ಸಕಲೇಶಪುರ: ಡರ್ಟ್ ರೇಸ್ ಮೂಲಕ ಪ್ರಕೃತಿ ಸೌಂದರ್ಯವನ್ನೇ ಹಾಳು ಮಾಡುತ್ತಿರುವ ಪ್ರವಾಸಿಗರು
ಹಾಸನ, ಜುಲೈ, 19: ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಪುಂಡಾಟ ಹೆಚ್ಚಾಗಿದೆ. ಅದೇ ರೀತಿ ಪಶ್ಚಿಮಘಟ್ಟದ ರಮಣೀಯ ಸ್ಥಳಗಳಲ್ಲಿ ನಮ್ಮದೇ ದರ್ಬಾರ್ ಎನ್ನುವ ರೀತಿಯಲ್ಲಿ ಪ್ರವಾಸಿಗರು ಡರ್ಟ್ ರೇಸ್ ಮಾಡುವ ಮೂಲಕ ಪುಂಡಾಟ ಮೆರೆಯುತ್ತಿದ್ದಾರೆ. ಇದರಿಂದ ಬೇಸತ್ತ ಸ್ಥಳೀಯರು ಪ್ರವಾಸಿಗರ ವಿರುದ್ಧ ಕೆಂಡಕಾರಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರದ ಹೊಸಹಳ್ಳಿ ಗುಡ್ಡದ ಸುತ್ತಮುತ್ತ ಪ್ರವಾಸಿಗರು ಐಶಾರಾಮಿ ಕಾರುಗಳಲ್ಲಿ ಡರ್ಟ್ ರೇಸ್ ಮಾಡುವ ಮೂಲಕ ಪುಂಡಾಟ ಮೆರೆಯುತ್ತಿದ್ದಾರೆ. ಅಲ್ಲದೆ ಮೋಜು ಮಸ್ತಿಗಾಗಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ. ಇನ್ನು ಸ್ಥಳೀಯರು ಪ್ರಕೃತಿಯನ್ನು ಹಾಳು ಮಾಡಬೇಡಿ, ಇಲ್ಲಿಂದ ಹೊರಡಿ ಎಂದು ಒಳ್ಳೆಯ ಮಾತಿನಿಂದ ಹೇಳಿದರೂ ಕ್ಯಾರೆ ಅನ್ನದ ಪ್ರವಾಸಿಗರು ಮಾತ್ರ ನಾವು ಆಡಿದ್ದೇ ಆಟ ಎನ್ನುವಂತೆ ಪುಂಡಾಟ ಮುಂದುವರೆಸಿದ್ದಾರೆ.

ಅಷ್ಟೇ ಅಲ್ಲದೆ ನಾವು ರಾಜಕೀಯ ಪ್ರಭಾವಿತರಾಗಿದ್ದೇವೆ ಎಂದು ಧಮ್ಕಿ ಹಾಕಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದರಿಂದ ಬೇಸತ್ತ ಇಲ್ಲಿನ ಜನರು ಕೂಡಲೇ ಈ ಕುರಿತು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕಿ
ಮತ್ತೊಂದೆಡೆ ಕಾಫಿನಾಡಿನ ಪ್ರವಾಸಿ ತಾಣಗಳತ್ತ ಪ್ರತಿನಿತ್ಯವೂ ಸಾಗರೋಪಾದಿಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರವಾಸಿಗರು ರಸ್ತೆಗಳ ಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದಾರೆ. ಇಂತಹದ್ದೇ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಡಿ ಘಾಟ್‌ನಲ್ಲೂ ಇತ್ತೀಚೆಗಷ್ಟೇ ನಡೆದಿತ್ತು. ಜಲಪಾತಗಳ ಬಳಿಯ ರಸ್ತೆಗಳ ಮಧ್ಯೆ ಕಾರ್ ನಿಲ್ಲಿಸಿಕೊಂಡು ಪ್ರವಾಸಿಗರು ಡ್ಯಾನ್ಸ್ ಮಾಡುವ ಮೂಲಕ ಪುಂಡಾಟ ಮೆರೆದಿದ್ದರು. ಆದರೂ ಪ್ರವಾಸಿಗರ ಈ ಹುಚ್ಚಾಟವನ್ನು ಹೇಳೋರಿಲ್ಲ-ಕೇಳೋರಿಲ್ಲ ಎನ್ನುವಂತಾಂಗಿದೆ.
ಚಿಕ್ಕಮಗಳೂರು-ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಡಿ ಘಾಟ್‌ನಲ್ಲಿ ಪ್ರವಾಸಿಗರು ಪ್ರತಿನಿತ್ಯವೂ ಹುಚ್ಚಾಟವನ್ನು ಮೆರೆಯುತ್ತಲೇ ಇದ್ದಾರೆ. ಈ ಭಾಗದಲ್ಲಿ ಮೊದಲೇ ಕಿರಿದಾದ ರಸ್ತೆಗಳು ಇದ್ದು, ವಾಹನ ಸವಾರರಿಗೆ ಇಕ್ಕಟ್ಟು ಆದಂತಾಗಿದೆ. ಇಂತಹದ್ದರಲ್ಲೂ ಕೆಲವರು ರಸ್ತೆ ಮಧ್ಯೆಯೆ ಕಾರ್‌ಗಳನ್ನು ನಿಲ್ಲಿಸಿ ಪುಂಡಾಟ ಮೆರೆಯುವ ಮೂಲಕ ಇನ್ನುಳಿದ ವಾಹನ ಸವಾರರಿಗೂ ಕಿರಿಕಿರಿ ಆಗುವಂತೆ ಮಾಡುತ್ತಿದ್ದಾರೆ.
ವಾಹನಗಳಿಗೆ ಅಡ್ಡಲಾಗಿ ನಿಂತು ನೃತ್ಯ ದಟ್ಟ ಮಂಜು ಕವಿದ ದಾರಿಯಲ್ಲಿ ವಾಹನ ಪಾರ್ಕಿಂಗ್ ಮಾಡಿ ಡ್ಯಾನ್ಸ್ ಮಾಡುವ ಭರದಲ್ಲಿ ಇನ್ನುಳಿದ ವಾಹನಗಳಿಗೂ ಅಡ್ಡಲಾಗಿ ನಿಲ್ಲುತ್ತಿದ್ದಾರೆ. ಇದರಿಂದ ಅಪಾಘಾತ, ಟ್ರಾಫಿಕ್ ಜಾಮ್‌ಗೂ ಆಹ್ವಾನ ನೀಡಿದಂತಾಗಿದೆ. ಅಷ್ಟೇ ಅಲ್ಲದೆ ಜಲಪಾತಗಳ ಮೇಲೆ ಹತ್ತುವ ದುಸ್ಸಾಹಸಕ್ಕೂ ಕೂಡ ಕೆಲವು ಪ್ರವಾಸಿಗರು ಮುಂದಾಗುತ್ತಿದ್ದಾರೆ. ಈ ಹುಚ್ಚಾಟದಿಂದ ಬೇಸತ್ತ ಸ್ಥಳೀಯರು ಜಲಪಾತಗಳ ಬಳಿ ಪೊಲೀಸರು ಬೀಟ್ ಹಾಕುವಂತೆ ಮನವಿ ಮಾಡಿದ್ದಾರೆ.












Click it and Unblock the Notifications