ಹಾಸನದಲ್ಲಿ ತೆನೆ ನಾಯಕರ ವಿರುದ್ಧ ತಿರುಗಿ ಬಿದ್ದ ಕೈ ಕಾರ್ಯಕರ್ತರು
ಹಾಸನ, ಮಾರ್ಚ್ 30 : ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ಬರುವ ರಾಮನಗರದಲ್ಲಿ ಜೆಡಿಎಸ್ ಕಾರ್ಯಕರ್ತರೇ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯ ವಿರುದ್ಧ, ಕಾಂಗ್ರೆಸ್ ನಾಯಕರ ದರ್ಪದ ವಿರುದ್ಧ ತಿರುಗಿಬಿದ್ದಿದ್ದರೆ, ಹಾಸನದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಇಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ತಿರುಗಿ ನಿಂತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲೋಕಸಭೆಗೆ ಹಾಸನವನ್ನು ಪ್ರತಿನಿಧಿಸುತ್ತಾ ಬಂದಿದ್ದ ಮಾಜಿ ಪ್ರಧಾನಿ ದೇವೇಗೌಡರು ಈ ಬಾರಿ ತನ್ನ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಭಾವುಕರಾಗಿಯೇ ಬಿಟ್ಟು ಕೊಟ್ಟು ತಾವು ತುಮಕೂರಿನ ಹಾದಿ ಹಿಡಿದಿದ್ದಾರೆ. ಅವರು ತುಮಕೂರಿಗೆ ಹೋಗುತ್ತಿದ್ದಂತೆ ಇಲ್ಲಿ ಹಾಸನದಲ್ಲಿ ಭಿನ್ನಮತ ಭುಗಿಲೆದ್ದಿದೆ. ಇದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಲ್ಲಿ ಭಾರೀ ತಲೆನೋವು ತಂದಿದೆ.
ದೇವೇಗೌಡರು ಹಾಸನದಲ್ಲಿ ಮೊಮ್ಮಗ ರೇವಣ್ಣರನ್ನು ಕಣಕ್ಕಿಳಿಸುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ದೋಸ್ತಿಗಳಾದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಅದರಲ್ಲೂ ಅವತ್ತು ಕಾಂಗ್ರೆಸ್‌ನಲ್ಲಿದ್ದ ಎ. ಮಂಜು ಅವರು ನಮ್ಮದು ಏನಿದ್ದರೂ ದೇವೇಗೌಡರಿಗೆ ಮಾತ್ರ ಬೆಂಬಲ ಎಂಬ ಮಾತನ್ನು ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರಲ್ಲದೆ, ಕ್ರಮೇಣ ಒಂದಷ್ಟು ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡಿದ್ದರು.
ಹಾಸನ ಲೋಕಸಭೆ ಕ್ಷೇತ್ರದ ಸಮಗ್ರ ಪರಿಚಯ

ಸದಾ ಬಡಿದಾಡಿಕೊಂಡೇ ಬಂದವರು
ಹಾಗೆ ನೋಡಿದರೆ ಮೊದಲಿನಿಂದಲೂ ಹಾಸನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬದ್ಧ ವೈರಿಗಳೇ. ಇಲ್ಲಿನ ಕಾರ್ಯಕರ್ತರು ಸದಾ ರಾಜಕೀಯವಾಗಿ ಬಡಿದಾಡಿಕೊಂಡೇ ಬಂದವರು. ಇವರ ಮನಸ್ಥಿತಿ ಕೂಡ ಅಷ್ಟು ಸುಲಭಕ್ಕೆ ಒಂದಾಗುವಂಥದ್ದಲ್ಲ ಎಂಬುದು ಗೊತ್ತಿರುವ ವಿಚಾರವೇ. ಹೀಗಿದ್ದರೂ ರಾಜ್ಯ ನಾಯಕರ ಆದೇಶದಂತೆ ಕೆಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಅನಿವಾರ್ಯವಾಗಿ ಜೆಡಿಎಸ್‌ನೊಂದಿಗೆ ಸಖ್ಯ ಬೆಳೆಸಿ ಪ್ರಚಾರದಲ್ಲಿ ಭಾಗವಹಿಸುತ್ತಿದ್ದರೂ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರು ಒಂದಾದಂತೆ ಕಾಣುತ್ತಿಲ್ಲ.

ತೀವ್ರ ದ್ವಂದ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು
ಹೀಗಾಗಿ ಎ. ಮಂಜು ಅವರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಂತೆಯೇ ಒಂದಷ್ಟು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯತ್ತ ಮುಖ ಮಾಡಿದ್ದರು. ಉಳಿದಂತೆ ಒಂದಷ್ಟು ಕಾಂಗ್ರೆಸ್ ಕಾರ್ಯಕರ್ತರು ಅತ್ತ ಜೆಡಿಎಸ್‌ಗೆ ಬೆಂಬಲ ನೀಡಲಾಗದೆ ಇತ್ತ ಕಾಂಗ್ರೆಸ್‌ನಲ್ಲಿಯೂ ಇರಲಾಗದೆ ತಡಬಡಿಸುತ್ತಿದ್ದಾರೆ, ತೀವ್ರ ದ್ವಂದ್ವದಲ್ಲಿದ್ದಾರೆ. ಜಿಲ್ಲೆಯಾದ್ಯಂತ ಅಲ್ಲಲ್ಲಿ ದೋಸ್ತಿ ಪಕ್ಷಗಳಲ್ಲಿ ಆಕ್ರೋಶಗಳು ಭುಗಿಲೆದ್ದಿರುವುದು ಕಂಡು ಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿಯೇ ಜೆಡಿಎಸ್ ವಿರುದ್ಧ ಹರಿಹಾಯತೊಡಗಿದ್ದಾರೆ.
ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

