Breaking: ಭಕ್ತರ ಸಂಖ್ಯೆ ಹೆಚ್ಚಳ: ಹಾಸನಾಂಬೆ ದರ್ಶನ ಅವಧಿ ವಿಸ್ತರಣೆ
ಹಾಸನ ಅಕ್ಟೋಬರ್ 20: ಹಾಸನ ಜಿಲ್ಲೆಯ ಐತಿಹಾಸಿಕ ದೇವಸ್ಥಾನ ಹಾಸನಾಂಬೆ ದೇವರ ದರ್ಶನೋತ್ಸವ ಕಳೆದ ಏಳು ದಿನಗಳ ಹಿಂದೆ ಆರಂಭವಾಗಿದ್ದು, ಇಂದು (ಅಕ್ಟೋಬರ್ 20) ಎಂಟನೇ ದಿನದ ದರ್ಶನ ಆರಂಭವಾಗಿದೆ. ಹಾಸನಾಂಬೆ ದರ್ಶನಕ್ಕೆ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ತಂಡೋಪಾದಿಯಲ್ಲಿ ಆಗಮಿಸುತ್ತಿದ್ದು, ನಿರೀಕ್ಷೆಗೂ ಮೀರಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಭಕ್ತರ ಸಂಖ್ಯೆ ಕಮ್ಮಿ ಇದ್ದು, ಈ ಬಾರಿ ಭಕ್ತ ಸಾಗರವೇ ಹಾಸನಾಂಬೆ ದರ್ಶನಕ್ಕೆ ಹರಿದು ಬರುತ್ತಿದೆ.
ದೇವಾಲಯ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದು, ಸರತಿ ಸಾಲಿನ ಕೆಲವೆಡೆ ನೂಕುನುಗ್ಗಲು, ತಳ್ಳಾಟಗಳು ಸಂಭವಿಸುತ್ತಿದೆ. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಡಳಿತ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಹಾಸನಾಂಬ ದೇವಾಲಯಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಹಾಸನಾಂಬೆ ದರ್ಶನ ಅವಧಿ ವಿಸ್ತರಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸೂಚನೆ ಮೇರೆಗೆ ಜಿಲ್ಲಾಡಳಿತ ದೇವಿಯ ದರ್ಶನದ ಅವಧಿ ವಿಸ್ತರಣೆ ಮಾಡಿದೆ. ಒತ್ತಡ ತಗ್ಗಿಸಲು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ವರ್ಷಕ್ಕೊಮ್ಮೆ ದರ್ಶನ ಕಲ್ಪಿಸುವ ಹಾಸನಂಬೆಯ ಗರ್ಭದ ಗುಡಿ ಬಾಗಿಲು ಅಕ್ಟೋಬರ್ 13ರಂದು ತೆರೆದಿತ್ತು. ಭಕ್ತರಿಗೆ ದೇವಿ ದರ್ಶನ ಮಾಡಲು ಅಕ್ಟೋಬರ್ 14ರಿಂದ ಅವಕಾಶ ಮಾಡಿಕೊಡಲಾಗಿತ್ತು. ಸರತಿ ಸಾಲಿನಲ್ಲಿ ಹೆಚ್ಚುಕಾಲ ನಿಲ್ಲಲು ಆಗಲ್ಲ ಎನ್ನುವ ಭಕ್ತರಿಗಾಗಿ ವಿಶೇಷ ದರ್ಶನ ವ್ಯವಸ್ಥೆ ಕೂಡ ಮಾಡಲಾಗಿತ್ತು. ವಿಶೇಷ ದರ್ಶನ ಟಿಕೆಟ್ ಹಾಗೂ ದೇವಿಯ ಪ್ರಸಾದ ಲಡ್ಡು ಮಾರಾಟದಲ್ಲಿ ದೇವಾಲಯಕ್ಕೆ ನಿರೀಕ್ಷೆಗೂ ಮೀರಿದ ಆದಾಯ ಸಂಗ್ರವಾಗಿದೆ.
ಅಕ್ಟೋಬರ್ 14ರಿಂದ ಅಕ್ಟೋಬರ್ 18ವರೆಗೆ ನಡೆದ 1 ಸಾವಿರ ಮತ್ತು 300 ರೂಪಾಯಿಗಳ ಟಿಕೆಟ್‌ಗಳು ಮತ್ತು ಲಡ್ಡು ಮಾರಾಟದಿಂದ 60.56 ಲಕ್ಷ ರೂಪಾಯಿ ಹಣ ದೇವಾಲಯಕ್ಕೆ ಸಂಗ್ರಹವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಮುಂದಿನ ದಿನಗಳಲ್ಲಿ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಹಾಗೂ ದೇವರ ದರ್ಶನಕ್ಕೆ ಸಮಯ ವಿಸ್ತರಿಸಿರುವ ಕಾರಣ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದುಪ್ಪಟ್ಟು ಆಗುವ ನಿರೀಕ್ಷೆಯಿದೆ.












Click it and Unblock the Notifications