ಹಾಸನ: ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ
ಹಾಸನ, ಜೂನ್.24: ಜೂನ್ 18ರಿಂದ ಕಾಣೆಯಾಗಿದ್ದ ಬಾಲಕಿಯೊಬ್ಬಳ (15) ಶವ ಹಾಸ್ಟೆಲ್ ರೂಮ್‍ನಲ್ಲೇ ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ.
ಬಾಲಕಿ ಶವ ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಅನುಪಯುಕ್ತ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 10ನೇ ತರಗತಿ ಓದುತ್ತಿದ್ದ ಈ ವಿದ್ಯಾರ್ಥಿನಿ 18ರಿಂದ ಕಾಣೆಯಾಗಿದ್ದಳು ಎಂದು ಹಾಸ್ಟೆಲ್ ನ ವಾರ್ಡನ್ ನಗರ ಮಹಿಳಾ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇದೀಗ ಹಾಸ್ಟೆಲ್ ಕೊಠಡಿಯಲ್ಲೇ ಹುಡುಗಿಯ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪೊಲೀಸರ ಪ್ರಕಾರ, ಈಕೆ ತನ್ನ ಸಹಪಾಠಿಯೊಡನೆ ನಾಲ್ವರು ಯುವಕರೊಂದಿಗೆ ಮೈಸೂರಿಗೆ ತೆರಳಿದ್ದಳು ಎನ್ನಲಾಗಿದೆ.

ಈ ಯುವಕರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಈ ಬಾಲಕಿಯ ನಾಪತ್ತೆ ಪ್ರಕರಣ ಆತಂಕ ಕೆರಳಿಸಿತ್ತು.
ಶನಿವಾರ ಸಂಜೆ ಆಕೆ ಉಳಿದುಕೊಂಡಿದ್ದ ಹಾಸ್ಟೆಲ್ ಹಿಂಭಾಗದಲ್ಲಿನ ಅನುಪಯುಕ್ತ ಕೊಠಡಿಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ನೋಡಿದಾಗ ಬಾಲಕಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.












Click it and Unblock the Notifications