ಹಾಸನದಲ್ಲಿ ಡಾಬಾ ಸಿಬ್ಬಂದಿ ಕೊಲೆ: ಅಪಘಾತದಿಂದ ಸಿಕ್ಕಿಬಿದ್ದ ಹಂತಕರು
ಹಾಸನ ಅಕ್ಟೋಬರ್ 11: ಕೊಲೆ ಮಾಡಿದ ವ್ಯಕ್ತಿಯ ಮೃತದೇಹವನ್ನು ರೈಲ್ವೆ ಹಳಿಯ ಮೇಲೆ ಎಸೆಯಲು ಬಂದ ಆರೋಪಿಗಳು ಅಪಘಾತದಿಂದ ಪೊಲೀಸರು ಕೈಗೆ ಸಿಕ್ಕಿಬಿದ್ದ ಘಟನೆ ಅಕ್ಟೋಬರ್ 11ರ ಹಾಸನ ತಾಲೂಕಿನ ಶಾಂತಿಗ್ರಾಮ ಬಳಿಯ ಬೆಂಗಳೂರು ಹಾಸನ ರೈಲ್ವೆ ಮಾರ್ಗದ ಬಳಿ ನಡೆದಿದೆ. ಈ ಘಟನೆಯಿಂದ ಬೆಳ್ಳಂಬೆಳಗ್ಗೆ ಹಾಸನ ಜನ ಬೆಚ್ಚಿಬಿದ್ದಿದ್ದಾರೆ.
ಹಾಸನ ತಾಲೂಕಿನ ಶಾಂತಿಗ್ರಾಮ ಬಳಿ ನೋಡ ನೋಡುತ್ತಿದ್ದಂತೆ ಬುಲೇರೋ ವಾಹನವೊಂದು ಪ್ರಪಾತದಂತಿದ್ದ ರೈಲ್ವೆ ಹಳಿ ಮೇಲೆ ಉರುಳಿ ಬಿದ್ದಿದೆ. ಅಪಘಾತದ ಸದ್ದಿಗೆ ಸ್ಥಳೀಯ ಜನರು ಓಡೋಡಿ ಬಂದಿದ್ದಾರೆ. ಚಾಲಕ ಪ್ರಾಣಾಪಾಯದಿಂದ ಒದ್ದಾಡುತ್ತಿದ್ದು, ಕೂಡಲೇ ಸ್ಥಳೀಯರು ಹೊರಗೆಳೆದು ಶಾಂತಿಗ್ರಾಮ ಠಾಣೆಯ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿದ್ದು, ಪರಿಶೀಲನೆ ನಡೆಸಿದಾಗ ಅಘಾತಗೊಂಡವರ ಖತರ್ನಾಕ್ ಪ್ಲಾನ್ ಬಯಲಾಗಿದೆ. ಬುಲೇರೋ ವಾಹನಲ್ಲಿ ಮೃತದೇಹ ಪತ್ತೆಯಾಗಿದ್ದು, ಆರೋಪಿಗಳು ಕೊಲೆ ಪ್ರಕರಣರವನ್ನು ಮುಚ್ಚಿ ಹಾಕುಲು ಹೋಗಿ ವಿಫಲರಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಪೊಲೀಸರ ಪರೀಶೀಲನೆ ವೇಳೆ ಕೊಲೆ ಸತ್ಯ ಬಯಲು
ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ನಿನ್ನೆ ಮಧ್ಯಾಹ್ನ 1-30 ರ ಸುಮಾರಿನಲ್ಲಿ ಹಾಸನ ಬೆಂಗಳೂರು ರೈಲ್ವೆ ಹಳಿಯಲ್ಲಿ ಬುಲೇರೋ ವಾಹನವೊಂದು ಉರುಳಿ ಬಿದ್ದಿದ್ದು, ಸ್ಥಳೀಯರು ಕೂಡಲೇ ರಕ್ಷಣೆಗಾಗಿ ಓಡಿ ಬಂದಿದ್ದಾರೆ. ಪ್ರಪಾತದಂತಿರುವ ಈ ರೈಲ್ವೆ ಹಳಿಗೆಗೆ ಜನರು ಬರುವ ವೇಳೆಗೆ ವಾಹನದಲ್ಲಿದ್ದ ಒಳಗಿದ್ದ ಇಬ್ಬರು ಆಚೆ ಬಂದಿದ್ದಾರೆ. ವಾಹನದೊಳಗೆ ಸಿಲುಕಿದ್ದ ಚಾಲಕನನ್ನು ಹೊರತೆಗೆದ ಸ್ಥಳೀಯರು, ಶಾಂತಿಗ್ರಾಮ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಜನರು ಬೆಚ್ಚಿಬೀಳುವ ಸತ್ಯ ಬಯಲಾಗಿದೆ.

