Shiradi Ghat: ಶಿರಾಡಿ ಘಾಟ್ ಸುರಂಗ ಮಾರ್ಗ ಡಿಪಿಆರ್ ಸಿದ್ಧ, ಯೋಜನೆ ವಿವರ
ಹಾಸನ, ಫೆಬ್ರವರಿ 16: ಬೆಂಗಳೂರು-ಮಂಗಳೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಸಾಗುವ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲು ಒಪ್ಪಿಗೆ ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮೂರು ಬಾರಿ ಮನವಿ ಮಾಡಿತ್ತು. ಕೇಂದ್ರ ಸರ್ಕಾರ ವಿಸ್ತೃತ ಯೋಜನಾ ವರದಿ ತಯಾರು ಮಾಡಲು ಒಪ್ಪಿಗೆಯನ್ನು ನೀಡಿತ್ತು. ಈಗ ಯೋಜನಾ ವರದಿ ಸಿದ್ಧವಾಗಿದೆ. 23.63 ಕಿ. ಮೀ. ಮಾರ್ಗದಲ್ಲಿ 6 ಕಡೆ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಎಂದು ವರದಿ ಹೇಳಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವ ಡಿಪಿಆರ್ ತಯಾರು ಮಾಡಿದೆ. ಇದು ಸಚಿವಾಲಯಕ್ಕೆ ಸಲ್ಲಿಕೆಯಾಗಿ ಅಂತಿಮ ಒಪ್ಪಿಗೆ ಸಿಕ್ಕಿದ ಬಳಿಕ ಯೋಜನೆಗೆ ಚಾಲನೆ ದೊರೆಯಲಿದೆ.

ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಸುರಂಗ ಮಾರ್ಗವಿದೆ. ಈಗ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿಯಲ್ಲಿಯೂ ಸುರಂಗ ಮಾರ್ಗ ನಿರ್ಮಾಣವಾಗಲಿದ್ದು, ಕೆಲವೇ ದಿನಗಳಲ್ಲಿ ಡಿಪಿಆರ್ ಸಚಿವಾಲಯಕ್ಕೆ ಸಲ್ಲಿಕೆಯಾಗಲಿದೆ. ಬಳಿಕ ಯೋಜನೆಗೆ ಒಪ್ಪಿಗೆ ಸಿಗಲಿದೆಯೇ? ಕಾದು ನೋಡಬೇಕಿದೆ.
ಡಿಪಿಆರ್‌ನ ವಿವರಗಳು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಡಿಪಿಆರ್ ಪ್ರಕಾರ 23. 63 ಕಿ. ಮೀ. ಮಾರ್ಗದಲ್ಲಿ 6 ಕಡೆ ಸುರಂಗ ಮಾರ್ಗ, 10 ಸೇತುವೆಗಳು ನಿರ್ಮಾಣವಾಗಲಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಡಿಪಿಆರ್‌ಗೆ ಅಂತಿಮ ಒಪ್ಪಿಗೆಯನ್ನು ನೀಡಲಿದೆ.
ದ್ವಿಪಥದ ಮಾರ್ಗದಲ್ಲಿ ವಾಹನ ಸಂಚಾರ, ತುರ್ತು ಸಂದರ್ಭಕ್ಕಾಗಿ 8.58 ಮೀಟರ್ ವಿಸ್ತಾರವಾದ ರಸ್ತೆ ನಿರ್ಮಾಣವೂ ಡಿಪಿಆರ್‌ನಲ್ಲಿ ಸೇರಿದೆ. ಮಳೆಗಾಲದಲ್ಲಿ ಭೂ ಕುಸಿತ ಉಂಟಾದರೂ ಸಹ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ರಸ್ತೆಯನ್ನು ವಿನ್ಯಾಸಗೊಳಿಸಲಾಗುತ್ತದೆ.
ಬೆಂಗಳೂರು-ಮಂಗಳೂರು ನಡುವಿನ ಸಂಚಾರಕ್ಕೆ ಶಿರಾಡಿ ಘಾಟ್ ಅಭಿವೃದ್ಧಿ ಅತ್ಯಗತ್ಯವಾಗಿದೆ ಎಂದು ವರದಿ ಹೇಳಿದೆ. ಹಾಸನ ಮಂಗಳೂರು ನಡುವೆ ಬಸ್, ಕಾರು, ಲಾರಿಗಳು, ಟ್ಯಾಂಕರ್ ಸಂಚಾರವನ್ನು ನಡೆಸುತ್ತವೆ. ವಾಹನದ ದಟ್ಟಣೆಗೆ ಅಗತ್ಯವಾಗಿ ರಸ್ತೆಗಳು ಇಲ್ಲ. ಆದ್ದರಿಂದ ಸುರಂಗ ಮಾರ್ಗ ನಿರ್ಮಾಣ ಮಾಡಿ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತದೆ.
ಶಿರಾಡಿ ರಸ್ತೆಯ ಮೂಲಕ ಸಾಗಿ ಮಂಗಳೂರು, ಧರ್ಮಸ್ಥಳ, ಉಡುಪಿ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ಬೆಂಗಳೂರು-ಮಂಗಳೂರು ನಡುವೆ ಸರಕು ಸಾಗಣೆಗೆ ಸಹ ಈ ಮಾರ್ಗ ಅನಿವಾರ್ಯವಾಗಿದೆ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಸಾಗುವ ಈ ರಸ್ತೆಯನ್ನು ಜಪಾನ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಅಭಿವೃದ್ಧಿಗೊಳಿಸುವುದು ಯೋಜನೆಯ ಗುರಿಯಾಗಿದೆ.
ಬೆಂಗಳೂರು-ಹಾಸನ ತನಕ 4 ಪಥದ ರಸ್ತೆ ಇದೆ. ಆದರೆ ಅಲ್ಲಿಂದ ಮುಂದೆ ದ್ವಿಮುಖ ಸಂಚಾರ ವ್ಯವಸ್ಥೆ ಇರುವ ಕಾರಣ ವಾಹನಗಳ ದಟ್ಟಣೆ ಉಂಟಾಗುತ್ತಿದೆ. ಆದ್ದರಿಂದ ರಸ್ತೆ ವಿಸ್ತರಣೆ ಮಾಡಿ, ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದು ಯೋಜನೆಯಾಗಿದೆ. ಹಾಸನ-ಸಕಲೇಶಪುರ ನಡುವಿನ 45 ಕಿ. ಮೀ. ಚತುಷ್ಪಥ ಕಾಮಗಾರಿಯಲ್ಲಿ 38 ಕಿ. ಮೀ. ಪೂರ್ಣಗೊಂಡಿದ್ದು, ಉಳಿದ ರಸ್ತೆ ಪೂರ್ಣಗೊಳಿಸಲು 2025ರ ಏಪ್ರಿಲ್ ಗಡುವು ನೀಡಲಾಗಿದೆ.
ಮಳೆಗಾಲದಲ್ಲಿ ಶಿರಾಡಿ ಘಾಟ್‌ನಲ್ಲಿ ಪದೇ ಪದೇ ಭೂ ಕುಸಿತವಾಗುವ ಹಿನ್ನಲೆಯಲ್ಲಿ ಈಗಾಗಲೇ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸಕಲೇಶಪುರ-ಮಾರನಹಳ್ಳಿ ತನಕ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿಗಳು ಸಹ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸುರಂಗ ಮಾರ್ಗ ಯೋಜನೆಗೆ ಒಪ್ಪಿಗೆ ನೀಡಿದರೆ ಅದನ್ನು ಸಹ ಆದ್ಯತೆಯ ಮೇರೆಗೆ ಕೈಗೊಳ್ಳಲು ಸರ್ಕಾರ ತಯಾರಾಗಿದೆ.
2018ರಿಂದ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ ಈ ಮಾರ್ಗ ಪಶ್ಚಿಮ ಘಟ್ಟದಲ್ಲಿ ಹಾದು ಹೋಗುವ ಕಾರಣ ಸುರಂಗ ಮಾರ್ಗದ ಕುರಿತು ಪರ-ವಿರೋಧ ಚರ್ಚೆಗಳು ಸಾಗಿವೆ. ಕೇಂದ್ರ ಸರ್ಕಾರಿ ಶಿರಾಡಿ ಘಾಟ್ ಸುರಂಗ ನಿರ್ಮಾಣ ಕಾಮಗಾರಿಗೆ 10,000 ಕೋಟಿ ರೂ. ತಾತ್ಕಾಲಿಕ ವೆಚ್ಚವಾಗಬಹುದು ಎಂದು ಅಂದಾಜಿಸಿದೆ. 6 ಸುರಂಗಗಳನ್ನು ಯೋಜನೆ ಒಳಗೊಂಡಿದೆ. ಈ ಸುರಂಗ ಪ್ರತಿ ಟ್ಯೂಬ್‌ಗೆ ಒಂದು ತುರ್ತು ಪಥದೊಂದಿಗೆ 2 ಚಾಲನಾ ಪಥವನ್ನು ಒಳಗೊಂಡಿರಲಿದೆ.












Click it and Unblock the Notifications