ನನ್ನ ಆರೋಗ್ಯ ಚೆನ್ನಾಗಿದೆ, ನಿವೃತ್ತಿಯ ವಯಸ್ಸಾಗಿಲ್ಲ: ಕುಮಾರಸ್ವಾಮಿ
ಹಾಸನ, ಜನವರಿ 06: ನನಗೆ ನಿವೃತ್ತಿಯ ವಯಸ್ಸಾಗಿಲ್ಲ, ಜನರು ಬಯಸಿದಷ್ಟು ದಿನವೂ ನಾನು ರಾಜಕೀಯದಲ್ಲಿ ಸಕ್ರಿಯನಾಗಿರುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಸಕ್ರಿಯ ರಾಜಕೀಯ ಮಾಡುವಷ್ಟು, ಪಕ್ಷವನ್ನು ಸಂಘಟಿಸುವಷ್ಟು ಆರೋಗ್ಯ, ಸಾಮರ್ಥ್ಯ ನನ್ನಲ್ಲಿದೆ ಎಂದರು.
ಹದಿನಾಲ್ಕು ತಿಂಗಳು ಉತ್ತಮ ಆಡಳಿತ ನೀಡಿದ್ದೇನೆ, ಇದನ್ನು ರಾಜ್ಯದ ಜನರು ಸಹ ನೋಡಿದ್ದಾರೆ, ಬಿಜೆಪಿಯವರು ಸುಮ್ಮನೆ ಕತೆ ಕಟ್ಟುವುದನ್ನು ಬಿಡಬೇಕು ಎಂದರು.

ರಾಜ್ಯದ ಹಲವು ಕಡೆ ಅಭಿವೃದ್ಧಿ ಸ್ಥಗಿತವಾಗಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಯಡಿಯೂರಪ್ಪ ಅವರು ಬೆಂಗಳೂರು ಕೇಂದ್ರಿತ ಆಡಳಿತ ಮಾಡುತ್ತಿದ್ದಾರೆ, ಬೇರೆ ಭಾಗಗಳನ್ನು ಕಡೆಗಣಿಸಿದ್ದಾರೆ ಎಂದರು.
ಕಪಾಲಗುಡ್ಡದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, 'ಆ ಜಮೀನು ನನ್ನ ಅಧಿಕಾರಾವಧಿಯಲ್ಲಿ ಮಂಜೂರಾದದ್ದಲ್ಲ' ಎಂದರು.
'ಕಪಾಲ ಬೆಟ್ಟದ ವ್ಯಾಪ್ತಿಯಲ್ಲಿ ಹೆಚ್ಚಿನ ಪಾಲು ಕ್ರಿಶ್ಚಿಯನ್ ಸಮುದಾಯದ ಜನ ಇದ್ದಾರೆ ಅವರಿಗೆ ಗೌರವ ಕೊಡಲು ಡಿ.ಕೆ.ಶಿವಕುಮಾರ್, ಪ್ರತಿಮೆ ಮಾಡಲು ಸಹಕರಿಸಿದ್ದಾರೆ. ದೇಶದಲ್ಲಿ ಯಾರು ಯಾರ ಪ್ರತಿಮೆ ಮಾಡಲು ಸಹ ಅವಕಾಶವಿದೆ ಜಾಗದ ಬಗ್ಗೆ ವಿವಾದ ಬೇಡ. ನಮ್ಮ ಸರ್ಕಾರದಲ್ಲಿ ಜಾಗದ ಬಗ್ಗೆ ಪ್ರಸ್ತಾಪಿಸಿರಲಿಲ್ಲ' ಎಂದರು.












Click it and Unblock the Notifications