Get Updates
Get notified of breaking news, exclusive insights, and must-see stories!

Charukeerthi Bhattaraka Swamiji : ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ

ಹಾಸನ ಜಿಲ್ಲೆಯ ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶರಾಗಿದ್ದಾರೆ.

ಹಾಸನ, ಮಾರ್ಚ್ 23; ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರವಣಬೆಳಗೊಳ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶರಾದರು. ಮೇ 3, 1949ರಲ್ಲಿ ಜನಿಸಿದ್ದ ಶ್ರೀಗಳು ಏಳು ಮಹಾಮಸ್ತಕಾಭಿಷೇಕವನ್ನು ನೆರವೇರಿಸಿದ್ದರು.

ಬುಧವಾರ ರಾತ್ರಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (74) ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ವೈದ್ಯರ ತಂಡ ಮಠಕ್ಕೆ ಆಗಮಿಸಿ ಚಿಕಿತ್ಸೆ ನೀಡುತ್ತಿತ್ತು. ಬಳಿಕ ಬೆಳ್ಳೂರು ಕ್ರಾಸ್‌ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ವಾಮೀಜಿಗಳನ್ನು ದಾಖಲು ಮಾಡಲಾಗಿತ್ತು. ಗುರುವಾರ ಮುಂಜಾನೆ 4.30ರ ಸುಮಾರಿಗೆ ಹೃದಯಾಘಾತದಿಂದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ ಹೊಂದಿದರು.

charukeerthi bhattarak swamiji

ಕರ್ನಾಟಕದ ಜೈನ ಸಮುದಾಯದ ಹಿರಿಯ ಸ್ವಾಮೀಜಿಗಳಾಗಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 7 ಮಹಾಮಸ್ತಕಾಭಿಷೇಕವನ್ನು ನೆರವೇರಿಸಿದ್ದರು. ಮೇ 3, 1949ರಲ್ಲಿ ಜನಿಸಿದ್ದ ಶ್ರೀಗಳು 1970ರಲ್ಲಿ ಪೀಠಾಧಿಪತಿಯಾಗಿ ನೇಮಕಗೊಂಡಿದ್ದರು.

ಹೊಯ್ಸಳ ದೊರೆಯಾಗಿದ್ದ ಬಲ್ಲಾಳರಾಯ ಶ್ರವಣಬೆಳಗೊಳ ಜೈನ ಮಠದ ಸ್ವಾಮೀಜಿಗಳಿಗೆ 13ನೇ ಶತಮಾನದಲ್ಲಿ 'ಚಾರುಕೀರ್ತಿ' ಎಂಬ ಬಿರುದು ನೀಡುತ್ತಾನೆ ಎನ್ನುತ್ತದೆ ಇತಿಹಾಸ. ಅಂದಿನಿಂದಲೂ ಜೈನ ಮಠದ ಪೀಠಾಧಿಪತಿಗಳಿಗೆ ಚಾರುಕೀರ್ತಿ ಎಂದೇ ಕರೆಯಲಾಗುತ್ತದೆ.

620 ವರ್ಷಗಳ ಹಿಂದೆ ಕ್ಷೇತ್ರದ ಭಟ್ಟಾರಕರು 7 ಮಹಾಮಸ್ತಕಾಭಿಷೇಕ ನೆರವೇರಿಸಿದ್ದರು. ಅವರ ನಂತರ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 7 ಮಹಾಮಸ್ತಕಾಭಿಷೇಕವನ್ನು ಮುನ್ನಡೆಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ, ಬೆಂಗಳೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ವಾಮೀಜಿಗಳು ಸ್ನಾತಕೋತ್ತರ ಪದವಿ ಪಡೆದಿದ್ದರು.

bhattarak swamiji

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 40ಕ್ಕೂ ಹೆಚ್ಚು ವರ್ಷಗಳಿಂದ ಜನಹಿತ ಮತ್ತು ಆಧ್ಯಾತ್ಮಿಕ ಕೈಂಕರ್ಯಗಳಲ್ಲಿ ತೊಡಗಿಕೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಗೆ 2017ನೇ ಸಾಲಿನಲ್ಲಿ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿತ್ತು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದ ವರಂಗದವರು. 1970ರಲ್ಲಿ ಪೀಠಾಧಿಪತಿಯಾದರು. ಪಾಕೃತ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಕೆಲವು ಸ್ವಾಮೀಜಿಗಳಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಸಹ ಒಬ್ಬರಾಗಿದ್ದರು. 1981ರಲ್ಲಿ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನಡೆಸಿದ್ದ ಸ್ವಾಮೀಜಿಗಳಿಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ 'ಕರ್ಮಯೋಗಿ' ಎಂಬ ಬಿರುದು ನೀಡಿದ್ದರು.

