ಹಾಸನ; ಸಂಸದ ಪ್ರತಾಪ್ ಸಿಂಹ ಸಹೋದರನ ವಿಚಾರಣೆ
ಹಾಸನ, ಡಿಸೆಂಬರ್ 31; ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಬಿಜೆಪಿ ನಾಯಕ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ವಿಚಾರಣೆ ನಡೆಯುತ್ತಿದೆ. "ಎಷ್ಟು ಪಿತೂರಿ ಮಾಡುತ್ತಿದ್ದಾರೆ ಎನ್ನುವುದನ್ನು ಬಹಿರಂಗವಾಗಿಯೇ ಹೇಳುತ್ತೇನೆ" ಎಂದು ವಿಕ್ರಂ ಸಿಂಹ ಆಸ್ಪತ್ರೆಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ನಂದಗೊಂಡನಹಳ್ಳಿಯಲ್ಲಿ ಅಕ್ರಮವಾಗಿ ಮರ ಕಡಿದ ಪ್ರಕರಣದಲ್ಲಿ ವಿಕ್ರಂ ಸಿಂಹ ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಅವರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಸನದ ಗೆಂಡೆಕಟ್ಟೆ ಅರಣ್ಯ ಪ್ರದೇಶದ ಅರಣ್ಯ ಇಲಾಖೆ ಗೆಸ್ಟ್ ಹೌಸ್‌ಗೆ ಶನಿವಾರ ರಾತ್ರಿ ಕರೆದುಕೊಂಡು ಬಂದಿದ್ದರು.

ಭಾನುವಾರ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಗೆಸ್ಟ್ ಹೌಸ್‌ನಲ್ಲಿ ವಿಕ್ರಂ ಸಿಂಹ ವಿಚಾರಣೆ ನಡೆಸಿದ್ದಾರೆ. ಬಳಿಕ ಅವರನ್ನು ಆರೋಗ್ಯ ತಪಾಸಣೆಗಾಗಿ ಕರೆದುಕೊಂಡು ಹೋದರು. ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಿದೆ. ಭಾನುವಾರ ನ್ಯಾಯಾಲಯ ರಜೆ ಇರುವ ಹಿನ್ನೆಲೆಯಲ್ಲಿ ಬೇಲೂರು ಅಥವಾ ಹಾಸನದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಿದ್ದಾರೆ.
ವಿಕ್ರಂ ಸಿಂಹ ವಿಚಾರಣೆ ಹಿನ್ನೆಲೆಯಲ್ಲಿಗೆಂಡೆಕಟ್ಟೆ ಬಳಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಅರಣ್ಯ ಪ್ರದೇಶದ ಜಿಂಕೆ ಉದ್ಯಾನಕ್ಕೆ ಜನರಿಗೆ ನಿರ್ಬಂಧ ಹೇರಲಾಗಿದೆ. ಪಾರ್ಕಿಗೆ ಬೆಳಗ್ಗೆ ವಾಕಿಂಗ್ ಮಾಡಲು ಬಂದ ಜನರನ್ನು ಸಹ ಪೊಲೀಸರು ವಾಪಸ್ ಕಳಿಸಿದರು.
ಮಾಧ್ಯಮಗಳ ಜೊತೆ ಮಾತು; ವಿಕ್ರಂ ಸಿಂಹರನ್ನು ಆರೋಗ್ಯ ತಪಾಸಣೆಗಾಗಿ ಭಾನುವಾರ ಬೆಳಗ್ಗೆ ಹಾಸನದ ಹಿಮ್ಸ್‌ಗೆ ಕರೆದುಕೊಂಡು ಬರಲಾಯಿತು. ಆಗ ಮಾಧ್ಯಮಗಳ ಜೊತೆ ಅವರು ಮಾತನಾಡಿದರು, ಆಕ್ರೋಶದ ಹೇಳಿಕೆಗಳನ್ನು ಕೊಟ್ಟರು.
"ತುಂಬಾ ವಿಷಯಗಿಳಿದೆ, ಕಾಲ ಬರಲಿ ಎಲ್ಲ ಹೇಳುತ್ತೇನೆ. ಎಷ್ಟು ಪಿತೂರಿ ಮಾಡುತ್ತಿದ್ದಾರೆ ಎನ್ನುವುದನ್ನು ಬಹಿರಂಗವಾಗಿಯೇ ಹೇಳುವೆ. ಇದರ ಹಿಂದೆ ಯಾರ ಯಾರ ಕೈವಾಡ ಇದೆ ಎಂದು ಎಲ್ಲವನ್ನೂ ಹೇಳುತ್ತೇನೆ" ಎಂದು ವಿಕ್ರಂ ಸಿಂಹ ಹೇಳಿದರು.
"ಯಾರನ್ನು ನೀವು ನಿಷ್ಠಾವಂತ ಅಧಿಕಾರಿ ಎನ್ನುತ್ತಿದ್ದೀರಿ, ಅವರ ನಿಷ್ಠೆ ಯಾರಿಗೆ ಅನ್ನುವುದನ್ನು ಹೇಳುತ್ತೇನೆ. ನಮ್ಮನ್ನ ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ನಮ್ಮ ಅಣ್ಣನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದೆಲ್ಲಾ ವ್ಯವಸ್ಥಿತವಾಗಿಯೇ ಆಗುತ್ತಿದೆ. ಅಧಿಕಾರಿ ಬಗ್ಗೆ ಹೇಳುತ್ತೇನೆ. ಮಾಧ್ಯಮದ ಮುಂದೆ ಬರುತ್ತೇನೆ" ಎಂದು ವಿಕ್ರಂ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.











Click it and Unblock the Notifications