ಹಾಸನಾಂಬೆ ದರ್ಶನಕ್ಕೆ ತೆರೆ: ಭಕ್ತರಿಗೆ ಸಚಿವರು, ವಿಐಪಿಗಳದ್ದೇ ರಗಳೆ ಆಗೋಯ್ತು
ಹಾಸನ, ನ 9: ವರ್ಷಕ್ಕೆ ಒಂಬತ್ತು ದಿನ ಮಾತ್ರ ಬಾಗಿಲು ತೆಗೆಯುವ ಹಾಸನ ನಗರದಲ್ಲಿರುವ ಹಾಸನಾಂಬೆ ದೇವಸ್ಥಾನದ ಬಾಗಿಲನ್ನು ಬಲಿಪಾಡ್ಯಮಿಯ ಮರುದಿನ, ಶುಕ್ರವಾರದಂದು (ನ 9) ಮಧ್ಯಾಹ್ನ 12.32ಕ್ಕೆ ವಿಶ್ವರೂಪ ದರ್ಶನದ ನಂತರ ಮುಚ್ಚಲಾಗಿದೆ.
ಪ್ರತೀ ಬಾರಿಯಂತೆ ಈ ಬಾರಿಯೂ ಲಕ್ಷಾಂತರ ಜನ ಈ ಒಂಬತ್ತು ದಿನದಲ್ಲಿ ದೇವಿಯ ದರ್ಶನ ಪಡೆದಿದ್ದಾರೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ, ಭಕ್ತರ ಸಂಖ್ಯೆಯಲ್ಲಿ ಮತ್ತು ಕಾಣಿಕೆ ಸಂಗ್ರಹದಲ್ಲಿ ಇಳಿಮುಖವಾಗಿದೆ. ಈದೇ ಮೊದಲ ಬಾರಿಗೆ, ಗರ್ಭಗುಡಿ ಮುಚ್ಚುವ ದಿನವೇ ಕಾಣಿಕೆ ಹಣವನ್ನು ಎಣಿಕೆ ಮಾಡಲಾಗುತ್ತಿದೆ.
ಬಲಿಪಾಡ್ಯಮಿಯ ದಿನ ರಾತ್ರಿ ಸನ್ನಿದಾನದಲ್ಲಿ ಸಿದ್ದೇಶ್ವರಸ್ವಾಮಿ ಚಂದ್ರಮಂಡಲೋತ್ಸವ ಸೇವೆ ನಡೆದಿದೆ. ನಿಮಿಷಕ್ಕೆ 120 ಭಕ್ತರಂತೆ, ಸುಮಾರು ಹನ್ನೆರಡು ಲಕ್ಷ ಭಕ್ತರು ಈ ಒಂಬತ್ತು ದಿನದಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ದೀಪಾವಳಿ ರಜೆಯ ಕಾರಣ ಕಳೆದ ಮೂರು ದಿನದಂದು, ಸಾಗರೋಪಾದಿಯಲ್ಲಿ ಬಂದ ಭಕ್ತರನ್ನು ನಿಯಂತ್ರಿಸುವುದೇ ಜಿಲ್ಲಾಡಳಿತಕ್ಕೆ ಸಾಹಸದ ಕೆಲಸವಾಗಿತ್ತು. ಸಾಮಾನ್ಯ ಸರತಿಯಲ್ಲಿ ಕಿಲೋಮೀಟರ್ ಗಟ್ಟಲೆ ಭಕ್ತರು ನಿಂತಿದ್ದರೂ, ಸಚಿವರು, ವಿಐಪಿಗಳನ್ನು ಆದ್ಯತೆಯಿಂದ ಒಳಗೆ ಬಿಡಲಾಗುತ್ತಿತ್ತು.
ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ದೇವೇಗೌಡ್ರು, ಕ್ಯಾಬಿನೆಟ್ ಸಚಿವರು, ವಿರೋಧ ಪಕ್ಷದ ನಾಯಕರುಗಳು, ಶಾಸಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನಪ್ರತಿನಿಧಿಗಳು ಆಗಮಿಸಿದ್ದರಿಂದ, ಸಾಮಾನ್ಯ ಮತ್ತು ವಿಶೇಷ ಕ್ಯೂಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ವಿಧಾನಸೌಧದ ಕಾರ್ಯಾಲಯ, ಮುಜರಾಯಿ ಇಲಾಖೆಗಳಿಂದ ಲೆಕ್ಕವಿಲ್ಲದಷ್ಟು ಶಿಫಾರಸು ಪತ್ರಗಳು ಬಂದು ಬಂದು ಬೀಳುತ್ತಿದ್ದವು. ಸಾವಿರಾರು ಸಂಖ್ಯೆಯಲ್ಲಿ ಶಿಫಾರಸು ಪತ್ರ ಹಿಡಿದುಕೊಂಡು ಬಂದ ಭಕ್ತರು, ವಿಶೇಷ ದರ್ಶನದ ಹಣವನ್ನು ಪಾವತಿಸದೆ ದರ್ಶನ ಪಡೆದಿದ್ದಾರೆ.
ಸಚಿವರು, ವಿಐಪಿಗಳ ಹಾವಳಿಯಿಂದ ಸಾಮಾನ್ಯ ಭಕ್ತರು ಗಂಟೆಗಟ್ಟಲೇ ಕಾಯುವಂತಾಗಿತ್ತು. ಮುಂದಿನ ವರ್ಷದ ಹಾಸನಾಂಬೆಯ ದರ್ಶನ ವೇಳೆಯಲ್ಲಾದರೂ, ಹಾಸನ ಜಿಲ್ಲಾಡಳಿತ ಸಚಿವ, ವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಿ, "ದೇವರ ಮುಂದೆ, ಎಲ್ಲರೂ ಒಂದೇ" ಎನ್ನುವ ನಿಲುವನ್ನು ತಾಳಬೇಕಾಗಿದೆ.












Click it and Unblock the Notifications