ಸ್ನೇಹಿತರ ಸವಾಲ್:3೦ ನಿಮಿಷದಲ್ಲಿ 10 ಪ್ಯಾಕೆಟ್ ಮದ್ಯ ಸೇವಿಸಿ ವ್ಯಕ್ತಿ ಸಾವು
ಹಾಸನ, ಸಪ್ಟೆಂಬರ್ 20: ಹಳ್ಳಿಗಳಲ್ಲಿ ಕೆಲಸ ಮುಗಿದ ನಂತರ ಒಂದಷ್ಟು ಕಾಲ ತನ್ನ ಗ್ರಾಮದ ಸ್ನೇಹಿತರ ಹೊತೆ ಹರಟೆ ಹೊಡೆಯೋಣ ಎಂದು ಸೇರುವುದು ಸರ್ವೇ ಸಾಮಾನ್ಯ. ಬಹುತೇಕ ಎಲ್ಲಾ ಹಳ್ಳಿಗಳಲ್ಲೂ ಇಂತಹ ದೃಶ್ಯಗಳು ಕಾಣ ಸಿಗುತ್ತದೆ.
ಇಂತಹ ಜಾಗದಲ್ಲಿ ಸೇರಿ ಹರಟೆ ಹೊಡೆಯುವಾಗ ಕೆಲವೊಮ್ಮೆ ಕೆಲ ಗ್ರಾಮೀಣ ಆಟಗಳನ್ನು ಆಡುತ್ತಾರೆ. ಆದರೆ ಈ ಆಟಗಳಿಂದ ಕೆಲವು ದುರಂತಗಳೇ ನಡೆದು ಹೋಗುತ್ತವೆ.ಅಂತಹದ್ದೇ ಒಂದು ದುರಂತ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಿಗರನಹಳ್ಳಿ ಗ್ರಾಮದ ಮೂವರು ವೃದ್ಧರಾದ ದೇವರಾಜ, ಕೃಷ್ಣೇಗೌಡ, ತಿಮ್ಮೇಗೌಡ ಒಂದೆಡೆ ಸೇರಿದ್ದಾರೆ. ಕೆಲ ಹೊತ್ತು ಒಟ್ಟಿಗೆ ಸೇರಿ ಹರಟೆಯನ್ನೂ ಹೊಡೆದಿದ್ದಾರೆ. ನಂತರ ಮೂವರ ನಡುವೆ ಇಂದು ವಿಷಯ ಪ್ರಸ್ತಾಪವಾಗಿ ಬಾಜಿ ಕಟ್ಟುವವರೆಗೆ ಹೋಗಿದೆ. ಅದು ಅಂತಿಂತಾ ಬಾಜಿ ಅಲ್ಲ. ಯಾರು ಹೆಚ್ಚು ಮದ್ಯ ಕುಡಿಯುತ್ತಾರೆ ಎನ್ನುವ ಬೆಟ್ಟಿಂಗ್ ನಡೆದಿದೆ.
ಸಿಗರನಹಳ್ಳಿ ಗ್ರಾಮದ ಕೃಷ್ಣೇಗೌಡ ಎನ್ನುವವರು ಈ ಸ್ಪರ್ಧೆ ಏರ್ಪಡಿಸಿದ್ದು, ದೇವರಾಜ ಮತ್ತು ತಿಮ್ಮೇಗೌಡ(60) ನಡುವೆ ಸ್ಪರ್ಧೆ ಶುರುವಾಗಿದೆ. ಗ್ರಾಮದ ಬಸ್ ನಿಲ್ದಾಣದಲ್ಲೇ ಆಟ ಶುರು ಮಾಡಿಕೊಂಡಿರುವ ಮೂವರು ಹಿಗ್ಗಾಮುಗ್ಗಾ ಕುಡಿದಿದ್ದಾರೆ.
ಈ ಬೆಟ್ಟಿಂಗ್‌ನಲ್ಲಿ ತಿಮ್ಮೇಗೌಡ ಎಂಬ ವೃದ್ಧ ಅರ್ಧ ಗಂಟೆಯಲ್ಲಿ 9೦ ಎಂಎಲ್‌ನ 1೦ ಪ್ಯಾಕೆಟ್ ಮದ್ಯ ಸೇವನೆ ಮಾಡಿದ್ದಾರೆ. ಯತ್ತೇಚವಾಗಿ ಹಾಗೂ ನಿರ್ಲಕ್ಷ್ಯದಿಂದ ಮದ್ಯ ಕುಡಿದ ತಿಮ್ಮೇಗೌಡ 3೦ ನಿಮಿಷಗಳ ನಂತರ ರಕ್ತವಾಂತಿ ಮಾಡಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ಗ್ರಾಮದ ನಾಲ್ಕು ಜನ ತಿಮ್ಮೇಗೌಡರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.ಮನೆಯಲ್ಲಿ ಯಾರೂ ಇಲ್ಲದ ಕಾರಣ ನಿತ್ರಾಣಗೊಂಡಿದ್ದ ತಿಮ್ಮೇಗೌಡ ಮಲಗಿದ್ದಲ್ಲೇ ಮೃತ ಪಟ್ಟಿದ್ದಾರೆ.

