Sindhanur Constituency: ಗೌಡರ ಕೋಟೆಯಲ್ಲಿ ಗೆದ್ದವರೇ ಮಹಾಶೂರ; ಗೆಲ್ಲುವಿಗಾಗಿ ಕೈ-ದಳ ಪೈಪೋಟಿ!
ಸದ್ಯ ಜೆಡಿಎಸ್ ಭದ್ರಕೋಟೆಯಾಗಿರುವ ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದಲ್ಲಿ ಈ ಬಾರೀ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿ ಏರ್ಪಡುವ ಸಾಧ್ಯತೆಗಳು ಹೆಚ್ಚಿವೆ. ವರದಿ, ವಿಶ್ಲೇಷಣೆ ಓದಿ
ರಾಯಚೂರು ಜಿಲ್ಲೆಯ ಮುಖ್ಯ ತಾಲೂಕು ಕೇಂದ್ರ ಸಿಂಧನೂರು. ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಿದಾಗಿದೆ. ತಾಲೂಕು ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆ. ಕ್ಷೇತ್ರದ ವ್ಯಾಪ್ತಿಯ ಬಹುತೇಕ ಭೂಮಿಯು ಕೃಷಿ ಯೋಗ್ಯವಾದ ಕಪ್ಪು ಮಣ್ಣಿನಿಂದ ಕೂಡಿದೆ. ತುಂಗಭದ್ರಾ ನದಿ ನೀರನ್ನು ಉಪಯೋಗಿಸಿಕೊಂಡು ಭತ್ತ ಬೆಳೆಯಲಾಗುತ್ತದೆ.
ಸಿಂಧನೂರನ್ನು 'ರಾಯಚೂರಿನ ಭತ್ತದ ಕಣಜ' ಎಂದು ಕರೆಯಲಾಗುತ್ತದೆ. ತುಂಗಭದ್ರಾ ನದಿ ನೀರಿನ ಲಭ್ಯತೆ ಇರುವುದದಿಂದ ವರ್ಷದಲ್ಲಿ ಎರಡು ಬಾರಿ ಭತ್ತವನ್ನು ಬೆಳೆಯುತ್ತಾರೆ. ಕೃಷಿ ಚಟುವಟಿಕೆಗಳು ವರ್ಷಪೂರ್ತಿ ನಡೆಯುವುದರಿಂದ ಅತೀ ಹೆಚ್ಚು ಟ್ರಾಕ್ಟರ್ ಮಾರಾಟ ಇಲ್ಲಿ ನಡೆಯುತ್ತದೆ. ವಿದೇಶಗಳಿಗೆ ರಫ್ತಾಗುವ ಸೋನಾ ಮಸೂರಿ ಮತ್ತು ಬಾಸುವತಿ ಅಕ್ಕಿಯನ್ನು ಸಿಂಧನೂರಿನಲ್ಲಿ ಬೆಳೆಯಲಾಗುತ್ತಿದೆ.

ಕನ್ನಡ, ತಮಿಳು, ಬೆಂಗಾಲಿ, ರಾಜಸ್ಥಾನಿ, ಉರ್ದು ಹೀಗೆ ವಿವಿಧ ಭಾಷಗಳನ್ನು ಮಾತನಾಡುವ ಜನರು ಇಲ್ಲಿ ಸಿಗುತ್ತಾರೆ. ಸಿಂಧನೂರಿನಲ್ಲಿರುವ ಅಂಬಾದೇವಿಯ ಜಾತ್ರೆ ಪ್ರಸಿದ್ಧಿ ಪಡೆದಿದೆ. ಸಂಜೆ ತೇರು ಎಳೆಯುವುದು ಇಲ್ಲಿನ ಜಾತ್ರೆಯ ವಿಶೇಷವಾಗಿದೆ.
