ಆನೆ ದಾಳಿಗೆ ಯುವಕ ಬಲಿ: ಪ್ರತಿಭಟನಾ ಸ್ಥಳಕ್ಕೆ ಸಚಿವರ ದೌಡು
ಹಾಸನ ನವೆಂಬರ್2: ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಆನೆ ದಾಳಿಯಿಂದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನು (34) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಮನು ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ಸಾಗುವ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು.
ಹಾಸನ: ಪ್ರಜ್ವಲ್, ಭವಾನಿ ರೇವಣ್ಣಗೆ ಸಂಸ್ಕಾರದ ಪಾಠ ಮಾಡಿದ ಪ್ರೀತಂಗೌಡ
ಮನೆಗೆ ಆಧಾರ ಸ್ತಂಭವಾಗಿದ್ದ ಮನುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕಾಡಾನೆ ದಾಳಿಯಿಂದ ಸಾಲು ಸಾಲು ಸಾವು ಸಂಭವಿಸುತ್ತಿದ್ದರೂ ಈವರೆಗೂ ಯಾವುದೇ ಕ್ರಮಕೈಗೊಳ್ಳದ ಸರ್ಕಾರ ವಿರುದ್ಧ ಹೆಬ್ಬನಹಳ್ಳಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರ ವಿರುದ್ಧ ಸ್ಥಳೀಯರ ಆಕ್ರೋಶ
ಕಾಡಾನೆ ದಾಳಿಯಿಂದ ಮೃತಪಟ್ಟ ಮನು ಕುಟುಂಬಸ್ಥರು ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬರುವಂತೆ ಪಟ್ಟು ಹಿಡಿದಿದ್ದರು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಮನು ಕುಟುಂಬಸ್ಥರ ಬೆಂಬಲಕ್ಕೆ ನಿಂತಿದ್ದು, ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡುವ ವರೆಗೂ ಮೃತದೇಹ ತೆಗೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಹೆಬ್ಬನಹಳ್ಳಿ ಗ್ರಾಮಸ್ಥರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ರಾತ್ರೋರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಹಾಸನದಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಸಚಿವ ಕೆ.ಗೋಪಾಲಯ್ಯ ಬಳಿಕ ಬೆಂಗಳೂರಿಗೆ ತೆರಳಿದ್ದರು. ಆದರೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಗ್ರಾಮದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸಚಿವರು ರಾತ್ರೋರಾತ್ರಿ ಬೆಂಗಳೂರಿನಿಂದ ಹಾಸನಕ್ಕೆ ಬಂದು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಹಾಸನಾಂಬ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಪೂರ್ಣ: 3.69 ಕೋಟಿ ರೂ. ಆದಾಯ ಸಂಗ್ರಹ

ಸಮಸ್ಯೆಯನ್ನು ಸಿಎಂ ಗಮನಕ್ಕೆ ತಂದ ಉಸ್ತುವಾರಿ ಸಚಿವರು
ಇನ್ನು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಕಲೇಶಪುರ ಶಾಸಕ ಎಚ್. ಕೆ. ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಎಚ್. ಎಂ. ವಿಶ್ವನಾಥ್ ಅವರೊಂದಿಗೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸಂವಾದ ನಡೆಸಿದರು. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡಲು ಬೆಂಗಳೂರಿಗೆ ಹೋಗಿದ್ದೆ. ನಾನು ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದೇನೆ. ಹಾಸನ ಜಿಲ್ಲೆಯಲ್ಲಿ ಈವರೆಗೆ 77 ಮಂದಿ ಆನೆ ದಾಳಿಗೆ ಬಲಿಯಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಸರಕಾರಕ್ಕೆ ಸಮಸ್ಯೆಯ ತೀವ್ರತೆಯ ಅರಿವಿದೆ ಎಂದು ತಿಳಿಸಿದರು.

ಅಧಿಕಾರಿಗಳ ತಂಡ ಆನೆ ಪೀಡಿತ ಪ್ರದೇಶಗಳಿಗೆ ಭೇಟಿ
ಇನ್ನು "ಹಂತ ಹಂತವಾಗಿ ಆನೆಗಳನ್ನು ಸ್ಥಳಾಂತರಿಸಲು ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಈಗ ಜಿಲ್ಲೆಯಲ್ಲಿರುವ ಎಲ್ಲಾ 80-90 ಆನೆಗಳನ್ನು ಒಂದೇ ಬಾರಿಗೆ ಸ್ಥಳಾಂತರಿಸಲಾಗುವುದಿಲ್ಲ. ಇದನ್ನು ಹಂತ ಹಂತವಾಗಿ ಮಾಡಬೇಕು. ಬ್ಯಾರಿಕೇಡ್ ಹಾಕುವ ಕೆಲಸ ಏಕಕಾಲಕ್ಕೆ ನಡೆಯಲಿದೆ. ಹಿರಿಯ ಅಧಿಕಾರಿಗಳ ತಂಡ ಆನೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲಿದೆ. ನಂತರ ಈ ಭಾಗದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ರೈತರೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿ ಪರಿಹಾರ ನೀಡಲಿದ್ದಾರೆ" ಎಂದು ಹೇಳಿದರು.

ಮೃತ ಮನು ಪತ್ನಿಗೆ ಸಕಲೇಶಪುರ ಆಸ್ಪತ್ರೆಯಲ್ಲಿ ಹುದ್ದೆ
ಇನ್ನು "ಕಾಡಾನೆ ದಾಳಿಯಿಂದ ಮೃತಪಟ್ಟ ಸಂತ್ರಸ್ತರ ಪರಿಹಾರವನ್ನು 7.5 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಎರಡು ದಿನಗಳಲ್ಲಿ ಕಡತವನ್ನು ತೆರವುಗೊಳಿಸಲಾಗುವುದು. ಸಂತ್ರಸ್ತರ ಕುಟುಂಬಕ್ಕೆ ಪರಿಷ್ಕೃತ ಮೊತ್ತ ಸಿಗಲಿದೆ. ಅದೂ ಅಲ್ಲದೆ ಮೃತ ಮನುವಿನ ಹೆಂಡತಿಗೆ ಸಕಲೇಶಪುರದಲ್ಲಿ ಕೆಲಸ ಸಿಗುತ್ತದೆ. ಆಕೆಗೆ ಕೆಲಸ ಕೊಡಿಸುವಂತೆ ಹಾಸನ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ತಾತ್ಕಾಲಿಕ ಹುದ್ದೆ ನೀಡುವುದಾಗಿ" ಸಚಿವರು ಭರವಸೆ ನೀಡಿದ್ದಾರೆ.
ಸಚಿವರ ಭರವಸೆಗೆ ಒಪ್ಪಿ ಕೊನೆಗೂ ಪ್ರತಿಭಟನೆ ಕೈಬಿಡಲಾಗಿದ್ದು, ಮೃತ ಮನು ಮೃತದೇಹವನ್ನು ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.