ಸಂಕ್ಷಿಪ್ತ ಪರಿಚಯ; ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು 1949ರ ಮೇ 3ರಂದು ವರಂಗದಲ್ಲಿ ಜನಿಸಿದರು. 1969ರ ಡಿಸೆಂಬರ್ 12ರಂದು ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿದರು. 19 ಏಪ್ರಿಲ್ 1970ರಂದು ಶ್ರವಣಬೆಳಗೊಳದ ಮಠದ ಧರ್ಮಾಚಾರ್ಯ ಪೀಠವನ್ನು ಏರಿದರು. ಜೈನ ಸಮುದಾಯದ ಅಭಿವೃದ್ಧಿ ಮತ್ತು ಮಠದ ಪರಂಪರೆಯನ್ನು ಉಳಿಸಲು ಸ್ವಾಮೀಜಿಗಳು ಬಹಳಷ್ಟು ಶ್ರಮಿಸಿದ್ದಾರೆ. ಶ್ರವಣಬೆಳಗೊಳ ಜೈನ ತತ್ತ್ವಶಾಸ್ತ್ರ, ಧರ್ಮ ಮತ್ತು ಆಚರಣೆಯನ್ನು ಕಲಿಯುವ ಪ್ರಮುಖ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ ಇದರ ಹಿಂದೆ ಸ್ವಾಮೀಜಿಗಳ ದೂರದೃಷ್ಟಿ ಕೆಲಸ ಮಾಡಿದೆ.

ಭಗವಾನ್ ಮಹಾವೀರರ ನಿರ್ವಾಣದ 2500ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ದಕ್ಷಿಣ ಭಾರತದಾದ್ಯಂತ 'ಧರ್ಮಚಕ್ರ' ಎಂಬ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸುವಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪ್ರಮುಖ ಪಾತ್ರವಹಿಸಿದ್ದರು. ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಶ್ರವಣಬೆಳಗೊಳದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಇದರ ಪ್ರಯೋಜನವನ್ನು ಸುಮಾರು 1000 ಜನರು ಪಡೆದರು. ಇದು ಸ್ವಾಮೀಜಿಗಳಿಗೆ ಇದ್ದ ಸಮಾಜದ ಮೇಲಿನ ಕಳಕಳಿಗೆ ಸಾಕ್ಷಿಯಾಗಿದೆ.

ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಸ್ವಾಮೀಜಿಗಳು ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಸ್ಥಾಪಿಸಿದ್ದಾರೆ. ಫಾರ್ಮಸಿ ಕಾಲೇಜು, ಪಿಯು ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ ಮಾಡಿದ್ದಾರೆ. ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ ಹೆಗ್ಗಳಿಕೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರದ್ದು.

ಪ್ರಾಕೃತದ ಪುಸ್ತಕಗಳು ಸಾಮಾನ್ಯ ಜನರಿಗೂ ಸಿಗುವಂತೆ ಮಾಡಲು ಬೆಂಗಳೂರಿನಲ್ಲಿ 'ಪ್ರಾಕೃತ ಜ್ಞಾನಭಾರತಿ ಶಿಕ್ಷಣ ಟ್ರಸ್ಟ್' ಸ್ಥಾಪನೆ ಮಾಡಿದ್ದಾರೆ. ಈ ಟ್ರಸ್ಟ್‌ ಪ್ರತಿ ಎರಡು ವರ್ಷಗಳಿಗೊಮ್ಮೆ ರಾಷ್ಟ್ರೀಯ ಪ್ರಾಕೃತ ಸಮ್ಮೇಳನಗಳನ್ನು ಆಯೋಜನೆ ಮಾಡುತ್ತದೆ. ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಶ್ರವಣಬೆಳಗೊಳಕ್ಕೆ ಆಗಮಿಸುವ ಪ್ರವಾಸಿಗರು, ಯಾತ್ರಾರ್ಥಿಗಳಿಗೆ ಹಲವು ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗ್ರಾಮೀಣ ಪ್ರದೇಶಗಳಿಗೆ ಆರೋಗ್ಯ ಸೇವೆ ಒದಗಿಸಲು ಸಂಚಾರಿ ಆಸ್ಪತ್ರೆ ವ್ಯವಸ್ಥೆ ಮಾಡಿದ್ದಾರೆ. ಶ್ರವಣಬೆಳಗೊಳದ ಸುತ್ತಮುತ್ತಲಿನ ಹತ್ತು ಗ್ರಾಮಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಂಡು ಶಾಲಾ ಕಟ್ಟಡ, ಕುಡಿಯುವ ನೀರು, ಸಮುದಾಯ ಭವನ, ರಸ್ತೆ ಮತ್ತು ಬೀದಿ ದೀಪಗಳ ವ್ಯವವಸ್ಥೆಯನ್ನು ಮಾಡಿದ್ದಾರೆ. ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳ ಮೇಲೆ ಹಿಡಿತ ಹೊಂದಿದ್ದ ಸ್ವಾಮೀಜಿಗಳು ಸರಳವಾಗಿ ಅರ್ಥವಾಗುವಂತೆ ಪ್ರವಚನ ನೀಡುತ್ತಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+