸ್ ಆಗಿದ್ದಾರೆ, ಎಸ್‌ಐಟಿ ಅವರನ್ನು ಬಂಧಿಸಿದೆ.

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣರನ್ನು ಜೂನ್ 6ರ ತನಕ ಕೋರ್ಟ್ ಎಸ್‌ಐಟಿ ವಶಕ್ಕೆ ನೀಡಿದೆ. ಆದರೆ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಲು ಕಾಯುತ್ತಿದ್ದಾರೆ.
ಪ್ರಜ್ವಲ್ ಗೆದ್ದರೆ ಕಷ್ಟ: 2024ರ ಲೋಕಸಭೆ ಚುನಾವಣೆಗೆ ಹಾಸನದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ. ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್. ಸದ್ಯ ಪ್ರಜ್ವಲ್ ರೇವಣ್ಣ ಎಸ್‌ಐಟಿ ವಶದಲ್ಲಿದ್ದಾರೆ.
ಎಸ್‌ಐಟಿ ಅಧಿಕಾರಿಗಳು ಅವರನ್ನು ಹೊಳೆನರಸೀಪುರದ ನಿವಾಸಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಬೇಕು. ಏಪ್ರಿಲ್ 26ರ ಬಳಿಕ ಪ್ರಜ್ವಲ್ ರೇವಣ್ಣ ಹಾಸನಕ್ಕೆ ಭೇಟಿ ನೀಡಿಲ್ಲ. ಹಾಲಿ ಅವರು ಹಾಸನ ಸಂಸದರು, ಜೂನ್ 4ರಂದು ನಡೆಯುವ ಮತ ಎಣಿಕೆಯಲ್ಲಿ ಅವರು ಗೆಲುವು ಸಾಧಿಸಿದರೆ ಹಾಸನಕ್ಕೆ ಅವರನ್ನು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋದಾಗ ಹೆಚ್ಚಿನ ಜನರು ಸೇರಿ ತೊಂದರೆ ಉಂಟಾಗುವ ನಿರೀಕ್ಷೆ ಇದೆ.
ಪ್ರಜ್ವಲ್ ರೇವಣ್ಣ ಗೆದ್ದ ಬಳಿಕ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅವರನ್ನು ನೋಡಲು ಸ್ಥಳ ಮಹಜರು ನಡೆಸುವ ಜಾಗಕ್ಕೆ ಬರಬಹುದು. ಇದಕ್ಕಾಗಿ ಮತ ಎಣಿಕೆ ಆರಂಭವಾಗುವ ಮೊದಲೇ ಭಾನುವಾರ ಸಂಜೆ ಅಥವ ಸೋಮವಾರ ಎಸ್‌ಐಟಿ ಹಾನಸಕ್ಕೆ ಪ್ರಜ್ವಲ್ ರೇವಣ್ಣ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ.
ಜೂನ್ 6ರ ತನಕ ಕೋರ್ಟ್ ಪ್ರಜ್ವಲ್ ರೇವಣ್ಣರನ್ನು ಎಸ್‌ಐಟಿ ವಶಕ್ಕೆ ನೀಡಿದೆ. ಸದ್ಯದ ಮಾಹಿತಿ ಪ್ರಕಾರ ಎಸ್ಐಟಿ ತನಿಖೆಗೆ ಅವರು ಸರಿಯಾಗಿ ಸಹಕಾರ ನೀಡುತ್ತಿಲ್ಲ. ಆದ್ದರಿಂದ ಸ್ಥಳ ಮಹಜರು ಪ್ರಕ್ರಿಯೆ ಮುಗಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಹೊಳೆನರಸೀಪುರದ ನಿವಾಸದಲ್ಲಿ, ಹಾಸನದ ಪ್ರಜ್ವಲ್ ರೇವಣ್ಣ ಸಂಸದರ ಕಛೇರಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪವಿದೆ. ಈ ಹಿನ್ನಲೆಯಲ್ಲಿ ಈ ಪ್ರಕರಣದಲ್ಲಿ ಸ್ಥಳ ಮಹಜರು ಮಹತ್ವದ್ದಾಗಿದೆ.
ಈಗಾಗಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿ ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರು ಮಾಡಿದ್ದಾರೆ. ಈಗ ಅದೇ ಸ್ಥಳಗಳಿಗೆ ಪ್ರಜ್ವಲ್ ರೇವಣ್ಣ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಬೇಕಿದೆ.
ಮತ್ತೊಂದು ಕಡೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯಾದ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣ ಎಸ್‌ಐಟಿ ಪೊಲೀಸರ ಕೈಗೆ ಸಿಕ್ಕಿಲ್ಲ. ಬಂಧನ ಭೀತಿಯಲ್ಲಿರುವ ಅವರು ತಲೆಮರೆಸಿಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಶನಿವಾರ ಇಡೀ ದಿನ ಭವಾನಿ ರೇವಣ್ಣ ವಿಚಾರಣೆಗಾಗಿ ಹೊಳೆನರಸೀಪುರದ ನಿವಾಸದಲ್ಲಿ ಎಸ್‌ಐಟಿ ಅಧಿಕಾರಿಗಳು ಕಾದರೂ ಸಹ ಭವಾನಿ ರೇವಣ್ಣ ಅಲ್ಲಿಗೆ ಆಗಮಿಸಿಲ್ಲ.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬಳಿಕ ಎಚ್. ಡಿ. ರೇವಣ್ಣ ಕುಟುಂಬ ಹೊಳೆನರಸೀಪುರದ ನಿವಾಸದಲ್ಲಿ ಇಲ್ಲ. ಎಚ್. ಡಿ. ರೇವಣ್ಣ ಬೆಂಗಳೂರಿನಲ್ಲಿ ಇದ್ದಾರೆ. ಹಾನಸಕ್ಕೆ ಹೋದರೂ ಸಹ ನಿವಾಸಕ್ಕೆ ಹೋಗದೇ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.
ಭಾನುವಾರ ಎಚ್. ಡಿ. ರೇವಣ್ಣ ಹೊಳೆನರಸೀಪುರದಲ್ಲಿ ಇದ್ದಾರೆ. ಹೊಳೆನರಸೀಪುರದ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಅವರು ಭೇಟಿ ನೀಡಿದ್ದಾರೆ. ಶನಿವಾರ ಆಗಮಿಸಿದ್ದ ಅವರು ಹರದನಹಳ್ಳಿಯ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಹರದನಹಳ್ಳಿಯ ಮನೆ ದೇವರು ದೇವೇಶ್ವರನಿಗೆ ಪೂಜೆ ಸಲ್ಲಿಸಿ ಬಳಿಕ ಅವರು ಹೊಳೆನರಸೀಪುರಕ್ಕೆ ಆಗಮಿಸಿದ್ದಾರೆ.












Click it and Unblock the Notifications