ಈ ವಿಷಯವನ್ನು ಅಕ್ಕಪಕ್ಕದ ಮನೆಯವರು ಕೆಲಸಕ್ಕೆ ಹೋಗಿದ್ದ ತಿಮ್ಮೇಗೌಡನ ಹೆಂಡತಿ ಮಕ್ಕಳಿಗೆ ತಿಳಿಸಿದ್ದಾರೆ. ಮನೆಗೆ ಬಂದು ತಿಮ್ಮೇಗೌಡ ಪುತ್ರಿ ತನ್ನ ತಂದೆ ರಕ್ತಕಾರಿ ಮಲಗಿದ್ದನ್ನ ಕಂಡು ಎಬ್ಬಿಸಲು ಯತ್ನಿಸಿದಾಗ ಮೃತಪಟ್ಟಿರುವುದು ತಿಳಿದಿದೆ.
ಘಟನೆ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಮೃತರ ಪುತ್ರಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಮೃತದೇಹವನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ಸಂಬಂಧ ದೇವರಾಜ ಹಾಗೂ ಕೃಷ್ಣೇಗೌಡರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಮೊದಲಿನಿಂದಲೂ ಕುಡಿತದ ಚಟ ಮಾಡಿಕೊಂಡಿದ್ದ ತಿಮ್ಮೇಗೌಡ ನೆನ್ನೆ ಕೂಡ ಎಣ್ಣೆ ಸಿಕ್ಕಿದ ಖುಷಿಯಲ್ಲಿ ಹಿಗ್ಗಾಮುಗ್ಗಾ ಕುಡಿದು ತನ್ನ ಪ್ರಾಣಕ್ಕೆ ಸಂಚು ತಂದುಕೊಂಡಿದ್ದಾನೆ.

ಒಟ್ಟಾರೆ ಸುಮ್ಮನಿರಲಾರದೆ ಇರುವೆ ಬಿಟ್ಕೊಂಡರು ಎನ್ನುವ ಹಾಗೆ ಹರಟೆ ಹೊಡೆಯೋಕೆ ಸೇರಿಕೊಂಡಿದ್ದ ಮೂವರು ಎಣ್ಣೆ ಹೊಡೆಯೋ ಬಾಜಿ ಕಟ್ಟಿಕೊಂಡು ಒಬ್ಬ ಇಹಲೋಕ ತ್ಯಜಿಸಿದರೆ ಮತ್ತಿಬ್ಬರು ಜೈಲುಪಾಲಾಗುತ್ತಿರುವುದು ವಿಪರ್ಯಾಸವಾಗಿದೆ.












Click it and Unblock the Notifications