ದೇವೇಗೌಡರು ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ, ಅವರನ್ನು ಲೋಕಸಭೆಗೆ ನಿಲ್ಲಿಸುತ್ತೇವೆ- ರೇವಣ್ಣ
ಹಾಸನ, ಮೇ16: ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನು ಮಾಡಬೇಕು ಎನ್ನುವುದು ನನ್ನ ಆಸೆ. ನಾನು ಬದುಕಿರುವುದರೊಳಗೆ ಅದನ್ನು ಮಾಡಿ ತೋರಿಸುತ್ತೇನೆ. ಐದು ವರ್ಷಕ್ಕೆ ಮಾಡುತ್ತೇನೋ, ಹತ್ತು ವರ್ಷಕ್ಕೆ ಮಾಡುತ್ತೇನೋ ಆದರೆ ಇಡೀ ರಾಜ್ಯದಲ್ಲಿ ಹಾಸನ ಜಿಲ್ಲೆಯನ್ನು ನಂಬರ್ ಒನ್ ಮಾಡಿ ತೋರಿಸುತ್ತೇನೆ. ಇಲ್ಲವಾದಲ್ಲಿ ಇನ್ನೊಂದು ಸಾರಿ ರಾಜಕೀಯಕ್ಕೆ ಬರಲ್ಲ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಅಭಿವೃದ್ಧಿ ಮಾಡಿ ಕೊಟ್ಟರೆ ಸಂತೋಷ. ಇಲ್ಲವಾದರೆ ನಮಗೂ ಸಮಯ ಬರುತ್ತದೆ. ನನ್ನ ಗ್ರಹಗತಿಗಳು ಇನ್ನೂ ಚೆನ್ನಾಗಿವೆ. ದೇವೇಗೌಡರು ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ. ದೇವೇಗೌಡರನ್ನು ಮತ್ತೆ ಪಾರ್ಲಿಮೆಂಟ್‌ಗೆ ಕರ್ಕಂಡು ಹೋಗೇ ಹೋಗುತ್ತೇವೆ. ದೇವೇಗೌಡರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸುತ್ತೇವೆ. ಯಾವ ಕ್ಷೇತ್ರ ಅಂತ ಮುಂದೆ ನೋಡೋಣ ಎಂದರು.

ದೇವೇಗೌಡರಿಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ಅವರು ಲೋಕಸಭೆಗೆ ನಿಲ್ಲಲ್ಲ ಅಂದರೂ ನಾವು ಬಿಡಲ್ಲ ಲೋಕಸಭೆ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ ಲೋಕಸಭೆಗೆ ಕಳುಹಿಸುತ್ತೇವೆ. ಹಾಸನ ಜಿಲ್ಲೆಯಿಂದ ಲೋಕಸಭೆ ಚುನಾವಣೆಗೆ ಪ್ರಜ್ವಲ್ ರೇವಣ್ಣನೇ ಸ್ಪರ್ಧೆ ಮಾಡುತ್ತಾನೆ ಎಂದು ಸ್ಪಷ್ಟವಾಗಿ ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷದಿಂದ ನಾಲ್ಕು ಜನ ಗೆದ್ದು, ಮೂವರು ಸೋತಿದ್ದೇವೆ. ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಜನ ಮತ ಹಾಕಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೆಲವೊಮ್ಮೆ ರಾಜಕೀಯದಲ್ಲಿ ಹೀಗೆಲ್ಲಾ ಆಗುತ್ತದೆ. ಅದನ್ನೆಲ್ಲಾ ಆಗಿ ಸ್ಪರ್ಧಾ ಮನೋಭಾವದಿಂದ ತೆಗೆದುಕೊಳ್ಳಬೇಕು. ನಮ್ಮನ್ನು ಮುಗಿಸಲು ಎರಡೂ ಪಕ್ಷಗಳು ಕೆಲಸ ಮಾಡಿವೆ ಎಂದರು.
ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ರಾಜ್ಯದ ಜನರಿಗೆ ಗ್ಯಾರೆಂಟಿ ಕಾರ್ಡ್ ಕೊಟ್ಟಿದ್ದಾರೆ. ಎಲ್ಲವನ್ನೂ ಅವರು ಈಡೇರಿಸಲಿ. ನಾವು ಅವರಿಗೆ ಸಹಕಾರ ನೀಡುತ್ತೇವೆ. ವಿರೋಧ ಪಕ್ಷದಲ್ಲಿ ನಾವು ಕೂರುತ್ತೇವೆ. ೧೯೮೯ ರಲ್ಲಿ ಎಂಟಕ್ಕೆ ಎಂಟು ಸ್ಥಾನ ಸೋತೆವು. ಮತ್ತೆ ಒಂದೇ ವರ್ಷದಲ್ಲಿ ದೇವೇಗೌಡರು ಲೋಕಸಭೆಗೆ ಸ್ಪರ್ಧಿಸಿದರು. ಆಗ ಆಡಳಿತಾರೂಢ ಪಕ್ಷವಿದ್ದರೂ ದೇವೇಗೌಡರು ಗೆದ್ದಿದ್ದರು ಎಂದು ಹೇಳಿದರು.

ಕೋಮುವಾದಿಗಳನ್ನು ದೂರವಿಡಲು ರಾಷ್ಟ್ರೀಯ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಮಂಡ್ಯದಲ್ಲಿ ಬಿಜೆಪಿ ಕಾಂಗ್ರೆಸ್ ಸೇರಿ ಜೆಡಿಎಸ್ ತೆಗಿಬೇಕು ಎಂದು ಕೆಲಸ ಮಾಡಿದ್ದಾರೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಬರಬೇಕಿದ್ದರೆ ಅದು ಬಿಜೆಪಿ ಮುಖಂಡರ ತಪ್ಪಿಂದಲೇ ಕಾರಣ ಮಂಡ್ಯ, ನಾಗಮಂಗಲದಲ್ಲಿ ನಮ್ಮವರೇ ಎರಡು ಜನ ಸ್ಪರ್ಧೆ ಮಾಡಿದರು. ನಮ್ಮವರೇ ಬಂಡಾಯ ನಿಂತಾಗ ಈ ರೀತಿ ತೊಂದರೆ ಆಗುತ್ತದೆ ಎಂದರು.












Click it and Unblock the Notifications