ಹಳಿ ಮೇಲೆ ಭಾರೀ ಗುಡ್ಡ ಕುಸಿತ: ಹಾಸನ-ಮಂಗಳೂರು ರೈಲು ಸ್ಥಗಿತ
ಹಾಸನ, ಆಗಸ್ಟ್ 10: ಹಾಸನ-ಮಂಗಳೂರು ಸಂಪರ್ಕ ಕಲ್ಪಿಸುವ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತವಾಗಿದೆ. ಭಾರೀ ಪ್ರಮಾಣದ ಮಣ್ಣು, ಮರ-ಗಿಡಗಳು ಹಳಿಯ ಮೇಲೆ ಬಿದ್ದಿದೆ. ಆದ್ದರಿಂದ ಹಾಸನ-ಮಂಗಳೂರು ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ರೈಲಿನಲ್ಲಿಯೇ ಕಾದು ಕುಳಿತಿದ್ದಾರೆ. ಮಣ್ಣು ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.
ರೈಲ್ವೆ ಹಳಿ ಮೇಲೆ ಮತ್ತೆ ಗುಡ್ಡ ಕುಸಿದು ಬಿದ್ದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ನಡೆದಿದೆ. ಹಳಿಯ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು, ಮರಗಳು ಸಹ ಬಿದ್ದಿವೆ. ಕಿಲೋಮೀಟರ್ ಸಂಖ್ಯೆ 42/43ರ ಮಧ್ಯೆ ಈ ಭೂಕುಸಿತವಾಗಿದೆ.

ಈ ಭೂ ಕುಸಿತದ ಕಾರಣ ಹಾಸನ-ಮಂಗಳೂರು ಮಾರ್ಗದ ರೈಲುಗಳ ಸಂಚಾರ ಸ್ಥಗಿತವಾಗಿದೆ. ಹಳಿಯ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ. ಆದರೆ ಈ ಕಾರ್ಯಾಚರಣೆ ಮುಗಿಯಲು ಹಲವಾರು ಗಂಟೆಗಳು ಬೇಕು ಎಂದು ಅಂದಾಜಿಸಲಾಗಿದೆ.
ಹಾಸನ-ಮಂಗಳೂರು ಮತ್ತು ಮಂಗಳೂರು-ಹಾಸನ ರೈಲು ಸಂಚಾರ ಸ್ಥಗಿತವಾಗಿದೆ. ಸಕಲೇಶಪುರ, ಯಡಕುಮರಿ, ಶಿರವಾಗಿಲು, ಆಲೂರು ಸೇರಿ 6 ಕಡೆ ವಿವಿಧ ರೈಲುಗಳನ್ನು ದಿಢೀರ್ ಎಂದು ನಿಲುಗಡೆ ಮಾಡಲಾಗಿದೆ.
Passengers please note!
— Dakshina Kannada District Railway Users (@dkdistrictrail) August 10, 2024
Due to landslide occured between Ballupete and Sakleshpur, all trains running in Padil-Hassan section are running late.
Please travel safely.
In case of emergency,contact @RailwaySeva or dial 139. pic.twitter.com/I9A6bg1Z0Q
ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ರೈಲಿನಲ್ಲಿಯೇ ಅವರು ಕುಳಿತಿದ್ದು, ಮಣ್ಣು ತೆರವು ಕಾರ್ಯಾಚರಣೆ ಬಳಿಕ ರೈಲುಗಳ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ.
6 ರೈಲುಗಳ ಸಂಚಾರ ಸ್ಥಗಿತಗೊಂಡಿರುವ ಕಾರಣ ಪರ್ಯಾಯ ವಾಹನದ ವ್ಯವಸ್ಥೆ ಮಾಡಲು ಸಹ ಇಲಾಖೆ ಚಿಂತನೆ ನಡೆಸುತ್ತಿದೆ. ಮಣ್ಣು ತೆರವು ಕಾರ್ಯಾಚರಣೆಯನ್ನು ಜೆಸಿಬಿಗಳ ಮೂಲಕ ಆರಂಭಿಸಲಾಗಿದೆ.
ಭಾರೀ ಮಳೆಯ ಕಾರಣ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಡಕಮುರಿ-ಕಡಗರವಳ್ಳಿ ನಡುವೆ ದೋಣಿಹಗಲ್‌ನಲ್ಲಿ ರೈಲ್ವೆ ಹಳಿಯ ಮೇಲೆ ಗುಡ್ಡ ಕುಸಿತವಾಗಿತ್ತು. ಹಳಿಯ ಕೆಳಗೆ ಸಹ ಮಣ್ಣು ಕುಸಿದು, ಹಾಸನ-ಮಂಗಳೂರು ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು 11 ದಿನಗಳ ಕಾರ್ಯಾಚರಣೆ ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಆರಂಭಿಸಲಾಗಿತ್ತು. ಈಗ ಮತ್ತೆ ಸಕಲೇಶದಪುರದಲ್ಲಿ ರೈಲು ಹಳಿಯ ಮೇಲೆ ಗುಡ್ಡ ಕುಸಿದಿದೆ.
ಹಾಸನ-ಮಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡು ಹಲವು ರೈಲುಗಳು ಸಕಲೇಶಪುರ, ಯಡಕುಮರಿ, ಶಿರವಾಗಿಲು, ಆಲೂರು ಸೇರಿ 6 ಕಡೆ ನಿಂತಿವೆ. ನೈಋತ್ಯ ರೈಲ್ವೆ ಮೈಸೂರು ವಿಭಾಗ ಪ್ರಯಾಣಿಕರಿಗೆ ರೈಲು ನಿಲ್ದಾಣದಲ್ಲಿ ಉಪಹಾರ, ಊಟ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದೆ. ಮಣ್ಣು ಕುಸಿದಿರುವ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಮಣ್ಣು ಮತ್ತೆ ಮತ್ತೆ ಕುಸಿಯುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಗುಡ್ಡ ಕುಸಿದಿರುವ ಕಾರಣ ರೈಲು ನಂಬರ್ 16539 ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲಿನ ಆಗಸ್ಟ್ 10ರ ಸಂಚಾರವನ್ನು ಚನ್ನರಾಯಪಟ್ಟಣಕ್ಕೆ ಸೀಮಿತಗೊಳಿಸಲಾಗಿದೆ. ಮಣ್ಣು ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಟ್ವೀಟ್ ಮೂಲಕ ಮಾಹಿತಿ ನೀಡಿದೆ.












Click it and Unblock the Notifications