ವಾಹನದೊಳಗೆ ಹೊದಿಕೆಗಳಲ್ಲಿ ಸುತ್ತಿದ ಮೃತದೇಹ
ಪೊಲೀಸರ ವಾಹನ ಪರಿಶೀಲನ ವೇಳೆ ವಾಹನದೊಳಗೆ ಹೊದಿಕೆಗಳಲ್ಲಿ ಸುತ್ತಿ ಮೃತದೇಹವೊಂದು ಪತ್ತೆಯಾಗಿದೆ. ಮೃತದೇಹವನ್ನು ರೈಲ್ವೆ ಹಳಿಮೇಲೆ ಎಸೆಯಲು ಬಂದ ಯುವಕರು ಪಾತಮತ್ತರಾಗಿದ್ದ ಕಾರಣ ವಾಹನ ನಿಯಂತ್ರಣ ತಪ್ಪಿ ಕೆಳಗೆ ಉರುಳಿದೆ. ಹಾಗಾಗಿ ಆರೋಪಿಗಳು ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಾರೆ. ವಾಹನದಲ್ಲಿದ್ದ ಆರೋಪಿಗಳೆಲ್ಲಾ ಶಾಂತಿಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿರುವ ಡಾಬಾವೊಂದರ ಸಿಬ್ಬಂದಿ ಎನ್ನುವುದು ತಿಳಿದು ಬಂದಿದ್ದು, ಆರೋಪಿಗಳು ಕೊಲೆ ಪ್ರಕರಣವನ್ನು ರೈಲ್ವೆ ಅಪಘಾತ ಎಂದು ಬಿಂಬಿಸಲು ಯತ್ನಿಸಿರುವ ಅನುಮಾನ ವ್ಯಕ್ತವಾಗಿದೆ.

ಕಂಠಪೂರ್ತಿ ಕುಡಿದ ಆರೋಪಿಗಳು ಲಾಕ್
ಮೂಲತಃ ಬೆಳಗಾವಿಯ ಆನಂದ್(52) ಕೆಲ ದಿನಗಳಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿರುವ ಡಾಬಾ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಸಂಬಳ ಕೊಡದಿರುವ ವಿಚಾರಕ್ಕೆ ಆನಂದ್ ಹಾಗೂ ಡಾಬಾದವರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ಗಲಾಟೆಯಲ್ಲಿ ಆರೋಪಿಗಳು ನಡೆಸಿರುವ ಹಲ್ಲೆಯಲ್ಲಿ ಆನಂದ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕಂಠಪೂರ್ತಿ ಕುಡಿದ ಮೂವರು ಆರೋಪಿಗಳು ಮೃತದೇಹವನ್ನು ರೈಲ್ವೆ ಹಳಿ ಮೇಲೆ ಎಸೆಯಲು ಯತ್ನಿಸಿದ್ದಾರೆ ಎನ್ನಲಾಗಿದೆ. ಅಪಘಾತದಲ್ಲಿ ಮೂವರು ಆರೋಪಿಗಳು ಕೂಡ ಗಾಯಗೊಂಡಿದ್ದಾರೆ.

ನಾನಾ ಆಯಾಮಗಳಲ್ಲಿ ಪೊಲೀಸರ ತನಿಖೆ
ಘಟನೆ ಸಂಬಂಧ ಹಾಸನ ತಾಲೂಕಿನ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ರಾಘು ಹಾಗೂ ಇತರ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪ್ರಕರಣ ಕೈಗೆತ್ತಿಕೊಂಡಿರುವ ಶಾಂತಿಗ್ರಾಮ ಪೊಲೀಸರು ಆರೋಪಿಗಳು ಕೊಲೆ ಮಾಡಿ ಮೃತದೇಹವನ್ನು ಬೇರೆಡೆ ಎಸೆದು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರಾ?, ಪ್ರಕರಣದ ಪ್ರಮುಖ ಆರೋಪಿ ಯಾರು? ಕೊಲೆಗೆ ಕಾರಣವೇನು? ಹೀಗೆ ನಾನಾ ಆಯಾಮಗಳಲ್ಲಿ ತನಿಖೆ ನಡೆಸಲಿದ್ದಾರೆ. ಒಟ್ಟಾರೆ ಆರೋಪಿಗಳ ಯಡವಟ್ಟು ಹಾಗೂ ಸ್ಥಳೀಯ ಸಮಯ ಪ್ರಜ್ಞೆಯಿಂದ ಪ್ರಕರಣ ಬಯಲಾಗಿದೆ.












Click it and Unblock the Notifications