Hasanamba 2023: ಇಂದಿನಿಂದ ದಿನದ 24 ಗಂಟೆಯು ಹಾಸನಾಂಬೆ ದರ್ಶನ
ಹಾಸನ, ನವೆಂಬರ್ 04: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇಗುಲದ ಬಾಗಿಲು ತೆರೆದು ಇಂದಿಗೆ ಮೂರು ದಿನಗಳಾಗಿದ್ದು, ನಿನ್ನೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದೇವಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿರುವ ಕಾರಣ ಜಿಲ್ಲಾಡಳಿತ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇಂದಿನಿಂದ ದಿನದ 24 ಗಂಟೆಯು ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಿದೆ.
ಹಾಸನಾಂಬೆ ಸಾರ್ವಜನಿಕ ದರ್ಶನವು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಬೆಳ್ಳಂಬೆಳಗ್ಗೆಯೇ ದೇವಾಲಯವು ಭಕ್ತರಿಂದ ತುಂಬಿ ತುಳುಕುತ್ತಿದೆ. ಇಂದು ಬೆಳಗ್ಗೆ 5 ಗಂಟೆಯಿಂದಲೇ ದರ್ಶನ ಆರಂಭ ಆರಂಭವಾಗಿದೆ. ಅಪಾರ ಸಂಖ್ಯೆಯಲ್ಲಿ ಆಗಮಿಸಿರುವ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.

ವಾರಾಂತ್ಯದ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಇಂದಿನಿಂದಲೇ 24 ಗಂಟೆಯು ದರ್ಶನಕ್ಕೆ ಅವಕಾಶ ನೀಡಲಾಗಿದೆ. ನೈವೇದ್ಯ ಅವಧಿ ಹೊರತು ಪಡಿಸಿ ಉಳಿದ ಸಮಯದಲ್ಲಿ ಹಾಸನಾಂಬೆ ದರ್ಶನಕ್ಕೆ ಅವಕಾಶವಿದ್ದು, ಭಕ್ತರು ಮುಖ್ಯವಾಗಿ ಈ ವಿಚಾರ ಗಮನಿಸಬೇಕಾಗಿದೆ. ಮಧ್ಯಾಹ್ನ 1:30 ರಿಂದ 3ವರೆಗೆ ಮುಂಜಾನೆ 2 ಗಂಟೆಯಿಂದ 4 ಗಂಟೆವರೆಗೆ ನೈವೇದ್ಯ ಪೂಜೆ ನಡೆಯಲಿದ್ದು, ಈ ಸಮಯದಲ್ಲಿ ದೇವಿಯ ದರ್ಶನ ಇರುವುದಿಲ್ಲ.
ಪ್ರತಿವರ್ಷದಂತೆ ಹಾಸನಾಂಬೆ ದರ್ಶನ ಪಡೆದ ದೇವೇಗೌಡರು
ಹಾಸನಾಂಬೆ ಸಾರ್ವಜನಿಕ ದರ್ಶನದ ಮೊದಲ ದಿನದಂದೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಅವರ ಕುಟುಂಬ, ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಕೆ.ಗೋಪಾಲಯ್ಯ ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ದೇವೇಗೌಡರು, ಪತ್ನಿ ಚೆನ್ನಮ್ಮ, ತಮ್ಮ ಇಬ್ಬರು ಪುತ್ರಿಯರೊಂದಿಗೆ ಆಗಮಿಸಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇದೇ ವೇಳೆ ಹಾಸನಾಂಬೆ ಉತ್ಸವದಲ್ಲಿ ಎಲ್ಲಾ ವ್ಯವಸ್ಥೆ ಅಚ್ಚುಕಟ್ಟಾಗಿದೆ ಎಂದು ಹಾಸನ ಜಿಲ್ಲಾಡಳಿತದ ಕಾರ್ಯಕ್ಕೆ ಹೆಚ್.ಡಿ.ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ವಿಜೃಂಭಣೆಯ ದೀಪಾಲಂಕಾರವನ್ನು ಹಿಂದೆ ನಾನೆಂದೂ ನೋಡಿರಲಿಲ್ಲ. ಅತ್ಯದ್ಭುತವಾಗಿದೆ. ಭಕ್ತರಿಗೆ ಬೇಕಾಗುವ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕಾಗಿ ಸ್ಥಳೀಯ ಶಾಸಕರಾದ ಸ್ವರೂಪ್, ಜಿಲ್ಲಾಧಿಕಾರಿ ಮತ್ತವರ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಹೆಲಿ ಟೂರಿಸಂಗೆ ಚಾಲನೆ
ಹಾಸನಾಂಬೆ ದರ್ಶನೋತ್ಸವ ಸಂದರ್ಭದಲ್ಲಿ ಮನರಂಜನೆಗಾಗಿ ಆಗಸದಿಂದ ಹಾಸನ ಹೆಸರಿನಲ್ಲಿ ಹೆಲಿ ಟೂರಿಸಂ ಆರಂಭಿಸಲಾಗಿದ್ದು, ಅದಕ್ಕೆ ಡಿಸಿ ಇಂದು ಚಾಲನೆ ನೀಡಿದರು. ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಸತ್ಯಭಾಮ ಚಾಲನೆ ನೀಡಿದರು. ಒಬ್ಬರಿಗೆ ಒಂದು ಸುತ್ತಿಗೆ 4,300 ರೂಪಾಯಿ ದರ ನಿಗದಿ ಪಡಿಸಲಾಗಿದೆ. ನಗರದ ಮೇಲೆ 6-7 ನಿಮಿಷ ಸುತ್ತಾಡಿ ಆಗಸದಿಂದ ಹಾಸನ ನೋಡಬಹುದಾಗಿದೆ. ಇದೇ ಮೊದಲ ಬಾರಿಗೆ ಹಾಸನಾಂಬೆ ಉತ್ಸವದಂದು ಹೆಲಿ ಟೂರಿಸಂ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications