ಶಿಕ್ಷಣ ಕೊಡಿ ಅಂದ್ರೆ, ಕೇಸರಿ ಶಾಲು ಕೊಡ್ತಾರೆ; ಇಂಥಾ ಸರ್ಕಾರ ನನ್ನ ಜೀವನದಲ್ಲೇ ನೋಡಿಲ್ಲ: ರೇವಣ್ಣ
ಹಾಸನ, ಫೆಬ್ರವರಿ 11: ಇಂತಹ ಕೆಟ್ಟ ಆಡಳಿತ ನಡೆಸುವ ಸರ್ಕಾರವನ್ನು ನನ್ನ ಜೀವನದಲ್ಲೇ ನೋಡಿಲ್ಲ. ಶಿಕ್ಷಣ ಇಲಾಖೆ ಖಾಸಗಿಯವರ ಹಿಡಿತದಲ್ಲಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಆರೋಪಿಸಿದರು.
ಗುರುವಾರ ಹಾಸನದಲ್ಲಿ ಮಾತನಾಡಿದ ಎಚ್.ಡಿ. ರೇವಣ್ಣ, ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿ ಎಂದರೆ ಕೇಸರಿ ಶಾಲು ಕೊಡುತ್ತಿದ್ದಾರೆ. ಅವರ ಧರ್ಮವನ್ನು ಅವರು ಆಚರಣೆ ಮಾಡಿದರೆ ತೊಂದರೆ ಏನು? ಎಂದು ಪ್ರಶ್ನಿಸಿದರು.
ಹಿಜಾಬ್ ಧರಿಸುವ ಪರವಾಗಿ ಮಾತನಾಡಿದ ಎಚ್.ಡಿ. ರೇವಣ್ಣ, ಹಿಜಾಬ್ ಇದು ಇಂದು, ನಿನ್ನೆ ಶುರುವಾದ ಪದ್ಧತಿಯಲ್ಲ. ಹಿಂದಿನಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಯಾರು ಯಾವ ಬಟ್ಟೆಯನ್ನಾದರೂ ಹಾಕಿಕೊಂಡು ಬರಲಿ. ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.

ನನ್ನ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರ ನೋಡಿಲ್ಲ
ಒಂದು ಪಕ್ಷ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಇನ್ನೊಂದು ಪಕ್ಷ ಹಿಂದೂಗಳ ಪರ ಇದೆ. ಎರಡು ಸಮಾಜವನ್ನು ಹೊಡೆದಾಡಿಸಲು ಹೋಗಬಾರದು. ಇಂತಹ ಕೆಟ್ಟ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿರಲಿಲ್ಲ. ಇದು ಸತ್ತೋಗಿರುವ, ಪಾಪರ್ ಬಿದ್ದಿರುವ ಸರ್ಕಾರ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳ್ಳವರ ಪರ ಇದೆ ಎಂದು ಆಕ್ರೋಶ ಹೊರಹಾಕಿದರು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಒಂದು ವರ್ಷ ಆದರೂ ಕೆಡಿಪಿ ಸಭೆ ಕರೆದಿಲ್ಲ. ಜಿಲ್ಲೆಯ ಪರಿಸ್ಥಿತಿ ಏನಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಸುಖಾಸುಮ್ಮನೆ ಅಧಿಕಾರಿಗಳಿಗೆ ಧಮ್ಕಿ ಹಾಕುವುದು ಬಿಡಬೇಕು. ಜಿಲ್ಲೆಯಲ್ಲಿ ಇಷ್ಟಬಂದಂತೆ ಸಿಎಲ್ 7 ಲೈಸೆನ್ಸ್ ನೀಡಲಾಗಿದೆ. ಉದ್ಯಮಿಗಳು ನಾವು ಜಿಲ್ಲಾ ಉಸ್ತುವಾರಿ ಸಚಿವರ ಪಾರ್ಟ್‍ನರ್ಸ್‌ಗಳು ಎನ್ನುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಿಡಿಕಾರಿದರು.

ಶೇ.10 ಕೊಟ್ಟರೆ ಏನು ಬೇಕಾದರೂ ಕೆಲಸ ಮಾಡುತ್ತಾರೆ. ಇಂತಹ ಲೂಟಿ ಸರ್ಕಾರವನ್ನು ನಾನು ಎಂದು ನೋಡಿಯೇ ಇಲ್ಲ. ಸರ್ಕಾರದಲ್ಲಿರುವವರು ಲೂಟಿ ಹೊಡೆಯುತ್ತಿದ್ದಾರೆ. ಇಂತಹ ದುರ್ಬಲ ಮುಖ್ಯಮಂತ್ರಿಯನ್ನು ನಾನು ನೋಡಿರಲಿಲ್ಲ. ಪ್ರಧಾನಿ ಮೋದಿಯವರು ಸರ್ಕಾರದ ನಡೆ ಗಮನಿಸಬೇಕು. ಯಾವುದೇ ಕಾರಣಕ್ಕೂ 2023ರಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಬರಲ್ಲ. ಬಿಜೆಪಿ 40 ಸೀಟ್‌ಗೆ ಇಳಿಯುತ್ತದೆ. 2013ರಲ್ಲಿ ಆದ ರೀತಿಯೇ ಆಗುತ್ತದೆ ಎಂದು ಭವಿಷ್ಯ ನುಡಿದರು.
ವೇದಿಕೆ ಮೇಲೆ ನಿಂಬೆಹಣ್ಣು ಉರುಳಿ ಬಿಟ್ಟ ರೇವಣ್ಣ!
ಅರಸೀಕೆರೆ ತಾಲೂಕಿನ ನಾಗರಹಳ್ಳಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ವೇದಿಕೆ ಮೇಲಿಂದ ಅಭಿಮಾನಿಗಳತ್ತ ನಿಂಬೆಹಣ್ಣು ಉರುಳಿಸಿದ್ದಾರೆ.
ಮೊದಲಿಗೆ ಅರಸೀಕೆರೆ ಶಾಸಕ ಕೆ. ಶಿವಲಿಂಗೇಗೌಡ ಅವರು ಎಚ್.ಡಿ. ರೇವಣ್ಣ ಅವರಿಗೆ ನಿಂಬೆಹಣ್ಣು ಕೊಟ್ಟು ತಮಾಷೆ ಮಾಡಿದರು. ಬಳಿಕ ಅಭಿಮಾನಿಗಳು ನಿಂಬೆಹಣ್ಣು ನೀಡುವಂತೆ ರೇವಣ್ಣ ಅವರಲ್ಲಿ ಮನವಿ ಮಾಡಿದ್ದಾರೆ. ರೇವಣ್ಣ ವೇದಿಕೆ ಮೇಲಿಂದ ಬೇಸಿನ್‍ನಲ್ಲಿದ್ದ ಎಲ್ಲಾ ನಿಂಬೆ ಹಣ್ಣುಗಳನ್ನು ಒಂದೊಂದಾಗಿ ಅಭಿಮಾನಿಗಳತ್ತ ಉರುಳಿಸಿದ್ದಾರೆ. ರೇವಣ್ಣ ಉರುಳಿಸಿದ ನಿಂಬೆ ಹಣ್ಣುಗಳನ್ನು ಅಭಿಮಾನಿಗಳು ಒಂದೊಂದಾಗಿಯೇ ಆಯ್ದುಕೊಂಡಿದ್ದಾರೆ. ಈ ತಮಾಷೆಯ ಗಳಿಗೆಯಲ್ಲಿ ವೇದಿಕೆ ಮೇಲೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯೂ ಭಾಗಿಯಾಗಿದ್ದರು.












Click it and Unblock the Notifications