2013ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಬಾದರ್ಲಿ ಹಂಪನಗೌಡರು 49,213 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ನ ವೆಂಕಟರಾವ್ ನಾಡಗೌಡ 30,895 ಮತ, ಬಿಜೆಪಿಯ ಕೊಲ್ಲಾ ಶೇಷಗಿರಿ ರಾವ್ 10,557 ಮತಗಳನ್ನು ಪಡೆದಿದ್ದಾರೆ. 2018 ರಲ್ಲಿ ಜೆಡಿಎಸ್ ಪಕ್ಷದಿಂದ ವೆಂಕಟರಾವ್ ನಾಡಗೌಡ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹನುಮಗೌಡ ಬದ್ರಳ್ಳಿ 1597 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ವೆಂಕಟರಾವ್ ನಾಡಗೌಡರು 71,514 ಮತಗಳನ್ನ ಪಡೆದುಕೊಂಡಿದ್ದರೇ, ಕಾಂಗ್ರೆಸ್ ನಾ ಹನುಮಗೌಡ ಬದ್ರಳ್ಳಿ 69,917 ಮತಗಳನ್ನ ಪಡೆದಿದ್ದು, ಬಿಜೆಪಿ ಅಭ್ಯರ್ಥಿಯಾಗಿದ್ದ ಕೊಲ್ಲ ಶೇಷಗಿರಿ ರಾವ್ ಠೇವಣಿಯನ್ನು ಕಳೆದುಕೊಂಡಿದ್ದರು.
ಸಿಂಧನೂರು ವಿಧಾನಸಭಾ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಹಣಾಹಣಿಯಿದೆ, ಇಲ್ಲಿ ಬಿಜೆಪಿಗೆ ಸದ್ಯ ನೆಲೆ ಇಲ್ಲ. ಇಲ್ಲಿಯೂ ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜೆಡಿಎಸ್ ಗೆಲ್ಲುತ್ತಿವೆ. ಹೀಗಾಗಿ ಈ ಬಾರಿಯ ಕಾಂಗ್ರೆಸ್ ಟಿಕೆಟ್ ಗಾಗಿ ಭಾರೀ ಪೈಪೋಟಿ ಶುರುವಾಗಿದೆ. ಸಿಂಧನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮತ್ತು ಬಸನಗೌಡ ಬಾದರ್ಲಿ ನಡುವೆ ಬಿಗ್ ಫೈಟ್ ಇರುವ ವಿಚಾರ ಎಲ್ಲರಿಗೂ ಗೊತ್ತು. ಇದರ ಮಧ್ಯೆ ಈಗ ಹೊಸದೊಂದು ಚರ್ಚೆ ಶುರುವಾಗಿದೆ. ಹಿಂದುಳಿದ ನಾಯಕ ಎಂದು ಗುರುತಿಸಿಕೊಂಡ ಕಾಂಗ್ರೆಸ್ ಮುಖಂಡ ಕೆ. ಕರಿಯಪ್ಪ ಗೆ ಟಿಕೆಟ್ ನೀಡಬೇಕು ಎಂಬ ಕೂಗು ಜೋರಾಗಿ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಹಂಪನಗೌಡ ಬಾದರ್ಲಿ, ಬಸನಗೌಡ ಬಾದರ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದರೆ, ಬಿಜೆಪಿ ಪಕ್ಷದಿಂದ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ , ಉದ್ಯಮಿ ರಾಜೇಶ್ ಹಿರೇಮಠ, ಅಮರೇಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.ಸದ್ಯ ಜೆಡಿಎಸ್ ಆಡಳಿತ ಇರುವ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಶಾಸಕ ವೆಂಕಟರಾವ್ ಈ ಬಾರಿ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಗೆಲುವು ಸಾಧಿಸುವ ಭರವಸೆಯಲ್ಲಿದ್ದಾರೆ.

ಒಟ್ನಾಲಿ ಸಿಂಧನೂರು ವಿಧಾನ ಸಭಾ ಕ್ಷೇತ್ರದ ಈ ಬಾರಿ ಚುನಾವಣೆಯ ಹೈಲೆಟ್ಸ್ ಇದಾಗಿದ್ದು, ಪ್ರತಿ ಬಾರಿಯಂತೆ ಜಾತಿಯ ಆಧಾರದ ಮೇಲೆ ನಡೆಯುತ್ತಿರುವ ಮತಗಳ ಸಮೀಕರಣ ಈ ಬಾರಿಯೂ ನಡೆದಿದೆ. ಆದರೆ ಈ ಬಾರಿ ತುಸು ಭಿನ್ನ ಎನಿಸಿದೆ. ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಲಿಂಗಾಯತ, ಕುರುಬ, ಮುಸ್ಲಿಂ ಮತಗಳು ಈ ಬಾರಿ ಹೊಡೆದು ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ ಗೆಲುವಿನ ಬಾಗಿಲು ಯಾರಿಗೆ ಓಪನ್ ಆಗುತ್ತದೆ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications