ಹಾಸನ: ಗೆಲುವು ಸಾಧಿಸಿದ ಸ್ವರೂಪ್.. 'ಭೇಷ್ ಭವಾನಿ' ಎನ್ನುತ್ತಿರುವ ಕಾರ್ಯಕರ್ತರು!
ಹಾಸನ: ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಗೆಲುವಿನ ಮಾಲೆ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪಾಲಾಗಿದೆ. ಹಾಲಿ ಬಿಜೆಪಿ ಶಾಸಕ ಪ್ರೀತಂ ಗೌಡಗೆ ಸೋಲು ಕಂಡಿದ್ದಾರೆ.
ಸ್ವರೂಪ್ ಪ್ರಕಾಶ್ 8000ಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿಯಾಗಿ ಜಯಗಳಿಸಿದ್ದಾರೆ ಎಂದು ವರದಿಯಾಗಿದೆ. ಹಾಸನ ಕ್ಷೇತ್ರದಿಂದ ತಾನೇ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಭವಾನಿ ರೇವಣ್ಣ ಈ ಹಿಂದೆ, ಪ್ರಚಾರ ಮಾಡಿದ್ದರು. ಆದರೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಾಮಾನ್ಯ ಕಾರ್ಯಕರ್ತನಿಗೆ ಟೆಕೆಟ್ ನೀಡಲಾಗುತ್ತದೆ ಎಂದು ಹೇಳಿದ್ದರು. ಇದು ತಿಕ್ಕಾಟಕ್ಕೆ ಕಾರಣವಾಗಿತ್ತು.

ಕಡೆಗೆ ಜೆಡಿಎಸ್ ಟಿಕೆಟ್ ಸ್ವರೂಪ್ ಪಾಲಾಗಿತ್ತು. ಎಷ್ಟೇ ಮುನಿಸಿಕೊಂಡಿದ್ದರೂ ಭವಾನಿ ರೇವಣ್ಣ, ಸ್ವರೂಪ್ ಜೊತೆಯಲ್ಲಿ ರ‍್ಯಾಲಿಯಲ್ಲಿ ಭಾಗವಹಿಸಿ, ಒಗ್ಗಟ್ಟು ಪ್ರದರ್ಶಿಸಿದ್ದರು. ಇದೀಗ, ಕಳೆದ ಬಾರಿಯ ಚುನಾವಣೆಯಲ್ಲಿ ತಮ್ಮ ತಂದೆಯನ್ನು ಸೋಲಿಸಿದ್ದ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ವಿರುದ್ಧ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ವಿಜಯಶಾಲಿಯಾಗಿದ್ದಾರೆ.

ಅವರ ಗೆಲುವಿಗೆ ಆಡಳಿತ ವಿರೋಧಿ ಅಲೆ, ಅನುಕಂಪ ಕೆಲಸ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಿಷ್ಟೇ ಅಲ್ಲದೆ, ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ, ರೇವಣ್ಣ ಫ್ಯಾಮಿಲಿಯಿಂದ ಯಾರೇ ಚುನಾವಣೆಯಲ್ಲಿ ಸ್ಪರ್ಧಿಸಿದರೂ, ಸರಿ ಸುಮಾರು 50 ಸಾವಿರ ವೋಟ್ ಅಂತರದಿಂದ ಜಯ ಗಳಿಸುವುದಾಗಿ ಸವಾಲು ಹಾಕಿದ್ದರು. ಅವರ ಈ ಹೇಳಿಕೆಗಳೇ ಕಡೆಗೆ ಅವರಿಗೆ ಮುಳುವಾಗಿವೆ ಎಂದು ಹೇಳಲಾಗಿದೆ.
ಸದ್ಯದ ವರದಿ ಪ್ರಕಾರ, ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು 113 ಸ್ಥಾನಗಳನ್ನು ಪಡೆಯಬೇಕು. ಕಾಂಗ್ರೆಸ್ ಈಗಾಗಲೇ ಮ್ಯಾಜಿಕ್ ನಂಬರ್ ದಾಟಿ ಮುನ್ನುಗುತ್ತಿದ್ದು, ಬರೋಬ್ಬರಿ 133 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ, ಜೆಡಿಎಸ್ ತೀವ್ರ ಹಿನ್ನೆಡೆ ಅನುಭವಿಸಿವೆ.












Click it and Unblock the Notifications