ಹಾಸನದಲ್ಲಿ ಕೊರಿಯರ್ ಮೂಲಕ ಬಂದಿದ್ದ ಮಿಕ್ಸಿ ಸ್ಫೋಟ: ವ್ಯಕ್ತಿಗೆ ಗಂಭೀರ ಗಾಯ
ಹಾಸನ, ಡಿಸೆಂಬರ್ 26: ಕೊರಿಯರ್ ಕಚೇರಿಗೆ ಪಾರ್ಸಲ್ ಬಂದಿದ್ದ ಮಿಕ್ಸಿ ಸ್ಟೋಟವಾಗಿರುವ ಘಟನೆ ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ನಡೆದಿದೆ. ಘಟನೆಯಲ್ಲಿ ಅಂಗಡಿ ಮಾಲೀಕ ಶಶಿ ಗಂಭೀರ ಗಾಯಗೊಂಡಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರಡು ದಿನಗಳ ಹಿಂದೆ ಡಿಟಿಡಿಸಿ ಕೊರಿಯರ್ ಕಚೇರಿ ಮಿಕ್ಸಿ ಬಾಕ್ಸ್‌ವೊಂದು ಪಾರ್ಸಲ್ ಬಂದಿತ್ತು. ಅಂಗಡಿ ಮಾಲೀಕ ಶಶಿ ಬಾಕ್ಸ್‌ನಲ್ಲಿ ನಮೂದಿಸಲಾದ ಹೆಸರಿಗೆ ನೀಡಿದ್ದರು. ಆದರೆ ಆ ವ್ಯಕ್ತಿ ಎರಡು ದಿನಗಳ ಬಳಿಕ ಮಿಕ್ಸಿ ಸೂಕ್ತ ವಿಳಾಸದಿಂದ ಬಂದಿಲ್ಲ ಎಂದು ಡಿಟಿಡಿಸಿ ಅಂಗಡಿಗೆ ವಾಪಾಸ್ ನೀಡಿದ್ದಾನೆ. ವಾಪಸ್ ಪಡೆಯುವ ವೇಳೆ ಶಶಿ ಮಿಕ್ಸಿ ಆನ್ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಿಕ್ಸಿ ಏಕಾಏಕಿ ಸ್ಫೋಟಗೊಂಡಿದೆ.
ಸ್ಫೋಟಗೊಂಡ ತೀವ್ರತೆಗೆ ಕೊರಿಯರ್ ಕಚೇರಿಯ ಗ್ಲಾಸ್ ಪುಡಿಪುಡಿಯಾಗಿದ್ದು, ಗೋಡೆಗಳಿಗೂ ಹಾನಿಯಾಗಿದೆ. ಘಟನೆಯಲ್ಲಿ ಮಾಲೀಕ ಶಶಿ ಅವರ ಕೈ, ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಸ್‌ಪಿ ಹರಿರಾಮ್ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‌ಪಿ ಹರಿರಾಮ್ ಶಂಕರ್, "ಕೆ.ಆರ್ ಪುರಂನ ಡಿಟಿಡಿಸಿ ಕೊರೊಯರ್ ಶಾಪ್‌ನಲ್ಲಿ ಮಿಕ್ಸಿ ಸ್ಫೋಟ ಸಂಭವಿಸಿದೆ. ಕೊರಿಯರ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿದೆ ಎನ್ನುವ ಮಾಹಿತಿ ಇದೆ. ಕೊರಿಯರ್ ಆಫೀಸ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಗೆ ದೇಹದ ನಾಲ್ಕು ಭಾಗದಲ್ಲಿ ಪೆಟ್ಟಾಗಿದೆ. ಯಾವುದೇ ಪ್ರಾಣಾಪಾಯ ಇಲ್ಲ. ಮಿಕ್ಸಿಯ ಬ್ಲೇಡ್‌ನಿಂದ ಅವರಿಗೆ ಪೆಟ್ಟಾಗಿದೆ" ಎಂದರು.
ಮಾಹಿತಿ ಮುಂದುವರಿಸಿದ ಅವರು, "ಮೈಸೂರಿನಿಂದ ಎಫ್.ಎಸ್.ಎಲ್ ಅಧಿಕಾರಿಗಳು ಬರುತ್ತಾರೆ. ಮಿಕ್ಸಿ ಯಾಕೆ ಮತ್ತು ಹೇಗೆ ಬ್ಲಾಸ್ಟ್ ಆಗಿದೆ ಎಂದು ಪರಿಶೀಲನೆ ನಡೆಯುತ್ತದೆ. ಕೊರಿಯರ್ ಎಲ್ಲಿಂದ ಬಂತು ಎನ್ನುವ ಮಾಹಿತಿ ಇದೆ. ಎಲ್ಲವನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಯಾರೂ ಊಹಾಪೋಹಗಳಿಗೆ ಒಳಗಾಗಿ ಗೊಂದಲ ಆಗುವುದು ಬೇಡ. ಮಿಕ್ಸಿ ಶಾರ್ಟ್ ಸರ್ಕ್ಯೂಟ್‌ನಿಂದ ಸ್ಫೋಟಗೊಂಡಿದೆಯೋ ಅಥವಾ ಬೇರೆ ಕಾರಣ ಎನ್ನುವುದು ತನಿಖೆ ಬಳಿಕ ಗೊತ್ತಾಗಲಿದೆ. ಸದ್ಯಕ್ಕೆ ಯಾವುದೇ ಆತಂಕ ಇಲ್ಲ," ಎಂದರು.











Click it and Unblock the Notifications