ಸಕಲೇಶಪುರ: ಕಾಡ್ಗಿಚ್ಚನ್ನು ನಂದಿಸಲು ಹೋಗಿ ಸಾವನ್ನಪ್ಪಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಮುಗಿಲು ಮುಟ್ಟಿದ ಆಕ್ರಂದನ
ಕಾಡ್ಗಿಚ್ಚನ್ನು ನಂದಿಸಲು ಹೋಗಿ ಅರಣ್ಯ ಸಿಬ್ಬಂದಿಯೊಬ್ಬರು ಸಾವಪ್ಪಿದ ಘಟನೆ ಸಕಲೇಶಪುರ ತಾಲೂಕಿನ ಕಬ್ಬಿನೆಲೆ ಗ್ರಾಮದ ಸಮೀಪ ನಡೆದಿದೆ.
ಹಾಸನ, ಫೆಬ್ರವರಿ, 19: ಕಾಡ್ಗಿಚ್ಚನ್ನು ನಂದಿಸಲು ಹೋಗಿ ಅರಣ್ಯ ಸಿಬ್ಬಂದಿಯೊಬ್ಬರು ಸಾವಪ್ಪಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಬ್ಬಿನೆಲೆ ಗ್ರಾಮದ ಸಮೀಪ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಸುಲುಕಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರಲ್ಲಿ ಓರ್ವ ಅರಣ್ಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರಣ್ಯ ಇಲಾಖೆಯ ಡಿಆರ್‌ಎಫ್ಓ ಸುಂದರೇಶ್ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮಂಜುನಾಥ್‌ಗೆ ಬೆಂಗಳೂರಿನಲ್ಲಿ ಹಾಗೂ ಮಹೇಶ್, ತುಂಗೇಶ್‌ಗೆ ಹಾಸನದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಮಂಜುನಾಥ್ ಬದುಕಿ ಬರಲಿ ಅಂತಾ ಸಾವಿರಾರು ಜನರ ಪ್ರಾರ್ಥನೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಚಿಕಿತ್ಸೆ ಫಲಿಸದೇ ಸುಂದರೇಶ್ ಅವರು ಸಾವನ್ನಪ್ಪಿದ್ದಾರೆ. ಭಾನುವಾರ (ಫೆಬ್ರವರಿ 19) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸುಂದರೇಶ್‌ನ ಅಂತ್ಯಕ್ರಿಯೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಸಾವು
ಸಾರ್ವಜನಿಕರ ಹಾಗೂ ಸಹೋದ್ಯೋಗಿಗಳ ದರ್ಶನಕ್ಕಾಗಿ ಸುಂದರೇಶ್ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಹಾಸನ ಜಿಲ್ಲೆಗೆ ಕರೆತರಲಾಯಿತು. ದಾರಿಯುದ್ದಕ್ಕೂ ಜನರು ಮೃದೇಹಕ್ಕೆ ಹೂವಿನ ಹಾರ ಹಾಕಿ ಅಂತಿಮ ದರ್ಶನ ಪಡೆದರು. ಸಕಲೇಶಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸ್ಥಳಿಯ ಶಾಸಕ ಎಚ್.ಕೆ. ಕುಮಾರಸ್ವಾಮಿ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು.

ಮೂಲತಃ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿಯ ಸುಂದರೇಶ್ 2011ರಲ್ಲಿ ವಾಚರ್ ಆಗಿ ಗುಬ್ಬಿಯಲ್ಲಿ ಕೆಲಸ ಆರಂಭಿದ್ದರು. 2014ರಲ್ಲಿ ಮುಂಬಡ್ತಿ ಪಡೆದು ಹಾಸನಕ್ಕೆ ಗಾರ್ಡ್ ಆಗಿ ವರ್ಗಾವಣೆಗೊಂಡಿದ್ದರು. ಕಳೆದ 13 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಂದರೇಶ್ ಐದು ವರ್ಷಗಳ ಹಿಂದೆ ರಕ್ಷಿತಾ ಎನ್ನುವವರ ಜೊತೆ ವಿವಾಹವಾಗಿದ್ದರು. ಇವರಿಗೆ ನಾಲ್ಕು ವರ್ಷದ ಹೆಣ್ಣು ಮಗಳಿದ್ದಾಳೆ.

ಕಾಡು ರಕ್ಷಣೆಗಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದ್ದ ಸಿಬ್ಬಂದಿ ಇಂದು ಇಲ್ಲವಾಗಿರುವುದು ಕುಟುಂಬದ ಸದಸ್ಯರಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ. ಸ್ನೇಹ ಜೀವಿಯಾಗಿದ್ದ ಸುಂದರೇಶ್ ಕಾಡಾನೆ ಸೆರೆ ಕಾರ್ಯಾಚರಣೆ, ಅರಣ್ಯ ಸಂರಕ್ಷಣೆ, ಕಾಡ್ಗಿಚ್ಚು ನಂದಿಸಲು ಯಾವಾಗಲೂ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದಿರುತ್ತಿದ್ದರು. ಕೊನೆಗೆ ಗಸ್ತು ವನಪಾಲಕ ಸುಂದರೇಶ್ ಕಾಡು ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದು, ಇದು ಅತ್ಯಂತ ದುಃಖಕರ ವಿಚಾರವಾಗಿದೆ.












Click it and Unblock the Notifications