ಹಾಸನದ ಲಾಡ್ಜ್ ನಲ್ಲಿ ನೇಣಿಗೆ ಕೊರಳು ಕೊಟ್ಟ ಅಣ್ಣ-ತಮ್ಮ
ಹಾಸನ, ಮಾರ್ಚ್ 7: ಜೀವನದಲ್ಲಿ ಜುಗುಪ್ಸೆ ಹೊಂದಿದ ಸಹೋದರರಿಬ್ಬರು ಲಾಡ್ಜ್ ವೊಂದರಲ್ಲಿ ನೇಣಿಗೆ ಶರಣಾದ ಘಟನೆ ಮಂಗಳವಾರ ನಗರದಲ್ಲಿ ಬೆಳಕಿಗೆ ಬಂದಿದೆ. ಮಂಗಳೂರು ಮೂಲದ ಲೋಕನಾಥ್ (43) ಹಾಗೂ ಪುರುಷೋತ್ತಮ್ (46) ಎಂಬುವರೇ ನೇಣಿಗೆ ಶರಣಾದ ದುರ್ದೈವಿಗಳು.
ನಗರದ ಬಿ.ಎಂ. ರಸ್ತೆಯಲ್ಲಿರುವ ಲಾಡ್ಜ್ ವೊಂದರಲ್ಲಿ ನಾಲ್ಕು ದಿನಗಳ ಹಿಂದೆ ರೂಂ ಅನ್ನು ಬಾಡಿಗೆಗೆ ಪಡೆದಿದ್ದ ಇವರು, ಮಾರ್ಚ್ 5ರ ವರೆಗೂ ಹೊರಗೆ ಹೋಗಿ ತಿರುಗಾಡಿಕೊಂಡು ಬರುತ್ತಿರಲಿಲ್ಲ. ಆ ನಂತರ ಲಾಡ್ಜ್ ನಿಂದ ಹೊರಗೆ ಬಾರದೆ ಇದ್ದುದರಿಂದ ಹಾಗೂ ರೂಂನಿಂದ ದುರ್ವಾಸನೆ ಬರತೊಡಗಿದ್ದರಿಂದ ಲಾಡ್ಜ್ ನವರು ಅನುಮಾನಗೊಂಡು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.[ಚಾಮರಾಜನಗರದ ಬೇಗೂರಲ್ಲಿ ಪೊಲೀಸ್ ಪೇದೆ ನೇಣಿಗೆ ಶರಣು]
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಹಾಗೂ ಸಿಬ್ಬಂದಿ, ವಸತಿ ಗೃಹದ ಬಾಗಿಲು ತೆರೆದು ನೋಡಿದಾಗ ಸಹೋದರರಿಬ್ಬರು ಒಬ್ಬರಿಗೊಬ್ಬರು ಅಪ್ಪಿಕೊಂಡಂತೆ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲವಾದರೂ ಸಾಲ ಮಾಡಿಕೊಂಡಿದ್ದರಿಂದ ಅದನ್ನು ತೀರಿಸಲಾಗದೆ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.