ಚುನಾವಣಾ ಅಕ್ರಮ ತಡೆಗೆ 36 ಚೆಕ್ ಪೋಸ್ಟ್ : ರೋಹಿಣಿ
ಹಾಸನ, ಮಾರ್ಚ್ 03: ಹಾಸನದ ಜಿಲ್ಲಾಧಿಕಾರಿ ಕಮ್ ಚುನಾವಣಾಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರು ಚುನಾವಣಾ ಆಕ್ರಮ ತಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಗಡಿ ಭಾಗಗಳಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು. ಚುನಾವಣಾ ಆಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಒಟ್ಟು 36 ಚೆಕ್ ಪೋಸ್ಟ್ ಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ. ಆರ್ ಪೂರ್ಣಿಮಾ ಅವರು ಮಾಹಿತಿ ನೀಡಿದರು.

ತಾಲೂಕುಗಳ ಗಡಿಭಾಗಗಳಲ್ಲಿ ಒಳ ಬರುವ ಹಾಗೂ ಹೊರ ಹೋಗುವ ಪ್ರತಿ ವಾಹನಗಳ ಮೇಲೆ ನಿಗಾ ವಹಿಸಲು ಚೆಕ್ ಪೋಸ್ಟ್ ತೆರೆಯಲಾಗುತ್ತಿದೆ. ಸಂಚಾರ, ವಿಚಕ್ಷಣ, ಸ್ಥಾನಿಕ ಹಾಗೂ ಸೆಕ್ಟರ್ ಆಫೀಸರ್ಸ್ ಮತ್ತು ಮಾದರಿ ನೀತಿ ಸಂಹಿತೆ ಜಾಗೃತ ದಳಗಳು ಚುನಾವಣಾ ಅಕ್ರಮಗಳ ಬಗ್ಗೆ ನಿಗಾವಹಿಸಲಿವೆ ಎಂದರು.
* ಹಾಸನದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೊಂಡ ಬಳಿಕ ಒಟ್ಟಾರೆ, 14,04,319 ಮತದಾರರಿದ್ದಾರೆ.
* ಈ ಪೈಕಿ 7,09,910 ಪುರುಷ ಮತದಾರರು ಹಾಗೂ 6,94, 409 ಮಹಿಳಾ ಮತದಾರರು.
* 33,106 ಹೊಸದಾಗಿ ಸೇರ್ಪಡೆಗೊಂಡ ಮತದಾರರಿದ್ದು, 15,287 ಮಂದಿ ಮೊದಲ ಬಾರಿಗೆ ಮತದಾನ ಮಾಡುವವರು ಪಟ್ಟಿಯಲ್ಲಿದ್ದಾರೆ.
* 35,988 ಹೆಸರುಗಳನ್ನು ವಿವಿಧ ಕಾರಣಗಳಿಗಾಗಿ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ.
* 1,966 ಮತದಾನದ ಬೂತ್ ಗಳನ್ನು ಸ್ಥಾಪಿಸಲಾಗುವುದು, 2950 ಬ್ಯಾಲೆಟ್ ಯೂನಿಟ್, 2460 ಕಂಟ್ರೋಲ್ ಯೂನಿಟ್ ಹಾಗೂ 2560 ವಿವಿ ಪ್ಯಾಟ್ ಗಳನ್ನು ಬಳಸಲಾಗುತ್ತದೆ.
* ಎಲ್ಲಾ ಇವಿಎಂ ಹಾಗೂ ಸಾಧನಗಳು ಗುಜರಾತ್ ರಾಜ್ಯದಿಂದ ಹಾಸನ ಜಿಲ್ಲೆಗೆ ಬಂದಿದ್ದು, ವಿವಿ ಪ್ಯಾಟ್ ಗಳನ್ನು ಬಿಇಎಲ್ ಸಂಸ್ಥೆ ಪೂರೈಸಿದೆ.
* ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಎಲ್ಲಾ ಸಾಧನಗಳ ಪ್ರಥಮ ಹಂತ ತಪಾಸಣೆಯನ್ನು ಬಿಇಎಲ್ ನ ಅಧಿಕಾರಿಗಳು ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.












Click it and Unblock the Notifications