Hassan: ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೆ ಸುಪಾರಿ ಕೊಟ್ಟು ಮೂರ್ಛೆ ಹೋದ ಪತ್ನಿ
ಹಾಸನ ಜನವರಿ 18: ಪತಿಯ ಕೊಲೆ ನಡೆದಿದೆ ಎನ್ನುವ ವಿಚಾರ ತಿಳಿದು ಮೂರ್ಛೆ ಹೋಗಿದ್ದ ಪತ್ನಿಯ ನೌಟಂಕಿ ಆಟವೊಂದು ಹಾಸನದ ಚನ್ನರಾಯಪಟ್ಟಣದ ಕುಂಭಾರಹಳ್ಳಿಯಲ್ಲಿ ಬಯಲಾಗಿದೆ. ಇಬ್ಬರು ಮಕ್ಕಳಿರುವ ಈಕೆ ತನ್ನ ಪ್ರಿಯಕರನಿಗೆ ಸುಪಾರಿ ಕೊಟ್ಟು ಪತಿಯನ್ನು ಕೊಲೆ ಮಾಡಿಸಿದ್ದಾಳೆ. ಬಳಿಕ ಪತಿಯನ್ನು ಕಳೆದುಕೊಂಡ ದು:ಖದಲ್ಲಿ ಮೂರ್ಛೆ ಹೋದಂತೆ ನಟಿಸಿದ್ದಾಳೆ. ಹಾಗಾದರೆ ಕುಂಭಾರಹಳ್ಳಿಯಲ್ಲಿ ಆಗಿದ್ದೇನು? ನಂಜುಂಡೇಗೌಡನ ಭೀಕರ ಕೊಲೆ ಆಗಿದ್ದು ಹೇಗೆ? ಪೊಲೀಸ್ ವಿಚಾರಣೆ ಬಳಿಕ ಈ ಪ್ರಕರಣ ತಿರುವು ಪಡೆದುಕೊಂಡಿದ್ದು ಯಾಕೆ?
ಕಣ್ಣೆದುರು ಪತ್ನಿಯ ಕಾಮದಾಟ, ಇಬ್ಬರು ಮಕ್ಕಳ ಮುಖ ನೋಡಿ ಎಲ್ಲವನ್ನು ಸಹಿಸಿಕೊಂಡಿದ್ದ ಪತಿ. ಆದರೆ ಚಂದದ ಸಂಸಾರದಲ್ಲಿ ಹುಳಿ ಹಿಂಡಿದ ಕಾಮುಕನೊಬ್ಬ ಎಲ್ಲವನ್ನು ಸಹಿಸಿಕೊಂಡಿದ್ದ ತನ್ನ ಪ್ರೇಯಸಿ ಪತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದಕ್ಕೆ ಇಡೀ ಊರಿಗೂರೆ ಕಂಬನಿ ಮಿಡಿದಿದೆ.

ಹಾಸನದ ಚನ್ನರಾಯಪಟ್ಟಣದ ಕುಂಭಾರಹಳ್ಳಿಯಲ್ಲಿ ವಾಸವಾಗಿದ್ದ ನಂಜುಂಡೇಗೌಡ 14 ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಸಮಾಜದಲ್ಲಿ ಮಾದರಿಯಾಗಿ ಬದುಕೋದಕ್ಕೆ ಈ ಸುಖ ಸಂಸಾರವನ್ನು ದೂಗಿಸಿಕೊಂಡು ಹೋಗಿದ್ದರೆ ಸಾಕಿತ್ತು. ಆದರೆ ಅಡ್ಡದಾರಿ ಹಿಡಿದ ಪತ್ನಿ ಮನೆಯ ಮುಂದೆ ವಾಸವಾಗಿದ್ದ ಅರುಣ್ ಎಂಬಾತನ ಕಣ್ ಸನ್ನೆಗೆ ಬಿದ್ದುಬಿಟ್ಟಿದ್ದಳು.
ಈ ಅರುಣ್ ಎಂಬಾತ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳು ಇರುವ ಸಂಸಾರಸ್ಥ. ಪತ್ನಿ ಹಾಗೂ ಮಕ್ಕಳಿಂದ ದೂರವಾಗಿದ್ದ ಅರುಣ್ ಮನೆ ಮುಂದೆ ವಾಸವಾಗಿದ್ದ ಸುಖ ಸಂಸಾರದಲ್ಲಿ ಮಾರಿಯಾಗಿ ಪ್ರವೇಶ ಮಾಡಿದ್ದಾನೆ. ನಂಜುಂಡೇಗೌಡನ ಪತ್ನಿಯನ್ನು ತನ್ನ ಪ್ರೇಮದ ಬಲೆಗೆ ಬೀಳಿಸಿಕೊಂಡು ನೆಮ್ಮದಿಯಾಗಿದ್ದ ಸಂಸಾರದಲ್ಲಿ ಕಲ್ಲು ಹಾಕಿದ್ದಾನೆ.
ಇದನ್ನು ತಿಳಿದ ನಂಜುಂಡೇಗೌಡನ ಹೃದಯ ಒಡೆದು ಹೋಗಿತ್ತು. ಬಳಿಕ ಇವರು ಪೊಲೀಸ್ ಠಾಣೆಗೆ ದೂರು ನೀಡಿ ತನ್ನ ಪತ್ನಿ ಹಿಂದೆ ಬಿದ್ದ ಅರುಣ್ ಎಂಬಾತನನ್ನು ದೂರ ಮಾಡಲು ಬೇಡಿಕೊಂಡಿದ್ದರು. ಆದರೆ ಕೊನೆಗೆ ಗ್ಯಾಮಸ್ಥರೆಲ್ಲರು ಸೇರಿ ರಾಜಿ ಪಂಚಾಯ್ತಿ ಮಾಡಿ ಅನುಸರಿಸಿಕೊಂಡು ಹೋಗಲು ತಿಳಿಸಿದ್ದರು. ಇದರಿಂದಾಗಿ ನಂಜುಂಡೇಗೌಡ ಸುಮ್ಮನಾಗಿದ್ದ.
ಪತ್ನಿ ತನ್ನ ಲವ್ವಿಡವ್ವಿ ಆಟಕ್ಕೆ ಯಾರೂ ಕೂಡ ಅಡ್ಡಿಯಾಗದೇ ಇರಲು ಪತಿಯ ಕುಟುಂಬಸ್ಥರನ್ನೂ ದೂರ ಇಟ್ಟಿದ್ದಳು. ಇದೆಲ್ಲದನ್ನು ಇಬ್ಬರು ಮಕ್ಕಳ ಮುಖ ನೋಡಿ ನಂಜುಂಡೇಗೌಡ ಸಹಿಸಿಕೊಂಡಿದ್ದನು. ಆದರೂ ಪತ್ನಿಗೆ ಪತಿ ನಂಜುಂಡೇಗೌಡ ತನ್ನ ಹಾಗೂ ಅರುಣ್ ನಡುವೆ ಬರುವುದು ಇಷ್ಟವಿರಲಿಲ್ಲ. ಹೀಗಾಗಿ ಅರುಣ್‌ಗೆ ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಳು.
ಅರುಣ್ ಈಗಾಗಲೇ ಎರಡು ಬಾರಿ ನಂಜುಂಡೇಗೌಡನ ಹತ್ಯೆಗೆ ಬಲೆ ಕೂಡ ಬೀಸಿದ್ದ. ಆದರೆ ಅದೃಷ್ಟವಶಾತ್ ನಂಜುಂಡೇಗೌಡ ಪಾರಾಗಿದ್ದರು. ಆದರೆ ಈ ಬಾರಿ ಕೊಲೆ ಸಂಚು ತಪ್ಪದೇ ಇರಲು ವ್ಯವಸ್ಥಿತವಾಗಿ ಏರ್ಪಾಡು ಮಾಡಲಾಗಿತ್ತು. ನಂಜುಂಡೇಗೌಡ ಶುಕ್ರವಾರ ಮರುವನಹಳ್ಳಿ-ಮಡಬ ರಸ್ತೆಯ ಮಧ್ಯೆ ಇರುವ ಬ್ಯಾಡರಹಳ್ಳಿ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಅರುಣ್ ಹಾಗೂ ಗ್ಯಾಂಗ್ ಅವರನ್ನು ಕೊಲೆ ಮಾಡಿದೆ. ರಸ್ತೆ ಮಧ್ಯೆ ದೊಡ್ಡ ಮರದ ಕಟ್ಟಿಗೆ ಮೇಲೆ 50ಕ್ಕೂ ಹೆಚ್ಚು ಮೊಳೆ ಹೊಡೆದು ನಂಜುಂಡೇಗೌಡ ಅವರ ಗಾಡಿಯನ್ನು ಪಂಚರ್ ಮಾಡಿದ್ದ ಅರುಣ್ ಗ್ಯಾಂಗ್ ವ್ಯವಸ್ಥಿತವಾಗಿ ಕೊಲೆ ಮಾಡಿದೆ.
ಗಾಡಿ ಪಂಚರ್ ಆದ ಬಳಿಕ ಗಾಡಿಯಿಂದ ಇಳಿದ ನಂಜುಂಡೇಗೌಡನ ಕಣ್ಣಿಗೆ ಖಾರದ ಪುಡಿ ಎರಚಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಪತ್ನಿ ಕೆಲ ಹೊತ್ತು ಮೂರ್ಛೆ ಹೋದಂತೆ ನಟಿಸಿದ್ದಾಳೆ. ಆದರೆ ಗ್ರಾಮಸ್ಥರ ಮನಸ್ಸು ಕೇಳಬೇಕಲ್ಲ. ಊರಲ್ಲಿ ಎಲ್ಲರೊಂದಿಗೆ ಚೆನ್ನಾಗಿದ್ದ ನಂಜುಂಡೇಗೌಡನ ಕೊಲೆ ಆಗಿದೆ ಅಂದರೆ ಅದಕ್ಕೆ ಕಾರಣ ಪತ್ನಿ ಪ್ರಿಯಕರ ಅರುಣ್ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರ ತಿಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತ್ನಿಯನ್ನು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಅರುಣ್ ಹಾಗೂ ಗ್ಯಾಂಗ್ ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ. ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಇದ್ದ ನಂಜುಂಡೇಗೌಡನ ಹತ್ಯೆಯಿಂದಾಗಿ ಇಡೀ ಊರ ಜನ ಬೇಸರ ವ್ಯಕ್ತಪಡಿಸಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ನಂಜುಂಡೇಗೌಡನ ಕುಂಟುಬಸ್ಥರು ಪಟ್ಟು ಹಿಡಿದಿದ್ದಾರೆ.












Click it and Unblock the Notifications