Elephant Arjuna Death: ಅರ್ಜುನನ ಯುಗಾಂತ್ಯ: ಮಣ್ಣಲ್ಲಿ ಮಣ್ಣಾದ ದಸರಾ ಕ್ಯಾಪ್ಟನ್
ಹಾಸನ, ಡಿಸೆಂಬರ್ 05: ನಿನ್ನೆ (ಡಿಸೆಂಬರ್ 04) ಕಾಡಾನೆ ದಾಳಿಯಲ್ಲಿ ಸಾವನ್ನಪ್ಪಿದ ದಸರಾ ಆನೆ ಅರ್ಜುನನ ಅಂತಿಮ ವಿಧಿ-ವಿಧಾನಗಳು ಪೂರ್ಣಗೊಂಡಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ನೆಡು ತೋಪಿನಲ್ಲಿ ಅರ್ಜುನನ ಅಂತ್ಯಕ್ರಿಯೆ ನೆರವೇರಸಲಾಗಿದೆ.
ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ನಾಡಹಬ್ಬ ದಸರಾದಲ್ಲಿ ಭಾಗಿಯಾಗಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಮೊದಲು ಮೈಸೂರಿನ ಅರಮನೆ ಪುರೋಹಿತರಿಂದ ಅರ್ಜುನನ ಕಳೆಬರಕ್ಕೆ ಪೂಜೆ ವಿಧಿ ವಿಧಾನ ನಡೆಸಲಾಯಿತು. ಬಳಿಕ ಹಾಸನ ಜಿಲ್ಲಾಡಳಿತದಿಂದ ಅರ್ಜುನನಿಗೆ ಸರ್ಕಾರಿ ಗೌರವ ಸಮರ್ಪಿಸಲಾಯಿತು.

ಅರ್ಜುನನಿಗೆ ಪೊಲೀಸ್ ಇಲಾಖೆಯ ಸಿಬ್ಬಂದಿಯಿಂದ ಸರ್ಕಾರಿ ಗೌರವ ನೀಡಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯತು. ಅರ್ಜುನನ್ನು ಕಳೆದುಕೊಂಡ ಮಾವುತ ವಿನು ಗೋಳಾಡುತ್ತಲೇ ಅಂತಿಮ ವಿಧಿ-ವಿಧಾನವನ್ನು ನೆರವೇರಿಸಿದರು. ಮಾವುತ ವಿನು ಕಣ್ಣೀರು ಹಾಕುತ್ತಲೇ ಪ್ರದಕ್ಷಿಣಿ ಹಾಕಿ ಮುಂದಿನ ಕಾರ್ಯಕ್ಕೆ ಅನುವು ಮಾಡಿಕೊಟ್ಟರು.
ವಿಧಿ-ವಿಧಾನದ ಪೂಜೆ ಮುಗಿದ ಬಳಿಕ 15 ಅಡಿಗಳ ಆಳದ ಗುಂಡಿಗೆ ಜೆಸಿಬಿಯ ಸಹಾಯದಿಂದ ಅರ್ಜುನನ್ನು ಹಾಕಲಾಯಿತು. ಇದಕ್ಕೂ ಮೊದಲು ಸಮಾಧಿಗೆ ಉಪ್ಪು, ಸುಣ್ಣ ಹಾಗೂ ಬ್ಲೀಚಿಂಗ್ ಪೌಡರ್ ಹಾಕಲಾಗಿತ್ತು. ಅರ್ಜುನನ್ನು ದೇಹವನ್ನು ಸಮಾಧಿಗೆ ಇಳಿಸಿ ಕೊನೆಯಲ್ಲಿ ಮಣ್ಣು ಮುಚ್ಚಲಾಯಿತು. ಮಾವುತರು ಕಣ್ಣೀರು ಹಾಕುತ್ತಲೇ ಅರ್ಜುನನಿಗೆ ಕೊನೆಯ ಹಿಡಿ ಮಣ್ಣು ಹಾಕಿದರು.
ಇನ್ನು ಅರ್ಜುನನ ಸಾವಿನ ಪ್ರಕರಣವನ್ನು ಉನ್ನತ ತನಿಖೆ ನಡೆಸುವಂತೆ ಆಗ್ರಹಿಸಿ ಬೆಳ್ಳಗಿನಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ಪ್ರತಿಭಟನೆ ತೀವ್ರಗೊಂಡಿದೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಘು ಲಾಟಿ ಪ್ರಹಾರ ನಡೆಸಿ ಜನರನ್ನು ನಿಯಂತ್ರಣಕ್ಕೆ ತಂದಿದ್ದಾರೆ.












Click it and Unblock the Notifications