Karnataka election 2023: ಹಾಸನ ಜಿಲ್ಲೆಯ 7 ಕ್ಷೇತ್ರಗಳಲ್ಲಿನ ರಾಜಕೀಯ ಪಕ್ಷಗಳ ಬಲಾಬಲ ತಿಳಿಯಿರಿ, ಇಲ್ಲಿದೆ ಮಾಹಿತಿ
ಹಾಸನ, ಮೇ, 05: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಅದೇ ರೀತಿ ಈಗಾಗಲೇ ಚುನಾವಣೆ ಪೂರ್ವ ಸಮೀಕ್ಷೆಗಳು ಕೂಡ ಹೊರಬಿದ್ದಿವೆ. ಹಾಗಾದರೆ ಜೆಡಿಎಸ್ ಭದ್ರಕೋಟೆ ಆಗಿರುವ ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ರಾಜಕೀಯ ವಾತವಾರಣ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಈ ಭಾರಿ ಮೂರೂ ಪಕ್ಷಗಳು ಪ್ರಬಲ ಪೈಪೋಟಿ ನೀಡುತ್ತಿವೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಬಾರಿಯೂ ಜೆಡಿಎಸ್‌ಗೆ ಹೆಚ್ಚಿನ ಸ್ಥಾನಗಳು ಬರುವ ನಿರೀಕ್ಷೆಯಿದ್ದು, ಎರಡನೇ ಸ್ಥಾನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ನಡೆಯುತ್ತಿವೆ. ಇನ್ನು ಅರಸೀಕೆರೆ ಹಾಗೂ ಅರಕಲಗೂಡು ಕ್ಷೇತ್ರದಲ್ಲಿ ಪ್ರಬಲ ನಾಯಕರು ಪಕ್ಷಾಂತರ ಆಗಿದ್ದು, ಈ ಕ್ಷೇತ್ರಗಳಲ್ಲಿಯೂ ಕದನ ಕುತೂಹಲ ಮೂಡಿಸಿದೆ.

ಕಳೆದ ಬಾರಿಯ ಚುನಾವಣೆಯ ಪಕ್ಷಗಳ ಬಲಾಬಲ
ಜೆಡಿಎಸ್ - 06
ಬಿಜೆಪಿ - 01
ಕಾಂಗ್ರೆಸ್ - 00
ಹಾಸನ ವಿಧಾನಸಭಾ ಕ್ಷೇತ್ರ
ರಾಜ್ಯದ ಗಮನ ಸೆಳೆದಿರುವ ಹಾಸನ ವಿಧಾನಸಭಾ ಕ್ಷೇತ್ರವು ಸಾಕಷ್ಟು ಕುತೂಹಲ ಹಾಗೂ ಜಿದ್ದಾಜಿದ್ದಿಯ ಕ್ಷೇತ್ರವಾಗಿದ್ದು, ಈ ಕ್ಷೇತ್ರವನ್ನು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಜೆಡಿಎಸ್‌ನಲ್ಲಿ ಟಿಕೆಟ್ ಗುದ್ದಾಟ ನಡೆಸಿದರೂ ಅಂತಿಮವಾಗಿ ಯಾವುದೇ ಗೊಂದಲಗಳಿಲ್ಲದೇ ಟಿಕೆಟ್ ಪಡೆದಿರುವ ಸ್ವರೂಪ್ ಪರವಾಗಿ ಎಚ್.ಡಿ.ರೇವಣ್ಣ ಕುಟುಂಬದ ಹಾದಿಯಾಗಿ ಒಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಸಭಾ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸೇರಿದಂತೆ ಹಲವರು ಸ್ವರೂಪ್ ಬೆನ್ನಿಗೆ ನಿಂತು ಹಾಲಿ ಶಾಸಕ ಪ್ರೀತಂಗೌಡಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇತ್ತ ಶಾಸಕ ಪ್ರೀತಂಗೌಡ ಒಂಟಿಯಾಗಿ ಎಲ್ಲರನ್ನೂ ಎದುರಿಸುತ್ತಾ, ಬರದಿಂದ ಹಳ್ಳಿ ಹಳ್ಳಿ ಸುತ್ತುತ್ತಾ ಮತಬೇಟೆ ಮಾಡುತ್ತಿದ್ದಾರೆ. ಹಾಗೆಯೆ ಕಾಂಗ್ರೆಸ್‌ನಿಂದ ಬನವಾಸೆ ರಂಗಸ್ವಾಮಿ ಕಣದಲ್ಲಿದ್ದಾರೆ.
