HD Revanna: ತೆಲಂಗಾಣದ ಖ್ಯಾತ ಜ್ಯೊತಿಷಿ ಮನೆಗೆ ಭೇಟಿ ನೀಡಿದ ಎಚ್.ಡಿ.ರೇವಣ್ಣ ಕುಟುಂಬ
ಹಾಸನ, ಆಗಸ್ಟ್, 02: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಇಂದು (ಆಗಸ್ಟ್ 02) ಕುಟುಂಬ ಸಮೇತ ತೆಲಂಗಾಣದ ಖ್ಯಾತ ಜ್ಯೊತಿಷಿ ಮನೆಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ.
ಎಚ್.ಡಿ.ರೇವಣ್ಣ ಹಾಗೂ ಕುಟುಂಬದ ಸದಸ್ಯರು ಇಂದು ತೆಲಂಗಾಣದ ಖ್ಯಾತ ಜ್ಯೊತಿಷಿ ವೇಣುಸ್ವಾಮಿ ಅವರನ್ನು ಭೇಟಿ ಆಗು ಆಶೀರ್ವಾದ ಪಡೆದರು. ಇನ್ನು ಇದೇ ವೇಳೆ ರೇವಣ್ಣ ಅವರು ಜ್ಯೊತಿಷಿಗಳ ಸಮ್ಮುಖದಲ್ಲಿ ಪತ್ನಿ ಭವಾನಿ ರೇವಣ್ಣಗೆ ಹೂವಿನ ಹಾರ ಹಾಕಿ ಗಮನ ಸೆಳೆದರು.

ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ, ಪುತ್ರರಾದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವೇಣುಸ್ವಾಮಿ ಅವರ ಆಶೀರ್ವಾದ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಎಚ್.ಸಿ.ಬಾಲಕೃಷ್ಣ ಹೇಳಿದ್ದೇನು?
ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರ ನಡುವೆ ಅಸಮಾಧಾನ ಆರಂಭವಾಗಿದೆ ಎನ್ನುವುದರ ಬಗ್ಗೆ ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಮಾತನಾಡಿದ್ದು, ಲೋಕಸಭಾ ಚುನಾವಣಾ ಸಂಬಂಧ ದೆಹಲಿಗೆ ಮಂತ್ರಿಗಳು ಹೋಗಿದ್ದಾರೆ. ಚುನಾವಣೆಯ ಜವಾಬ್ದಾರಿ ನೀಡಲು ದೆಹಲಿಗೆ ಕರೆಸಿಕೊಂಡಿದ್ದಾರೆ ಎಂದರು.
ಬಿಜೆಪಿ ಸರ್ಕಾರದಿಂದ ಜನ ತತ್ತರಿಸಿ ಹೋಗಿದ್ದರು
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಿಂದ ಜನ ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ಪಕ್ಷ ಸಾಮಾನ್ಯ ಜನರಿಗಾಗಿ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಗ್ಯಾರಂಟಿಗಳ ಒತ್ತಡ ಜಾಸ್ತಿ ಆಗಿದೆ. ಹಣ ಸೋರಿಕೆ ತಡೆಗಟ್ಟುವುದು, ಸಂಪನ್ಮೂಲ ಕ್ರೋಢೀಕರಣ ಮಾಡುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. 6 ತಿಂಗಳ ನಂತರ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದರು.
ಸಚಿವರು ಶಾಸಕರಿಗೆ ಸ್ಪಂದಿಸುತ್ತಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಪಕ್ಷದಲ್ಲೂ ಇದು ಇರುತ್ತದೆ. ನಮ್ಮ ಸ್ನೇಹಿತರೇ ನಮ್ಮ ಮೇಲೆ ಅಸಮಾಧಾನ ಮಾಡಿಕೊಳ್ಳುತ್ತಾರೆ. ಕಾರ್ಯದೊತ್ತಡ ಹಿನ್ನಲೆಯಲ್ಲಿ ಶಾಸಕರಿಗೆ ಸಚಿವರು ಸ್ಪಂದಿಸಲು ಆಗುವುದಿಲ್ಲ. ಅಸಮಾಧಾನ ಎಲ್ಲರ ಮೇಲೂ ಇರುತ್ತದೆ. ಅದನ್ನು ಬೇರೆ ರೀತಿಯಲ್ಲಿ ಬಿಂಬಿಸುವುದು ಬೇಡ ಎಂದರು.
ಟ್ರಾನ್ಸ್‌ಫರ್ ವಿಚಾರ, ಸಣ್ಣ ಪುಟ್ಟ ಕೆಲಸಗಳು ಆಗಿಲ್ಲ ಎಂದು ಅಸಮಾಧಾನ ಇರುತ್ತದೆ. ಇದನ್ನೆಲ್ಲಾ ಸರಿಪಡಿಸುವ ಕೆಲಸ ಸಿಎಂ ಹಾಗೂ ಡಿಸಿಎಂ ಮಾಡುತ್ತಾರೆ. ಪತ್ರ ಬರೆದಿರುವುದು ಬೋಗಸ್, ಯಾರು ಸಹ ಪತ್ರಗಳನ್ನು ಬರೆದಿಲ್ಲ. ಪತ್ರವನ್ನು ಕಟ್ ಅಂಡ್ ಪೇಸ್ಟ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.












Click it and Unblock the Notifications