2 ಕೋಟಿ ರೂ. ಮೌಲ್ಯದ ಚಿನ್ನ ಕಳವು ಪ್ರಕರಣ: ಆರೋಪಿಗಳನ್ನು ಬಂಧಿಸಿದ ಹಳೇಬೀಡು ಪೊಲೀಸರು
ಹಾಸನ, ನವೆಂಬರ್ 12: ಸೆ.7ರಂದು ನಡೆದಿದ್ದ ಎರಡು ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ 45 ಲಕ್ಷ ರೂ. ಬೆಲೆಯ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಹಾಸನ ಜಿಲ್ಲೆಯ ಹಳೇಬೀಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಸನ ನಗರದ ವಿಶ್ವೇಶ್ವರಯ್ಯ ಬಡಾವಣೆಯ ಗ್ರಾನೈಟ್ ಉದ್ಯಮಿ ರಘು ಎಂಬುವರ ಮನೆಯಲ್ಲಿ ಸೆ.7ರಂದು ನಡೆದಿದ್ದ ಎರಡು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಮಹಮದ್ ಖಾಲಿದ್ ಹಾಗೂ ಮತ್ತೊಬ್ಬ ಆರೋಪಿ ಸೈಯದ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ 45 ಲಕ್ಷ ರೂ.ಬೆಲೆಯ ಚಿನ್ನಾಭರಣವನ್ನ ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಹಳೇಬೀಡು ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಶ್ರೀಕಾಂತ್ ಮಾತನಾಡಿ, ಮಾಯಗೊಂಡನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ನ.12ರಂದು ಬೆಳಗ್ಗೆ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಜಾವಗಲ್ ಕಡೆಯಿಂದ ಬಂದ ಕೇರಳ ಮೂಲದ ನೋಂದಣಿ ಇದ್ದ ಎರಡು ಕಾರನ್ನು ತಡೆದು ದಾಖಲೆ ತೋರಿಸುವಂತೆ ತಿಳಿಸಿದ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ಕಡೂರು ಹಾಗೂ ಮಂಗಳೂರು ಮೂಲದ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಬಳಿಕ ವಶಪಡಿಸಿಕೊಂಡ ಕಾರನ್ನು ಪರಿಶೀಲಿಸಿದಾಗ ಕಪ್ಪುಬಣ್ಣದ ಪರ್ಸ್‌ನಲ್ಲಿ ಚಿನ್ನದಗಟ್ಟಿ, ಮೂರು ಚಿನ್ನದ ಚೈನ್, ಮತ್ತೊಂದು ಕಾರಿನಲ್ಲಿ 500 ಬೆಲೆಯ ಎರಡು ಕಂತೆ ನೋಟ್ ಪತ್ತೆಯಾಗಿದೆ ಎಂದು ಹಳೇಬೀಡು ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಶ್ರೀಕಾಂತ್ ತಿಳಿಸಿದರು.
ಆರೋಪಿಗಳು ಸೆ.7ರಂದು ವಿಶ್ವೇಶ್ವರಯ್ಯ ಬಡಾವಣೆಯ 80 ಅಡಿ ರಸ್ತೆಯ ರಘು ಎಂಬುವರ ಮನೆಯಲ್ಲಿ ಸಂಜೆ ವೇಳೆ ಎರಡು ವಾಹನಗಳು ಒಂದರ ಬಳಿಕ ಮತ್ತೊಂದು ಹೋಗಿದ್ದನ್ನು ಗಮನಿಸಿ, ಆ ಬಳಿಕ 15ರಿಂದ 20ನಿಮಿಷದ ಅಂತರದಲ್ಲಿ ಎರಡು ಕೋಟಿಯಷ್ಟು ಚಿನ್ನಾಭರಣ ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಪ್ರಕರಣ ಭೇದಿಸಲು 7ರಿಂದ 8 ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಹಳೇಬೀಡು ಸಿಪಿಐ ಶ್ರೀಕಾಂತ್ ಮತ್ತು ಎಸ್‌ಐ ಗಿರಿಧರ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಸಿಸಿ ಕ್ಯಾಮೆರಾ ಮನೆಯಲ್ಲಿ ಇಲ್ಲವಾದ ಕಾರಣ ಹಾಗೂ ಯಾವುದೇ ಸುಳಿವು ದೊರೆಯದೆ ಪ್ರಕರಣ ಸವಾಲಾಗಿ ಪರಿಣಮಿಸಿತ್ತು ಎಂದರು.
Recommended Video

ಕಳ್ಳತನ ಪ್ರಕರಣವನ್ನು ಭೇದಿಸಿ ಇಬ್ಬರಿಂದ 727 ಗ್ರಾಂ ತೂಕದ ಚಿನ್ನಾಭರಣ, 4 ಕೆಜಿ 800 ಗ್ರಾಂ ಬೆಳ್ಳಿ ಆಭರಣ, ಎರಡು ಲಕ್ಷ ರೂ. ಹಣ, ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ಇನ್ನಿಬ್ಬರು ಭಾಗಿಯಾಗಿದ್ದರು ಎಂಬ ಮಾಹಿತಿ ದೊರೆತ್ತಿದ್ದು, ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸ್ ಶೋಧಕಾರ್ಯ ಮುಂದುವರೆಸಿದ್ದಾರೆ. ಪ್ರಕರಣ ಸಂಬಂಧ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಮಾಹಿತಿ ನೀಡಿದ್ದಾರೆ.












Click it and Unblock the Notifications