ಯುದ್ಧ ಭೂಮಿ ಇಸ್ರೇಲ್‌ನಲ್ಲಿ ಸಿಲುಕಿದ ಹಾಸನದ 20 ಮಂದಿ: ಪೋಷಕರ ಎದೆಯಲ್ಲಿ ಢವಢವ
ಹಾಸನ, ಅಕ್ಟೋಬರ್ 10: ದೂರದ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸುತ್ತಿರುವುದರಿಂದ ಅಲ್ಲಿ ನೆಲೆಸಿರುವ ಜಿಲ್ಲೆಯ ಹತ್ತಾರು ಮಂದಿ ಕನ್ನಡಿಗರು ಆತಂಕಕ್ಕೆ ಒಳಗಾಗಿದ್ದಾರೆ. ಇಸ್ರೇಲ್‌ನ ವಿವಿಧೆಡೆ ನೆಲೆಸಿರುವ ಹಾಸನ ಜಿಲ್ಲೆಯ ಇಪ್ಪತ್ತಕ್ಕೂ ಹೆಚ್ಚು ಮಂದಿ ಚನ್ನರಾಯಪಟ್ಟಣ ತಾಲೂಕಿನ ಡಿಂಕ, ಸಕಲೇಶಪುರ ತಾಲೂಕಿನ ಲಕ್ಕುಂದ, ಅಂಕಿಹಳ್ಳಿ, ಬೆಳಗೊಡು ಗ್ರಾಮದವರು ಎಂದು ತಿಳಿದು ಬಂದಿದೆ.
ಸಕಲೇಶಪುರ ತಾಲೂಕು ಅಂಕಿಹಳ್ಳಿ ಗ್ರಾಮದ ಆಂತೋಣಿ, ಸಕಲೇಶಪುರ ಪಟ್ಟಣದ ನವೀನ್, ಬೇಲೂರು ತಾಲೂಕು ಲಕ್ಕುಂದ ಗ್ರಾಮದ ರೀಮಾ ಪಿಂಟೋ, ಜಾನ್‌ಪಿಂಟೋ, ವಿನಿತಾ ಪ್ರಿಯಾ ಪಿಂಟೋ, ರೋಷನ್ ಪಿಂಟೋ ಇಸ್ರೇಲ್‌ನ ತಲವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಜಾನ್ಸನ್, ನವೀನ್, ಡೀನಾ ಡಿಸೋಜಾ, ಎಲಿಜಾ ಪಿಂಟೋ, ಅಂತೋನಿ ಡಿಸೋಜಾ, ಕೃಷ್ಣೇಗೌಡ ಮೊದಲಾದವರು ಇಸ್ರೆಲ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇವರೆಲ್ಲರೂ ನರ್ಸಿಂಗ್ ಹಾಗೂ ವಿವಿಧ ಉದ್ಯೋಗ ಮಾಡುತ್ತಾ ಜೆರುಸಲೇಮ್ ಸೇರಿದಂತೆ ಮೊದಲಾದ ಕಡೆಗಳಲ್ಲಿ ನೆಲೆಸಿದ್ದಾರೆ.

ಈ ಪೈಕಿ ಚನ್ನರಾಯಪಟ್ಟಣ ತಾಲೂಕು ಡಿಂಕ ಗ್ರಾಮದ ಕೃಷ್ಣೇಗೌಡ ಎಂಬುವರು ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಕಳೆದ ಇಪ್ಪತ್ತು ವರ್ಷಗಳಿಂದ ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ. ಭಾನುವಾರ ತಮ್ಮ ಸಹೋದರ ಮಹದೇವ ಎಂಬುವರ ಜೊತೆ ಕೃಷ್ಣೇಗೌಡ ಫೋನ್‌ನಲ್ಲಿ ಮಾತನಾಡಿದ್ದಾರೆ. ಸೋಮವಾರ ಸಂದೇಶ ಕಳಿಸಿರುವ ಅವರು, 'ಇಲ್ಲಿ ಯುದ್ಧ ನಡೆಯುತ್ತಿದೆ, ರಾಕೆಟ್‌ಗಳ ದಾಳಿ ಕಾಣುತ್ತಿದೆ. ನಾನು ಸುರಕ್ಷಿತವಾಗಿದ್ದೇನೆ, ಒಂದು ವಾರ ಕಾಯುತ್ತೇನೆ' ಎಂದು ಹೇಳಿದ್ದಾರೆ.
ಹಮಾಸ್ ಉಗ್ರರ ದಾಳಿಯಿಂದ ಈಗಾಗಲೇ ಸಾವಿರಾರು ಅಮಾಯಕರು ಮೃತಪಟ್ಟಿರುವುದರಿಂದ ಅಲ್ಲಿರುವ ಕನ್ನಡಿಗರ ಬಗ್ಗೆ ಇಲ್ಲಿರುವ ಪೋಷಕರು, ಸಂಬಂಧಿಕರು ಆತಂಕಪಟ್ಟಿದ್ದಾರೆ. ಇಸ್ರೇಲ್‌ನಲ್ಲಿ ದಿನದಿಂದ ದಿನಕ್ಕೆ ಯುದ್ಧ ತೀವ್ರಗೊಳ್ಳುತ್ತಿರುವುದರಿಂದ ಮುಂದೇನಾಗುವುದೋ ಎಂಬ ಭಯ ಅನೇಕರನ್ನು ಕಾಡುತ್ತಿದೆ.
ಹಾಸನ ಜಿಲ್ಲೆಯ ಜನ ಸುರಕ್ಷಿತ
ಸದ್ಯ ಹಾಸನ ಜಿಲ್ಲೆಯ ಎಲ್ಲರೂ ಅಲ್ಲಿ ಸುರಕ್ಷಿತವಾಗಿದ್ದು, ಪ್ರತಿನಿತ್ಯ ತಮ್ಮ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸುತ್ತಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದೇವೆ, ಸೈರನ್ ಆದ ಕೂಡಲೇ ಶೆಲ್ಟರ್ ಒಳಗೆ ಹೋಗಬೇಕು. ಕೆಲಸಕ್ಕೆ ರಜೆ ನೀಡಿದ್ದು ಆದಷ್ಟು ಬೇಗ ಯುದ್ದ ನಿಲ್ಲಲಿದೆ ಎಂದು ಧೈರ್ಯ ತುಂಬುತ್ತಿದ್ದಾರೆ. ಆದರೆ ಪೋಷಕರಿಗೆ ಹಾಗೂ ಕುಟುಂಬಸ್ಥರಿಗೆ ನೆಮ್ಮದಿ ಇಲ್ಲವಾಗಿದೆ. ಸಾಧ್ಯವಾದರೆ ಆದಷ್ಟು ಬೇಗ ವಾಪಸ್ ಬನ್ನಿ ಎನ್ನುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಆದಷ್ಟು ಬೇಗ ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಿ ಎಂದು ಮನವಿ ಮಾಡಿದ್ದಾರೆ.

ಸುರಕ್ಷಿತವಾಗಿ ವಾಪಸ್ ಕರೆತರಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ-ಹೆಚ್‌ಡಿಡಿ
ಈ ಬಗ್ಗೆ ಮಾತನಾಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, 'ಇಸ್ರೇಲ್‌ನಲ್ಲಿ ನಮ್ಮ ಜಿಲ್ಲೆಯ, ಸಕಲೇಶಪುರ, ಬೇಲೂರು, ಚನ್ನರಾಯಪಟ್ಟಣದ 20ಕ್ಕೂ ಹೆಚ್ಚು ಮಂದಿ ಇದ್ದಾರೆ ಎಂಬ ಮಾಹಿತಿ ಇದೆ. ನಾನು ದೆಹಲಿಗೆ ಸಂಪರ್ಕ ಮಾಡಿ ವಿದೇಶಾಂಗ ಸಚಿವರ ಜೊತೆ ಮಾತನಾಡುತ್ತೇನೆ ಎಂದರು. ಇಸ್ರೇಲ್‌ನಲ್ಲಿ ಭಾರತದವರು ಹೆಚ್ಚು ಮಂದಿ ಇದ್ದಾರೆ. ಹಾಸನ ಜಿಲ್ಲೆಯವರ ಹೆಸರು ತಿಳಿದುಕೊಂಡ ತಕ್ಷಣವೇ ಯಾರು, ಯಾವ ಪ್ರದೇಶದಲ್ಲಿ ಇದ್ದಾರೆ ಎಂದು ಮಾಹಿತಿ ಪಡೆದು ದೆಹಲಿಗೆ ಸಂಪರ್ಕ ಮಾಡುತ್ತೇನೆ. ಎಲ್ಲರನ್ನೂ ಸುರಕ್ಷಿತವಾಗಿ ವಾಪಸ್ ಕರೆತರಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ರಾಜ್ಯ ಸರ್ಕಾರಕ್ಕೂ ಮನವಿ ಮಾಡುತ್ತೇನೆ' ಎಂದರು.
ಎರಡೂ ಸರ್ಕಾರ ಜಾಗೃತವಾಗಲಿ- ಹೆಚ್.ಡಿ ರೇವಣ್ಣ
ಇದೇ ವಿಚಾರವಾಗಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, 'ಇಸ್ರೇಲ್ ಯುದ್ಧ ಪ್ರದೇಶದಲ್ಲಿ ಸಿಲುಕಿರುವ ಜಿಲ್ಲೆ ಹಾಗೂ ರಾಜ್ಯದ ಜನರನ್ನು ಶೀಘ್ರವೇ ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಬೇಕು' ಎಂದು ಮನವಿ ಮಾಡಿದರು.
'ದುಡಿಯುವ ಸಲುವಾಗಿ ವಿದೇಶಕ್ಕೆ ತೆರಳಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ರಕ್ಷಣೆ ಎಲ್ಲರ ಹೊಣೆ. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಿಂದೆ ಉಕ್ರೇನ್ ಯುದ್ಧದ ವೇಳೆ ಯಾವ ಕ್ರಮ ಕೈಗೊಂಡಿದ್ದರೋ ಹಾಗೆ, ಈಗಲೂ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಗಬೇಕು' ಎಂದು ಆಗ್ರಹಿಸಿದರು.












Click it and Unblock the Notifications