ರೇವಣ್ಣ, ದೇವೇಗೌಡರಿಗೆ ಇರುಸುಮುರುಸು
ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರು ಮನಸ್ಸು ಬದಲಿಸಿ ಕೆಲಸ ಮಾಡಲು ಒಪ್ಪಿಕೊಂಡಿದ್ದರೂ ಇನ್ನು ಕೆಲವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಪರವಾಗಿ ಕೆಲಸ ಮಾಡಲು ಸಿದ್ಧರಾಗಿ ನಿಂತಿರುವುದು ಕಂಡು ಬಂದಿದೆ. ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಜ್ವಲ್ ಮತ್ತು ಅವರ ತಂದೆ ರೇವಣ್ಣ ಮತ್ತು ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಎಚ್ ಡಿ ದೇವೇಗೌಡ ಅವರಿಗೆ ಈ ಬೆಳವಣಿಗೆ ಇರುಸುಮುರುಸು ತಂದಿದೆ.

ಕಾಂಗ್ರೆಸ್ಸಿಗೆ ಮೂರು ಕಾಸಿನ ಬೆಲೆಯಿಲ್ಲ
ಅರಸೀಕೆರೆಯಲ್ಲಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಮಾಜಿ ಸಚಿವ ಬಿ. ಶಿವರಾಂ ಅವರ ಸಮ್ಮುಖದಲ್ಲಿ ಎರಡು ಪಕ್ಷದ ಕಾರ್ಯಕರ್ತರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಲಾಯಿತಾದರೂ, ಈ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ನಾಯಕರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದು, ಇದು ದೋಸ್ತಿಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದರೂ ಜಿಲ್ಲೆಯಲ್ಲಿ ಜೆಡಿಎಸ್‌ನವರೇ ಪಾರುಪತ್ಯ ಸಾಧಿಸಿದ್ದು, ಕಾಂಗ್ರೆಸ್‌ನವರಿಗೆ ಮೂರು ಕಾಸಿನ ಬೆಲೆ ಇಲ್ಲದಂತಾಗಿದೆ.

ಪ್ರಜ್ವಲ್ ಗೆಲುವಿಗೆ ಕಾಂಗ್ರೆಸ್ ಮತ ಅನಿವಾರ್ಯ
ಇದೀಗ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಾದರೆ ಕಾಂಗ್ರೆಸ್ ಮತಗಳು ಅನಿವಾರ್ಯವಾಗಿರುವುದರಿಂದ ಇದೀಗ ಜೆಡಿಎಸ್ ಮುಖಂಡರಿಗೆ, ಸಚಿವರಿಗೆ, ಶಾಸಕರಿಗೆ ಕಾಂಗ್ರೆಸ್‌ನವರ ನೆನಪಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಪಕ್ಷ ಬೆಂಬಲಿಸುವುದಿಲ್ಲವೆಂದು ಕೈ ಕಾರ್ಯಕರ್ತರು ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿಯೇ ನಮ್ಮ ಬೆಂಬಲ ಬಿಜೆಪಿಗೆಂದು ಹೇಳುವ ಮೂಲಕ ವೇದಿಕೆ ಮೇಲಿದ್ದ ಮುಖಂಡರನ್ನು ಪೇಚಿಗೆ ಸಿಲುಕಿಸಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಕಿತ್ತಾಟ, ಬಿಜೆಪಿಗೆ ವರದಾನ
ಇದೇ ರೀತಿಯ ಘಟನೆಗಳು ಬೇಲೂರಿನಲ್ಲಿಯೂ ನಡೆದಿದ್ದು, ಈ ಬೆಳವಣಿಗೆ ದಳಪತಿಗಳಲ್ಲಿ ತಳಮಳವನ್ನುಂಟು ಮಾಡಿದೆ. ಕ್ಷೇತ್ರವನ್ನು ಬಿಟ್ಟು ಬಿಡದೆ ಮಗನ ಗೆಲುವಿಗಾಗಿ ಶ್ರಮ ವಹಿಸುತ್ತಿರುವ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ಕಾಂಗ್ರೆಸ್ ಮುಖಂಡರ ಮನವೊಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ಅತ್ತ ಬಿಜೆಪಿ ಅಭ್ಯರ್ಥಿಯಾಗಿರುವ ಎ. ಮಂಜು ಅವರು ಗೆದ್ದೇ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿದ್ದು, ಕಾಂಗ್ರೆಸ್ ಕಾರ್ಯಕರ್ತರ ಮನಸ್ಸೆಳೆಯುವ ಯತ್ನಕ್ಕೂ ಕೈ ಹಾಕಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಹಾಸನದಲ್ಲಿ ದೋಸ್ತಿ ಪಕ್ಷಗಳ ನಡುವಿನ ಕಿತ್ತಾಟಗಳು ಬಿಜೆಪಿಗೆ ವರದಾನವಾಗುವ ಲಕ್ಷಣಗಳು ಕಂಡು ಬರತೊಡಗಿದೆ.












Click it and Unblock the Notifications