ಹಾಸನ; ಹಸಿದವರಿಗೆ ಊಟ ಹಾಕಲು ಅಮೆರಿಕದಿಂದ ನೆರವು
ಹಾಸನ, ಏಪ್ರಿಲ್ 26 : ಲಾಕ್ ಡೌನ್ ವೇಳೆ ಹಲವಾರು ಸಂಘ ಸಂಸ್ಥೆಗಳು ಹಸಿದವರಿಗೆ ಊಟದ ವ್ಯವಸ್ಥೆ ಮಾಡುತ್ತಿವೆ. ಹಾಸನದಲ್ಲಿ ನಿರ್ಗತಿಕರ ಊಟದ ವ್ಯವಸ್ಥೆ ಅಮೆರಿಕದಲ್ಲಿರುವ ಕನ್ನಡಿಗರು ಸಹಾಯ ಮಾಡುತ್ತಿದ್ದಾರೆ.
ಅಚ್ಚರಿಯಾದರೂ ಇದು ಸತ್ಯ. ವಾಟ್ಸ್ ಅಪ್ ಮೂಲಕ ಮಾಡಿದ ಸಂದೇಶಕ್ಕೆ ದೂರದ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ತಕ್ಷಣ ಸ್ಪಂದಿಸಿದ್ದಾರೆ. ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟು ಸಹಾಯ ಮಾಡಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ನೋಂದಣಿಗೊಂಡಿರುವ ಕೊರೊನಾ ವಾರಿಯರ್ಸ್ ಸ್ವಯಂ ಸೇವಕರು ಅಸಹಾಯಕರಿಗೆ ಹಾಸನ ನಗರದ ಸರ್ಕಾರಿ ಆಸ್ಪತ್ರೆಯ ಎದುರು ಊಟದ ವ್ಯವಸ್ಥೆಯನ್ನು ಪ್ರತಿದಿನ ಮಾಡುತ್ತಾ ಬಂದಿದ್ದಾರೆ.

ಇದನ್ನು ಗಮನಿಸಿದ ಹಾಸನದ ರಾಘವೇಂದ್ರ ಸ್ವಾಮಿ ಮಠದ ಪಕ್ಕದ ಪ್ರತಿಭಾ ಪ್ಯೂಯಲ್ಸ್ ಪೆಟ್ರೋಲ್ ಬಂಕ್ ಮಾಲೀಕ ರಾಮಚಂದ್ರ ಅವರು ಊಟ ಮತ್ತು ತಿಂಡಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.
ಊಟದ ವ್ಯವಸ್ಥೆಯ ಪೊಟೋಗಳನ್ನು ಅಮೆರಿಕದಲ್ಲಿರುವ ತಮ್ಮ ಸ್ನೇಹಿತರಿಗೆ ವಾಟ್ಸ್ ಅಪ್ ಮೂಲಕ ರವಾನಿಸಿದ್ದರು. ನರೇಂದ್ರನಾಥ್ ತಕ್ಷಣ ಈ ಸಂದೇಶಕ್ಕೆ ಸ್ಪಂದಿಸಿ 5 ಸಾವಿರ ಹಣ ಕಳುಹಿಸಿ ನಿರ್ಗತಿಕರಿಗೆ ಒಂದು ದಿನದ ದಾಸೋಹಕ್ಕೆ ಸಹಾಯ ಹಸ್ತ ಚಾಚಿದರು.
ಸೇವಾ ಮನೋಭಾವನೆ ಹೊಂದಿರುವ ಡಾ. ಅರವಿಂದ್, ಆರ್. ಕೆ. ಚಂದ್ರಶೇಖರ ಮತ್ತು ಶ್ಯಾಮ್ ರಾಮದ್ಯಾನಿ ಅವರು 15 ಸಾವಿರ ರೂ.ಗಳನ್ನು ನಿರ್ಗತಿಕರ ಅನ್ನ ದಾಸೋಹಕ್ಕೆ ದಾನವಾಗಿ ನೀಡಿದ್ದಾರೆ.
ಹಾಸನ್ ಫ್ರೇಂಡ್ಸ್ ಕಾರ್ನರ್ ಸ್ವಯಂ ಸೇವಾ ಸಂಘದ ಈ ಸದಸ್ಯರುಗಳ ಕಾರ್ಯ ಸಾರ್ವಜನಿಕರ ಗಮನ ಸೆಳೆದಿದೆ. ಇಂತಹ ಸಂಘಟನೆಯ ಗಮನ ಸೆಳೆಯುವಲ್ಲಿ ಹಾಸನ ಕೊರೊನಾ ಸೈನಿಕರ ಶ್ರಮ ಸಾರ್ಥಕ ