Holenarasipura Constituency : ಎಚ್.ಡಿ.ರೇವಣ್ಣರನ್ನು ಎದುರಿಸುವ ಸಮರ್ಥ ಕಾಂಗ್ರೆಸ್ ಅಭ್ಯರ್ಥಿ ಯಾರು?
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೇ ಗೌಡರು 6 ಬಾರಿ, ಜಿ.ಪುಟ್ಟಸ್ವಾಮಿಗೌಡರು 1, ದೊಡ್ಡೇಗೌಡರು 1 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.1994ರಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ 5 ಬಾರಿ ಗೆಲುವು ಕಂಡಿದ್ದಾರೆ.
ಒಂದು ಕಾಲದಲ್ಲಿ ಜೆಡಿಎಸ್, ಕಾಂಗ್ರೆಸ್ ಜಿದ್ದಾಜಿದ್ದಿ ರಾಜಕಾರಣಕ್ಕೆ ಹೆಸರಾದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ, ಈ ಬಾರಿ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡುತ್ತದೆ ಎನ್ನುವ ಕುತೂಹಲ ಕೆರಳಿಸಿದೆ. ದೇಶಕ್ಕೆ ಪ್ರಧಾನಿಯನ್ನು ಕೊಟ್ಟ ಹಾಗೂ ಇಬ್ಬರು ಮುಖ್ಯಮಂತ್ರಿಗಳ ರಾಜಕೀಯ ಬೆಳವಣಿಗೆಗೆ ಬೇರು ಮಟ್ಟದ ಬಲ ನೀಡಿದ ಕ್ಷೇತ್ರ ಎಂಬ ಹೆಗ್ಗಳಿಕೆಯೂ ಇದೆ.
ಜೆಡಿಎಸ್‌ಗೆ ಕಟ್ಟಾವಿರೋಧಿ ಎನಿಸಿದ್ದ ಮಾಜಿ ಸಂಸದ ಜಿ.ಪುಟ್ಟಸ್ವಾಮಿಗೌಡ ನಿಧನದ ನಂತರ ಕಾಂಗ್ರೆಸ್ ಪ್ರಾಬಲ್ಯ ಜೆಡಿಎಸ್ ಅನ್ನು ಎದುರಿಸುವ ಮಟ್ಟಿಗೆ ಮೇಲೆ ಏಳಲೇ ಇಲ್ಲ. ಗೌಡರ ಗದ್ದಲ ಎಂದೇ ಹೆಸರಾಗಿದ್ದ ಹೊಳೆನರಸೀಪುರ ಕ್ಷೇತ್ರದಿಂದ ಹಳ್ಳಿಮೈಸೂರು ಹೋಬಳಿ ಕ್ಷೇತ್ರ ವಿಂಗಡಣೆಯಿಂದ ಬೇರ್ಪಟ್ಟಿತ್ತು. ದುದ್ದ ಮತ್ತು ಶಾಂತಿಗ್ರಾಮ ಹೋಬಳಿ ಸೇರ್ಪಡೆಯೊಂದಿಗೆ ವಿಸ್ತಾರವಾದ ನಂತರವಂತೂ ಅಧಿಕ ಸಂಖ್ಯೆಯಲ್ಲಿ ಒಕ್ಕಲಿಗ ಮತದಾರರನ್ನು ಒಳಗೊಂಡ ಕ್ಷೇತ್ರವಾಯಿತು. ಇದರಿಂದ ಜೆಡಿಎಸ್ ಗೆಲ್ಲುವ ಕುದುರೆಯಾಗಿ ಮಾರ್ಪಟ್ಟಿದೆ.

ಎಚ್.ಡಿ.ದೇವೇಗೌಡರು 6 ಬಾರಿ, ಜಿ.ಪುಟ್ಟಸ್ವಾಮಿಗೌಡರು 1, ದೊಡ್ಡೇಗೌಡರು 1 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ 1999ರಲ್ಲಿ ಒಮ್ಮೆ ಸೋತಿದ್ದು ಹೊರತುಪಡಿಸಿದರೆ, 5 ಬಾರಿ ಗೆಲುವು ಕಂಡಿದ್ದಾರೆ.
ಸಮರ್ಥ ನಾಯಕತ್ವದ ಕೊರತೆ ಎದುರಿಸಿದ್ದರೂ, ಪ್ರತಿಪಕ್ಷದವರಿಗೆ ತಗುಲಿದ ಗಾಳಿಯನ್ನೂ ಉಸಿರೆಳೆದುಕೊಳ್ಳದ ಪರಸ್ಪರ ವಿರೋಧ ಇಂದಿಗೂ ಜೀವಂತ ಇದೆ. ಇದರಿಂದಲೇ ಗೆದ್ದ ನಾಯಕರ ಅತಿಯಾದ ನಡೆ ಸಹಿಸದ ಜನತೆ ಎಷ್ಟೇ ಮೇರು ಪದವಿ ಅಲಂಕರಿಸಿದ್ದರೂ, ಏನೆಲ್ಲಾ ಅಭಿವೃದ್ದಿ ಮಾಡಿದ್ದರೂ ಲೆಕ್ಕಿಸದೇ ಪಾಠ ಕಲಿಸಿದ ಕೀರ್ತಿ ಇದೆ.

1962ರಲ್ಲಿ ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯಿಂದ ರಾಜಕೀಯ ರಣರಂಗಕ್ಕಿಳಿದ ಎಚ್.ಡಿ.ದೇವೇಗೌಡರು ನೀರಾವರಿ, ಲೋಕೋಪಯೋಗಿ ಖಾತೆ ಹೊಂದಿದ್ದರು. ರಾಜ್ಯ ರಾಜಕಾರಣ ತಮ್ಮ ಲೆಕ್ಕಕ್ಕೆ ಬಾರದ ಸಂದರ್ಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಇತ್ತ ಉದಾಹರಣೆ ಸಹ ಇಲ್ಲಿನ ಜನತೆ ಒಪ್ಪಿದ್ದಾರೆ. ದೊಡ್ಡಹಳ್ಳಿ ಗೋಲಿಬಾರ್ ಪ್ರಕರಣದಲ್ಲೂ ದೇವೇ ಗೌಡರು ರಾಜೀನಾಮೆ ನೀಡಿದ್ದರು.
ಅಂದಿನ ಜನತಾಪಕ್ಷದ ದೇವೇಗೌಡರ ಪ್ರತಿಸ್ಪರ್ಧಿ ಎಂದೇ ಖ್ಯಾತಿ ಪಡೆದಿದ್ದ ಜಿ.ಪುಟ್ಟಸ್ವಾಮಿಗೌಡರು ಕಾಂಗ್ರೆಸ್‌ನ ಗಟ್ಟಿಗ ಎನಿಸಿದ್ದರು. 1989ರಲ್ಲಿ ಗೆಲುವು ಕಂಡಿದ್ದರು. ನಂತರ ಇಬ್ಬರೂ ಗೌಡರು ಲೋಕಸಭೆಗೆ ಇಳಿದಿದ್ದರಿಂದ ತೆರವಾದ ಸ್ಥಾನ ತುಂಬುವಲ್ಲಿ ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ ರಾಜಕೀಯ ರಂಗಪ್ರವೇಶಿಸಿದರು. ನಂತರದಲ್ಲಿ ವಸತಿ, ಲೋಕೋಪಯೋಗಿ, ಇಂಧನ ಸಚಿವ ಖಾತೆಗಳನ್ನು ಅಲಂಕರಿಸಿದ್ದರು.
ಅಪ್ಪ ದೇವೇಗೌಡರು ಒಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನಂತರ ಪ್ರಧಾನಿ ಹುದ್ದೆಗೂ ಏರಿದರು. ಸಹೋದರ ಎಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ದಿನಗಳನ್ನು ಸದುಪಯೋಗಪಡಿಸಿಕೊಂಡ ರೇವಣ್ಣ ಹಾಸನ ಜಿಲ್ಲೆ ಅದರಲ್ಲೂ ಹೊಳೆನರಸೀಪುರದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ. ಆದರೆ ಸ್ವಪಕ್ಷೀಯತೆ, ಸದಾ ಅಧಿಕಾರಿಗಳ ವಿರುದ್ದ ಗರಂ ಆಗಿರುತ್ತಿದ್ದರು ಹಾಗೂ ಯಾರನ್ನೂ ಬೆಳೆಸದೆ ಸಮಯಕ್ಕೆ ಬಳಸಿಕೊಂಡರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಒಮ್ಮೆ ಸೋಲು ಅನುಭವಿಸಿದ್ದರು.
ಅಂದು ಎಚ್.ಡಿ.ರೇವಣ್ಣ ವಿರುದ್ದ ಎ.ದೊಡ್ಡೇಗೌಡರನ್ನು ಅಭ್ಯರ್ಥಿಯಾಗಿ ಮಾಡುವ ಮೂಲಕ ಕಾಂಗ್ರೆಸ್ ತಂತ್ರಗಾರಿಕೆ ಹೆಣೆದಿತ್ತು. ಹಾಸನ ಲೋಕಸಭೆಗೆ ಸ್ಪರ್ಧಿಸಿದ್ದ ಎಚ್.ಡಿ.ದೇವೇಗೌಡರ ವಿರುದ್ದ ಕಾಂಗ್ರೆಸ್‌ನಿಂದ ಜಿ.ಪುಟ್ಟಸ್ವಾಮಿಗೌಡರು ಗೆಲುವು ಸಾಧಿಸಿದ್ದರು. 1999 ಅಪ್ಪ ಮಗನ ಸೋಲಿಗೆ ಕಾರಣವಾದ ಕಹಿ ನೆನಪು ಇಂದಿನ ಸುದೀರ್ಘ ಗೆಲುವು ಮಾಸುವಂತೆ ಮಾಡಿದೆ.
ಇಲ್ಲಿ ಪಕ್ಷ ನಿಷ್ಟೆ, ಜಾತಿ ಲೆಕ್ಕಾಚಾರಕ್ಕಿಂತ ದೇವೇಗೌಡರ ಕುಟುಂಬದ ವಿರುದ್ಧ ಮತ್ತು ಪರ ಎಂಬುದಷ್ಟೇ ಸೋಲು, ಗೆಲುವಿನ ನಿರ್ಣಾಯಕ ಅಂಶ. ಮಾಜಿ ಸಂಸದ ಜಿ.ಪುಟ್ಟಸ್ವಾಮಿ ಗೌಡರು ಕಾಲಾನಂತರ 'ಅಭಿವೃದ್ದಿಯೋ ಅನುಕಂಪವೋ' ? ಎಂದು ಮತದಾರರಿಗೆ ಪ್ರಶ್ನೆ ಇತ್ತು. 2004ರಲ್ಲಿ ಕಾಂಗ್ರೆಸ್‌ನ ಉತ್ತರಾಧಿಕಾರಿಯಾಗಿ ಸೊಸೆ ಎಸ್.ಅನುಪಮಾ ಸ್ಪರ್ಧೆಗಿಳಿದು ಪರಾಭವಗೊಂಡರು. ನಂತರವೂ 2008ರಲ್ಲಿ ಮತ್ತೊಮ್ಮೆ ಸ್ಪರ್ಧಿಸಿದರಾದರೂ, 13 ಸಾವಿರ ಮತಗಳ ಅಂತರದಲ್ಲಿ ಅನುಪಮಾ 2ನೇ ಬಾರಿಯೂ ಸೋಲನುಭವಿಸಿದರು.
2018 ರಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಮೋಟಾರ್ ಸಾರಿಗೆ ಇಲಾಖೆ ಬ್ರೇಕ್ ಇನ್ಸ್‌ಪೆಕ್ಟರ್ ಬಾಗೂರು ಮಂಜೇಗೌಡರನ್ನು ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿಸಿದರೂ ರೇವಣ್ಣ ಎದುರು ಗೆಲ್ಲಲಾಗಲಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಕ್ಷೇತ್ರ, ದೇವೇಗೌಡರ ಸ್ಪರ್ಧಿಸಿ, ರಾಷ್ಟ್ರ ರಾಜಕಾರಣಕ್ಕೆ ಬಂದ ಬಳಿಕ ಕ್ಷೇತ್ರವನ್ನ ಹೆಚ್.ಡಿ. ರೇವಣ್ಣನವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಸದ್ಯ ರೇವಣ್ಣನವರೇ ಕ್ಷೇತ್ರದ ಶಾಸಕರಾಗಿದ್ದು, ಅವರು ಎದುರು ನಿಲ್ಲಲು ಬೇರೆ ಪಕ್ಷದ ನಾಯಕರು ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಳೆದ ಭಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಸೋತಿದ್ದ ಬಾಗೂರು ಮಂಜೇಗೌಡ ನನಗೆ ಹಾಸನ ಕೊಡಿ ಹೊಳೆನರಸೀಪುರ ಬೇಡ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.
ಸದ್ಯ ಹೊಳೆನರಸೀಪುರದಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಕೊಡುತ್ತದೆ ಎನ್ನುವುದರ ಮೇಲೆ ಕ್ಷೇತ್ರದ ವಾತಾವರಣ ನಿರ್ಧಾರವಾಗಲಿದೆ. ಸದ್ಯ ಕ್ಷೇತ್ರದಾದ್ಯಂತ ಏಕಮೇವ ಚಕ್ರಾಧಿಪತಿಯ ಹಾಗೆ ರೇವಣ್ಣ ಓಡಾಡ್ಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಆಟಂಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ.
ಕ್ಷೇತ್ರದ ಮತದಾರ ವಿವರ (2018ರ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ)
ಕ್ಷೇತ್ರದ ಕೋಡ್: 197
ಪುರುಷರು: 1,06,032
ಮಹಿಳೆಯರು: 1,03,054
ಇತರರು: 00
ಒಟ್ಟು: 2,09,086












Click it and Unblock the Notifications