ಮುಂದುವರಿದ ಭಾರೀ ಮಳೆ: ಸಕಲೇಶಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಬಿರುಕು
ಹಾಸನ, ಜುಲೈ 25: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.
ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರ ಕಾಂಕ್ರೀಟ್ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಹೊಸದಾಗಿ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದ ಬಳಿ ರಸ್ತೆ ಮಧ್ಯದಲ್ಲೇ ಬೃಹತ್ ಬಿರುಕು ಕಾಣಿಸಿಕೊಂಡಿದೆ.

ಹೊಸದಾಗಿ ಮಣ್ಣು ಹಾಕಿ ಮಾಡಿರುವ ರಸ್ತೆಯಲ್ಲಿ ಬಿರುಕು ಬೃಹತ್ ಬಿರುಕು ಕಾಣಿಸಿಕೊಂಡಿದ್ದು, ರಸ್ತೆಯ ಸುತ್ತಲೂ ಮುಣ್ಣು ಕುಸಿಯುತ್ತಿದ್ದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದು, ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಇತ್ತೀಚಿಗಷ್ಟೇ ನಿರ್ಮಾಣವಾದ ರಾಷ್ಟ್ರೀಯ ಹೆದ್ದಾರಿ 75 ಮೂರು ದಿನದ ಮಳೆಗೆ ಬಿರುಕು ಕಾಣಿಸಿಕೊಂಡು ಕುಸಿಯುತ್ತಿರುವುದಕ್ಕೆ ಸ್ಥಳೀಯ ವಾಹನ ಸವಾರರು ಅಸಮಾಧಾನ ಹೊರಹಾಕಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಬಿರುಕು ಬಿಡುತ್ತಿದೆ ಎಂದು ಸ್ಥಳೀಯರ ಆರೋಪಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹಾಸನದ ಮಲೆನಾಡು ಭಾಗದಲ್ಲಿ ಭಾರೀ ಮಳೆ: ಗದ್ದೆಗಳು ಜಲಾವೃತ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಕೆರೆಗಳು ಕೋಡಿ ಬಿದ್ದಿದ್ದು, ಹತ್ತಾರು ಎಕರೆ ಗದ್ದೆಗಳು ಜಲಾವೃತವಾಗೊಂಡಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಐಗೂರು ಸಮೀಪದಲ್ಲಿ ಭತ್ತದ ಸಸಿ ನಾಟಿ ಮಾಡಲು ಸಿದ್ಧ ಮಾಡಿಕೊಂಡಿದ್ದ ಗದ್ದೆಗಳು ಮುಳುಗಡೆಯಾಗಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಗದ್ದೆಗಳು ಜಲಾವೃತವಾದ ಕಾರಣ ರೈತರು ಕೃಷಿ ಚಟುವಟಿಕೆ ಮುಂದುವರಿಸಲಾಗದೇ ಕಂಗಾಲಾಗಿದ್ದಾರೆ.












Click it and Unblock the Notifications