ಅಭ್ಯರ್ಥಿಗಳ ಮಾಹಿತಿ
ಜೆಡಿಎಸ್ - ಸ್ವರೂಪ್ ಪ್ರಕಾಶ್
ಬಿಜೆಪಿ - ಪ್ರೀತಂಗೌಡ
ಕಾಂಗ್ರೆಸ್ - ಬನವಾಸೆ ರಂಗಸ್ವಾಮಿ
ಎಎಪಿ - ಅಗಿಲೆ ಯೋಗೇಶ್
ಕಳೆದ ಬಾರಿಯ ಫಲಿತಾಂಶದ ವಿವರ
ಬಿಜೆಪಿ: ಪ್ರೀತಂಗೌಡ - 63,348 ಮತಗಳು
ಜೆಡಿಎಸ್: ಎಚ್.ಎಸ್.ಪ್ರಕಾಶ್ - 50,342 ಮತಗಳು
ಕಾಂಗ್ರೆಸ್: ಹೆಚ್.ಕೆ.ಮಹೇಶ್ - 38,101 ಮತಗಳು
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ
ಕಳೆದ 25 ವರ್ಷಗಳಿಂದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿರುವುದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ, ಮಾಜಿ ಸಚಿವ ಎಚ್.ಡಿ.ರೇವಣ್ಣ. ಈ ಬಾರಿಯೂ ಅವರೇ ಸ್ಪರ್ಧೆ ಮಾಡುತ್ತಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಳೆದ ಹಲವು ವರ್ಷಗಳ ಹೊಳೆನರಸೀಪುರ ಕ್ಷೇತ್ರದಲ್ಲಿ ದೇವೇಗೌಡರು ಕುಟುಂಬದ ಪರ ಹಾಗೂ ವಿರೋಧದ ಚುನಾವಣೆ ನಡೆಯುತ್ತಿದೆ. ವಿರೋಧವಾಗಿ ಕಾಂಗ್ರೆಸ್‌ನಿಂದ ಯಾರೇ ನಿಂತರೂ 50 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದುಕೊಳ್ಳುತ್ತಾ ಬಂದಿದ್ದಾರೆ.
ಈ ಬಾರಿ ಕಾಂಗ್ರೆಸ್‌ನಿಂದ ಶ್ರೇಯಸ್ ಪಟೇಲ್ ಅವರನ್ನು ಕಣಕ್ಕಿಳಿಸಿದ್ದಾರೆ. ಶ್ರೇಯಸ್ ಪಟೇಲ್ ಅವರು ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ಮಾಡುತ್ತಿದ್ದು, ರೇವಣ್ಣ ಕಟುಂಬದವರಿಗೆ ಪ್ರಬಲ ಪೈಟೋಟಿಯನ್ನು ನೀಡುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿಯಿಂದ ದೇವರಾಜೇಗೌಡ ಕಣದಲ್ಲಿದ್ದಾರೆ.
ಅಭ್ಯರ್ಥಿಗಳ ಮಾಹಿತಿ
ಜೆಡಿಎಸ್ - ಎಚ್.ಡಿ.ರೇವಣ್ಣ
ಕಾಂಗ್ರೆಸ್ - ಶ್ರೇಯಸ್ ಪಾಟೇಲ್
ಬಿಜೆಪಿ - ದೇವರಾಜೇಗೌಡ
ಕಳೆದ ಬಾರಿಯ ಫಲಿತಾಂಶದ ವಿವರ
ಜೆಡಿಎಸ್: ಎಚ್.ಡಿ.ರೇವಣ್ಣ - 1,08,541
ಕಾಂಗ್ರೆಸ್: ಬಾಗೂರು ಮಂಜೇಗೌಡ - 64,709
ಬಿಜೆಪಿ: ಎಂ.ಎನ್.ರಾಜು - 3,667
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ
ಇನ್ನು ಶ್ರವಣಬೆಳಗೊಳ ಕ್ಷೇತ್ರದಲ್ಲಿ ಸಿ.ಎಸ್.ಪುಟ್ಟೇಗೌಡರು ಜೆಡಿಎಸ್‌ನಿಂದ ಸ್ಪರ್ಧಿಸಿ ಮೂರು ಭಾರಿ ಹ್ಯಾಟ್ರಿಲ್ ಗೆಲುವು ಕಂಡಿದ್ದರು. ಬಳಿಕ ಎರಡು ಬಾರಿ ಸಿ.ಎನ್.ಬಾಲಕೃಷ್ಣ ಗೆಲುವು ಕಂಡಿದ್ದಾರೆ. ಮೂರನೇ ಬಾರಿಗೆ ಸ್ಪರ್ಧೆಗಿಳಿದಿರುವ ಬಾಲಕೃಷ್ಣ ಹ್ಯಾಟ್ರಿಕ್ ಗೆಲುವಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರ ಸುತ್ತುತ್ತಿದ್ದಾರೆ. ಇತ್ತ ಮಾಜಿ ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಕ್ಷೇತ್ರದಲ್ಲಿ ಗೆಲುವಿಗಾಗಿ ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅಲ್ಲದೆ ಬಿಜೆಪಿಯಿಂದ ಚಿದಾನಂದ್‌ಗೆ ಟಿಕೆಟ್ ನೀಡಿದ್ದಾರೆ.
ಅಭ್ಯರ್ಥಿಗಳ ವಿವರ
ಜೆಡಿಎಸ್ - ಸಿ.ಎನ್.ಬಾಲಕೃಷ್ಣ
ಕಾಂಗ್ರೆಸ್ - ಎಂ.ಎ.ಗೋಪಾಲಸ್ವಾಮಿ
ಬಿಜೆಪಿ - ಚಿದಾನಂದ್
ಕಳೆದ ಬಾರಿ ಚುನಾವಣೆಯ ಫಲಿತಾಂಶ
ಜೆಡಿಎಸ್: ಸಿ.ಎನ್.ಬಾಲಕೃಷ್ಣ - 1,05,516
ಕಾಂಗ್ರೆಸ್: ಸಿ.ಎಸ್. ಪುಟ್ಟೇಗೌಡ - 52,504
ಬಿಜೆಪಿ: ಶಿವನಂಜೇಗೌಡ - 7506
ಅರಸೀಕೆರೆ ವಿಧಾನಸಭಾ ಕ್ಷೇತ್ರ
ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಹ್ಯಾಟ್ರಿಕ್ ಗೆಲುವು ಗಳಿಸಿದ್ದ ಕೆ.ಎಂ.ಶಿವಲಿಂಗೇಗೌಡ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಎನ್.ಆರ್.ಸಂತೋಷ್ ಬಿಜೆಪಿಯಿಂದ ಜೆಡಿಎಸ್‌ಗೆ ಪಕ್ಷಾಂತರ ಆಗಿದ್ದಾರೆ. ಹೀಗೆ ಪಕ್ಷದ ಮೇಲಿನ ವರ್ಚಸ್ಸಿಗಿಂತ ವ್ಯಕ್ತಿ ಮೇಲೆ ನಡೆಯುತ್ತಿರುವ ಚುನಾವಣೆ ಇದಾಗಿದೆ.
ಕೆ.ಎಂ.ಶಿವಲಿಂಗೇಗೌಡರು ವೈಯಕ್ತಿಕ ಮತಗಳ ಜೊತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟು ಚುನಾವಣೆಗೆ ಧುಮುಕಿದ್ದಾರೆ. ಇತ್ತ ಎನ್.ಆರ್.ಸಂತೋಷ್, ವೈಯಕ್ತಿಕ ಮತಗಳ ಜೊತೆಗೆ ಜೆಡಿಎಸ್ ಮತಗಳನ್ನು ನಂಬಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅಲ್ಲದೆ ಲಿಂತಾಯುತ ಮತಗಳೇ ನಿರ್ಣಾಯಕ ಆಗಿರುವ ಕ್ಷೇತ್ರದಲ್ಲಿ ಬಿಜೆಪಿ ಜಿ.ವಿ.ಟಿ ಬಸವರಾಜ್ ಅವರನ್ನು ಕಣಕ್ಕಿಳಿಸಿದೆ.
ಅಭ್ಯರ್ಥಿಗಳ ವಿವರ
ಜೆಡಿಎಸ್ - ಎನ್.ಆರ್. ಸಂತೋಷ್
ಕಾಂಗ್ರೆಸ್ - ಕೆ.ಎಂ.ಶಿವಲಿಂಗೇಗೌಡ
ಬಿಜೆಪಿ - ಜಿವಿಟಿ ಬಸವರಾಜ್
ಕಳೆದ ಬಾರಿಯ ಫಲಿತಾಂಶದ ವಿವರ
ಜೆಡಿಎಸ್: ಕೆ.ಎಂ.ಶಿವಲಿಂಗೇಗೌಡ - 93,986
ಕಾಂಗ್ರೆಸ್: ಜಿ.ಬಿ.ಶಶಿಧರ - 50,297
ಅರಕಲಗೂಡು ವಿಧಾನಸಭಾ ಕ್ಷೇತ್ರ
ಇನ್ನು ಕಳೆದ ಇಪ್ಪತ್ತು ವರ್ಷದಿಂದ ಅರಕಲಗೂಡು ಕ್ಷೇತ್ರದ ಅಧಿಕಾರ ಎ.ಮಂಜು ಹಾಗೂ ಎ.ಟಿ.ರಾಮಸ್ವಾಮಿ ಅವರ ಕೈಯಲ್ಲಿದೆ. ಇಬ್ಬರೂ ಎರಡೆರಡು ಬಾರಿ ಶಾಸಕರಾಗಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿದ್ದ ಎ.ಮಂಜು ಟಿಕೆಟ್ ಸಿಗದೇ ಅಂತಿಮ ಕ್ಷಣದಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ.
ಇತ್ತ ಬಿಜೆಪಿಯಿಂದ ಯೋಗಾರಮೇಶ್ ಕಣದಲ್ಲಿದ್ದರೆ, ಕಾಂಗ್ರೆಸ್‌ನಿಂದ ಮಾಜಿ ಪೊಲೀಸ್ ಅಧಿಕಾರಿ ಶ್ರೀಧರ್ ಗೌಡ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತ ಕೃಷ್ಣೇಗೌಡ ಪಕ್ಷೇತರವಾಗಿ ಸ್ಪರ್ಧೆಗಿಳಿದಿದ್ದಾರೆ. ಪಕ್ಷೇತರ ಅಭ್ಯರ್ಥಿಯೂ ಸೇರಿ ನಾಲ್ವರು ಅಭ್ಯರ್ಥಿಗಳ ನಡುವೆ ಸಮರ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ.
ಅಭ್ಯರ್ಥಿಗಳ ವಿವರ
ಜೆಡಿಎಸ್ - ಎ.ಮಂಜು
ಕಾಂಗ್ರೆಸ್ - ಶ್ರೀಧರ್ ಗೌಡ
ಬಿಜೆಪಿ - ಯೋಗಾರಮೇಶ್
ಪಕ್ಷೇತರ - ಕೃಷ್ಣೇಗೌಡ
ಕಳೆದ ಬಾರಿ ಚುನಾವಣಾ ಫಲಿತಾಂಶದ ವಿವರ
ಜೆಡಿಎಸ್: ಎ.ಟಿ.ರಾಮಸ್ವಾಮಿ - 85,064
ಕಾಂಗ್ರೆಸ್: ಎ.ಮಂಜು - 74,411
ಬಿಜೆಪಿ: ಯೋಗಾರಮೇಶ್ - 22,679
ಬೇಲೂರು ವಿಧಾನಸಭಾ ಕ್ಷೇತ್ರ
ಜೆಡಿಎಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದ ಕೆ.ಎಸ್.ಲಿಂಗೇಶ್, ಎರಡನೇ ಬಾರಿಗೂ ಸ್ಪರ್ಧೆಗಿಳಿದಿದ್ದಾರೆ. ಲಿಂಗಾಯುತರೇ ನಿರ್ಣಾಯಕರಾಗಿರುವ ಕ್ಷೇತ್ರದಲ್ಲಿ ಜೆಡಿಎಸ್ ಮಾತ್ರ ಲಿಂಗಾಯುತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಲಿಂಗಾಯುತ ಮತಗಳು ಹಾಗೂ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳನ್ನೇ ಕೆ.ಎಸ್.ಲಿಂಗೇಶ್ ನಂಬಿದ್ದಾರೆ.
ಇನ್ನು ಕಳೆದ ಬಾರಿ ಕಡಿಮೆ ಅಂತರದಿಂದ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಹೆಚ್.ಕೆ.ಸುರೇಶ್‌ಗೆ ಎರಡನೇ ಬಾರಿಯೂ ಕಮಲ ನಾಯಕರು ಟಿಕೆಟ್ ನೀಡಿದ್ದಾರೆ. ಕಳೆದ ಬಾರಿಯ ಅನುಕಂಪ ಹಾಗೂ ಬಿಜೆಪಿ ಮತಗಳನ್ನೇ ಸುರೇಶ್ ನಂಬಿಕೊಂಡಿದ್ದಾರೆ. ಇತ್ತ ಮಾಜಿ ಸಚಿವ ಬಿ.ಶಿವರಾಮ್ ಕಾಂಗ್ರೆಸ್ ಟಿಕೆಟ್ ಅನ್ನು ಮೊದಲ ಪಟ್ಟಿಯಲ್ಲಿಯೇ ಪಡೆದುಕೊಂಡು ಕ್ಷೇತ್ರವನ್ನು ಸುತ್ತುತ್ತಿದ್ದಾರೆ. ಲಿಂಗೇಶ್ ಗಲ್ಲುವುದಕ್ಕೂ ಮುನ್ನ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆ ಕೋಟೆಯನ್ನು ಪುನಃ ವಶಕ್ಕೆ ಪಟಡೆಯಲು ಶಿವರಾಮ್ ಪಣತೊಟ್ಟಿದ್ದಾರೆ.
ಅಭ್ಯರ್ಥಿಗಳ ವಿವರ
ಜೆಡಿಎಸ್ -ಕೆ.ಎಸ್.ಲಿಂಗೇಶ್
ಬಿಜೆಪಿ - ಎಚ್.ಕೆ.ಸುರೇಶ್
ಕಾಂಗ್ರೆಸ್ - ಬಿ.ಶಿವರಾಮ್
ಕಳೆದ ಬಾರಿಯ ಚುನಾವಣಾ ಫಲಿತಾಂಶದ ವಿವರ
ಜೆಡಿಎಸ್: ಕೆ.ಎಸ್. ಲಿಂಗೇಶ್ - 64,368
ಬಿಜೆಪಿ: ಎಚ್.ಕೆ.ಸುರೇಶ್ - 44,578
ಕಾಂಗ್ರೆಸ್ - ಕೀರ್ತನಾ ರುದ್ರೇಶ್ ಗೌಡ - 39,519
ಸಕಲೇಶಪುರ ವಿಧಾನಸಭಾ ಕ್ಷೇತ್ರ
ಕ್ಷೇತ್ರದಲ್ಲಿ ಸತತ ಆರು ಬಾರಿ ಗೆಲುವನ್ನು ಸಾಧಿಸಿದ ಜೆಡಿಎಸ್‌ನ ಹೆಚ್.ಕೆ.ಕುಮಾರಸ್ವಾಮಿ, ಇದೇ ಕ್ಷೇತ್ರದಲ್ಲಿ ಮೂರು ಹಾಗೂ ಪಕ್ಕದ ಬೇಲೂರಿನಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಇದೀಗ ಸಕಲೇಶಪುರ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಸ್ಪರ್ಧೆಗಿಳಿದಿದ್ದಾರೆ. ಯಾವುದೇ ವಿಚಾದಗಳಿಲ್ಲದೆ ಸರಳತೆ ಹಾಗೂ ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದಿರುವುದಕ್ಕೆ ಕಾರಣ ಕುಮಾರಸ್ವಾಮಿಯವರ ಪ್ರಮುಖ ಚುನಾವಣಾ ಅಸ್ತ್ರ.
ಮತ್ತೊಂದೆಡೆ ಕಳೆದ ಬಾರಿ ಕಡಿಮೆ ಅಂತರದಿಂದ ಸೋಲುಂಡಿದ್ದ ನಾರ್ವೇ ಸೋಮಶೇಖರ್‌ಗೆ ಟಿಕೆಟ್ ನೀಡದೇ, ಹೊಸ ಮುಖ ಸಿಮೆಂಟ್ ಮಂಜುಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ. ಇತ್ತ ಕಳೆದ ಎರಡ್ಮೂರು ವರ್ಷದಿಂದ ಕ್ಷೇತ್ರದಲ್ಲಿ ಓಡಾಡಿಕೊಂಡು ಕೆಲಸ ಮಾಡುತ್ತಿದ್ದ ಮುರುಳಿ ಮೋಹನ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಅಭ್ಯರ್ಥಿಗಳ ವಿವರ
ಜೆಡಿಎಸ್ -ಎಚ್.ಕೆ.ಕುಮಾರಸ್ವಾಮಿ
ಬಿಜೆಪಿ - ಸಿಮೆಂಟ್ ಮಂಜು
ಕಾಂಗ್ರೆಸ್ - ಮುರುಳಿ ಮೋಹನ್
ಕಳೆದ ಬಾ ರಿಯ ಫಲಿತಾಂಶದ ವಿವರ
ಜೆಡಿಎಸ್- ಎಚ್.ಕೆ.ಕುಮಾರಸ್ವಾಮಿ - 62,262
ಬಿಜೆಪಿ - ನಾರ್ವೇ ಸೋಮಶೇಖರ್ - 57,320
ಕಾಂಗ್ರೆಸ್ - ಸಿದ್ದಯ್ಯ - 37,002












Click it and Unblock the Notifications