ಹಾಸನ: ಪ್ರೀತಿಸಿ ತಾಳಿ ಕಟ್ಟಿದ ಕೈಯಿಂದಲೇ ಪತ್ನಿಯ ಕತ್ತು ಹಿಸುಕಿ ಕೊಂದ
ಹಾಸನ, ಜೂನ್ 06 : 20 ತಿಂಗಳ ಹಿಂದೆ ಅಷ್ಟೇ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕೈಹಿಡಿದ ಗಂಡನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಹಂಗರಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕಾರ್ಲೆ ಗ್ರಾಮದ ಶಿಲ್ಪಾ(22) ಮೃತ ದುರ್ದೈವಿ. ಮೂಲತಃ ಆಟೋ ಚಾಲಕನಾಗಿದ್ದ ಹೊಳೆನರಸೀಪುರ ತಾಲೂಕು ಹಂಗರಹಳ್ಳಿಯ ಕಿರಣ್ ಎಂಬಾತನನ್ನು ಶಿಲ್ಪಾ ಪ್ರೀತಿಸಿ ಮದುವೆಯಾಗಿದ್ದಳು.

ಅನ್ಯಜಾತಿ ಎಂಬ ಕಾರಣಕ್ಕೆ ಮನೆಯವರ ವಿರೋಧ ಇದ್ದರೂ, ಪೊಲೀಸರ ನೆರವು ಪಡೆದು ಶಿಲ್ಪಾ-ಕಿರಣ್ ಸತಿಪತಿಗಳಾಗಿದ್ದರು. ಆರಂಭದ ಕೆಲ ತಿಂಗಳು ಪತ್ನಿಯನ್ನು ಚೆನ್ನಾಗಿ ನೋಡಿಕೊಂಡ ಕಿರಣ್, ನಂತರ ಹೆಚ್ಚಿನ ವರದಕ್ಷಿಣೆ ತರುವಂತೆ ಪತ್ನಿಗೆ ಚಿತ್ರ ಹಿಂಸೆ ನೀಡುತ್ತಿದ್ದ.
ಮದುವೆ ನಂತರ ಬದಲಾಗಿದ್ದ ಶಿಲ್ಪಾ ಮನೆಯವರು ಆಗಿದ್ದು ಆಗಿ ಹೋಯಿತು ಮಗಳು ಅಳಿಯ ಚೆನ್ನಾಗಿರಲಿ ಅಂತಾ ಮನೆ ಮಾಡಿಕೊಟ್ಟು, ಎಲ್ಲಾ ಖರ್ಚು ವೆಚ್ಚ ನೋಡಿಕೊಳ್ಳುತ್ತಿದ್ದರು.
ಆದರೂ ಧನದಾಹಿ ಬುದ್ದಿ ಬಿಡದ ಕಿರಣ್, ಇದೇ ಕಾರಣಕ್ಕೆ ಕಳೆದ ರಾತ್ರಿ ಜಗಳ ತೆಗೆದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಪ್ಲಾಸ್ಟಿಕ್ ಚೀಲದಲ್ಲಿ ತನ್ನ ಆಟೋದಲ್ಲೇ ಶವ ಸಾಗಿಸಲು ಯತ್ನಿಸಿದ್ದಾನೆ.
ಅದು ಸಾಧ್ಯವಾಗದೇ ಇದ್ದಾಗ ರಾತ್ರೋರಾತ್ರಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಶಿಲ್ಪಾ ಪೋಷಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹೊಳೆನರಸೀಪುರ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications