ಹಾಸನ ಜೆಡಿಎಸ್ ಟಿಕೆಟ್ ಗೊಂದಲ: ಕುಮಾರಸ್ವಾಮಿ ಸೂಚನೆ ಮೇರೆಗೆ ಎಚ್.ಪಿ ಸ್ವರೂಪ್ ಭರ್ಜರಿ ಪ್ರಚಾರ
ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೂಚನೆ ಮೇರೆಗೆ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ಪ್ರಚಾರ ಆರಂಭಿಸಿದ್ದು, ಮೂರನೇ ಅಭ್ಯರ್ಥಿಯೂ ಸಾಮಾನ್ಯ ಕಾರ್ಯಕರ್ತ ಎಂಬ ರೇವಣ್ಣ ಅಸ್ತ್ರಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಹಾಸನ, ಮಾರ್ಚ್ 17 : ಹಾಸನ ಜೆಡಿಎಸ್ ಟಿಕೆಟ್ ಗೊಂದಲ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೂರನೇ ಅಭ್ಯರ್ಥಿಯ ಪ್ರವೇಶದ ನಡುವೆ ಸ್ವರೂಪ್ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೂಚನೆ ಮೇರೆಗೆ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ಪ್ರಚಾರ ಆರಂಭಿಸಿದ್ದು, ಮೂರನೇ ಅಭ್ಯರ್ಥಿಯೂ ಸಾಮಾನ್ಯ ಕಾರ್ಯಕರ್ತ ಎಂಬ ರೇವಣ್ಣ ಅಸ್ತ್ರಕ್ಕೆ ತಿರುಗೇಟು ನೀಡಿದ್ದಾರೆ.
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ ಗೊಂದಲದ ಗೂಡಾಗಿದೆ. ಮೂರನೇ ಅಭ್ಯರ್ಥಿ ಕೆ.ಎಂ.ರಾಜೇಗೌಡ ಪ್ರವೇಶದ ಬಳಿಕವೂ ಎಚ್.ಪಿ.ಸ್ವರೂಪ್ ಧೃತಿಗೆಡದೆ ಗುರುವಾರ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ. ನಗರದ ಎಂ.ಜಿ. ರಸ್ತೆಯಲ್ಲಿರುವ ರಾಘವೇಂದ್ರ ಮಠದಲ್ಲಿ ಪೂಜೆ ಸಲ್ಲಿಸಿ, ನೂರಾರು ಕಾರ್ಯಕರ್ತರ ಜೊತೆಯಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಕೆ.ಎಂ.ರಾಜೇಗೌಡ ಕೂಡಾ ಸಾಮಾನ್ಯ ಕಾರ್ಯಕರ್ತ ಎನ್ನುವ ಅಜೆಂಡಾದ ಮೇರೆಗೆ ಮತ್ತೊಂದು ದಾಳ ಉರುಳಿಸಿದ್ದ ರೇವಣ್ಣ ಅಸ್ತ್ರಕ್ಕೆ, ಸ್ವರೂಪ್‌ರಿಂದ ಪ್ರಚಾರ ಮಾಡಿಸುವ ಮೂಲಕ ಪ್ರತ್ಯಾಸ್ತ್ರ ಪ್ರಯೋಗ ಮಾಡಿದ್ದಾರೆ. ರೇವಣ್ಣ ಕುಟುಂಬ ರಾಜೇಗೌಡ ಹೆಸರು ತೇಲಿ ಬಿಡುತ್ತಲೇ ಎಚ್ಚೆತ್ತಿರುವ ಕುಮಾರಸ್ವಾಮಿ, ಮತ್ತೆ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗದಂತೆ ಸ್ವರೂಪ್‌ಗೆ ಸಕ್ರಿಯಆಗಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇತ್ತ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಇಲ್ಲ ಎನ್ನುವ ಮಾಹಿತಿ ಗೊತ್ತಾಗ್ತಿದ್ದಂತೆ, ರಾಜೇಗೌಡರಿಗೆ ಟಿಕೆಟ್ ಕೊಡಿಸಬೇಕು ಎಂದು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.

ಹಾಸನ ಟಿಕೆಟ್ ಗೊಂದಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, 'ನಾನು ಕೂಡಾ ರಾಜೇಗೌಡರಿಗೆ ಕರೆ ಮಾಡಿ ಚುನಾವಣೆ ಸಿದ್ಧತೆ ಹೇಗೆ ಮಾಡಿಕೊಂಡಿದ್ದೀರಿ ಎಂದು ಕೇಳಿದ್ದೇನೆ, ಅವರ ಹೆಸರು ದೇವೇಗೌಡರ ಮುಂದೆ ಚರ್ಚೆ ಆಗಿರುವುದು ನಿಜ. ಹಾಗಂತ ಅದೇ ಫೈನಲ್ ಅಲ್ಲ, ಹಾಸನದ ಬಗ್ಗೆ ನನ್ನದೇ ಮಾಹಿತಿ ಸಂಗ್ರಹ ಮಾಡಿದ್ದೇನೆ, ಇನ್ನೊಂದು ವಾರದಲ್ಲಿ ಅಂತಿಮ ಪಟ್ಟಿ ಬಿಡುಗಡೆಗೊಳಿಸುತ್ತೇವೆ' ಎಂದಿದ್ದರು.
'ಚುನಾವಣೆಯಲ್ಲಿ ನನ್ನ ಅಭ್ಯರ್ಥಿ ಗೆಲ್ಲಬೇಕು, ಕ್ಷೇತ್ರದಲ್ಲಿ ನನ್ನ ಕಾರ್ಯಕರ್ತರು ಬಲಿಪಶು ಆಗಬಾರದು, ಕಾರ್ಯಕರ್ತರು ಉಳಿಯುವಂತೆ, ಅವರು ಅನಾಥರಾಗದಂತೆ ನಾವು ತೀರ್ಮಾನ ಮಾಡುತ್ತೇವೆ, ಇನ್ನೊಂದು ವಾರ ಅಥವಾ ಹತ್ತು ದಿನದಲ್ಲಿ ಎಲ್ಲದಕ್ಕೂ ಅಂತಿಮ ತೆರೆ ಎಳೆಯುತ್ತೇವೆ, ಒಳ್ಳೆಯ ಒಂದು ಅಭ್ಯರ್ಥಿಯನ್ನು ಘೋಷಣೆ ಮಾಡಲು ದೇವೇಗೌಡರು ಸಮರ್ಥರಿದ್ದಾರೆ, ಅವರ ಮುಖಾಂತರವೇ ಅಭ್ಯರ್ಥಿ ಘೋಷಣೆ ಮಾಡಿಸುತ್ತೇವೆ' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications