"ಏನಮ್ಮ ಲಂಚಕೊಟ್ಟರೆ ಮಾತ್ರಾನಾ ನೀನು ಕೆಲಸ ಮಾಡೋದು': ತುಂಬಿದ ಸಭೆಯಲ್ಲಿ ಪಿಡಿಓಗೆ ಶಾಸಕರ ತರಾಟೆ
ಹಾಸನ, ಅಕ್ಟೋಬರ್ 19: ಲಂಚ ತೆಗೆದುಕೊಳ್ಳುತ್ತಾರೆ ಎನ್ನುವ ಆರೋಪ ಹೊತ್ತಿರುವ ಗ್ರಾಮ ಪಂಚಾಯತ್ ಅಧಿಕಾರಿಯನ್ನು ಶಾಸಕರು ಬಹಿರಂಗ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ಶಾಸಕ ಹುಲ್ಲಹಳ್ಳಿ ಸುರೇಶ್ ನೇತೃತ್ವದಲ್ಲಿ ಬೇಲೂರು ಪಟ್ಟಣದಲ್ಲಿ ಸಾಮಾನ್ಯ ಸಭೆ ನಡೆದಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಓ ಪೂರ್ಣಿಮಾ ಕೂಡ ಭಾಗಿಯಾಗಿದ್ದಾರೆ. ಈ ಸಭೆಯಲ್ಲಿ ಅಧಿಕಾರಿಗಳ ಮುಂದೆ ಜಾವಗಲ್ ವ್ಯಾಪ್ತಿಯ ಮಹಿಳಾ ಪಿಡಿಓ ಒಬ್ಬರನ್ನು ಶಾಸಕ ಹುಲ್ಲಳ್ಳಿ ಸುರೇಶ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಏನಮ್ಮ ಲಂಚಕೊಟ್ಟರೆ ಮಾತ್ರಾನಾ ನೀನು ಈ ಸ್ವತ್ತು ಮಾಡಿಕೊಡುವುದು, ದುಡ್ಡು ಕೊಟ್ಟರೆ ಮಾತ್ರ ಜನರ ಕೆಲಸ ಮಾಡಿಕೊಡುವುದಾ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಎಷ್ಟು ಲಂಚ ತೆಗೆದುಕೊಂಡಿದ್ದಿಯಾ ಸಾಕ್ಷಿಯನ್ನು ಕರೆಸಲಾ..? ಎಂದು ಸಭೆಯಲ್ಲಿ ಕೇಳಿದ್ದಾರೆ.
ನನಗೆ ಕಟ್ಟ ಕಡೆಯ ವ್ಯಕ್ತಿ ಕೂಡ ಸಮಸ್ಯೆ ಹೇಳಿಕೊಂಡು ಕರೆ ಮಾಡುತ್ತಾರೆ,. ನೀನು ಯಾಕೆ ಪೋನ್ ತೆಗೆಯುವುದಿಲ್ಲ. ನಿನಗೆ ಏನು ಆಗಿದೆ. ಹಿರಿಯ ಅಧಿಕಾರಿಗಳಿಗೆ ಹೇಳದೆ ಕೆಲಸಕ್ಕೆ ರಜೆ ತೆಗೆದುಕೊಂಡಿದ್ದೀಯಾ ಎಂದು ಜಿಲ್ಲಾ ಪಂಚಾಯತಿ ಸಿಇಓ ಪೂರ್ಣಿಮಾ ಹಾಗೂ ಇತರ ಅಧಿಕಾರಿಗಳ ಎದುರು ಪ್ರಶ್ನಿಸಿದ್ದಾರೆ. ಶಾಸಕ ಹುಲ್ಲಳ್ಳಿ ಸುರೇಶ್ ಅವರ ಗರಂ ಮಾತಿನಿಂದ ಜಾವಗಲ್ ವ್ಯಾಪ್ತಿಯ ಮಹಿಳಾ ಪಿಡಿಓ ಕಕ್ಕಾಬಿಕ್ಕಿಯಾಗಿದ್ದು, ಉತ್ತರಿಸದೇ ನಿಂತಿದ್ದಾರೆ.
ರಸ್ತೆ ಸಂಚಾರಕ್ಕೆ ಅಡ್ಡಿಯಾದ ಕೊಳಚೆ ನೀರು, ಕೋಡಿಹಳ್ಳಿ ಗ್ರಾಮಸ್ಥರು ಹೈರಾಣು
ಚಿಕ್ಕಮಗಳೂರು : ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಿಂದ ಕೋಡಿಹಳ್ಳಿ ಮಾರ್ಗವಾಗಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪಟ್ಟಣದ ರೈಲ್ವೆ ಅಂಡರ್ ಬ್ರಿಡ್ಜ್ ಸಮೀಪ ಕೊಳಚೆ ನೀರು ಹರಿಯುತ್ತಿರುವುದರಿಂದ ಈ ಮಾರ್ಗವಾಗಿ ಸಂಚರಿಸಲು ಗ್ರಾಮಸ್ಥರು ಹರಸಾಹಸ ಪಡುವಂತಾಗಿದೆ.

ಬಿ.ಕೋಡಿಹಳ್ಳಿ, ಹೂವಿನಹಳ್ಳಿ, ಮುಂಡ್ರೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಪಟ್ಟಣದ ಮಾರ್ಗದ ಕ್ಯಾಂಪ್, ಸಜ್ಜನ್‌ರಾವ್ ಬಡಾವಣೆ, ಪುರಿಭಟ್ಟಿ, ಉಪ್ಪಾರ ಕ್ಯಾಂಪ್ ಬಡಾವಣೆಗಳ ಚರಂಡಿ ನೀರು ಬರುತ್ತಿದೆ. ರಸ್ತೆಗೆ ಡಕ್ ನಿರ್ಮಿಸದಿರುವುದರಿಂದ ಕೊಳಚೆ ನೀರು ಮುಂದಕ್ಕೆ ಸಾಗದೆ ಅಂಡರ್‌ಬ್ರಿಡ್ಜ್ ಒಳಗೆ ಬರುತ್ತಿದ್ದು, ದುರ್ವಾಸನೆ ಹಾಗೂ ಕೊಳಚೆ ತುಳಿಯುವ ಜೊತೆಗೆ ದ್ವಿಚಕ್ರ ಹಾಗೂ ಸೈಕಲ್ ಸವಾರರು ಜೀವ ಭಯದಲ್ಲಿಯೇ ಸಂಚರಿಸುತ್ತಿದ್ದಾರೆ.
ನೀರು ಹರಿಯದಂತೆ ಕ್ರಮಕೈಗೊಳ್ಳುವಂತೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮ್ಮ ಗ್ರಾಮಗಳಿಗೆ ತೆರಳಲು ಬೇರೆ ಯಾವುದೇ ರಸ್ತೆ ಇಲ್ಲ. ಅಲ್ಲದೆ ದೊಡ್ಡ ವಾಹನಗಳು ಇಲ್ಲಿ ಬರದಂತೆ ಅಂಡರ್‌ಬ್ರಿಡ್ಜ್ ಇರುವುದರಿಂದ ಬಳ್ಳಿಗನೂರು ಗ್ರಾಮದ ಮಾರ್ಗವಾಗಿ ಸಂಚರಿಸಬೇಕಾಗಿದೆ. 8 ಕಿಮೀ ಸುತ್ತಿ ನಮ್ಮ ಗ್ರಾಮ ತಲುಪಬೇಕಿದೆ. ಅಲ್ಲದೆ ಇಲ್ಲಿನ ರಸ್ತೆಯೂ ಸಂಪೂರ್ಣ ಹಾಳಾಗಿದೆ ಎಂದು ಕೋಡಿಹಳ್ಳಿ ಗ್ರಾಮದ ನಿವಾಸಿ ಸಂತೋಷ್ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.












Click it and Unblock the Notifications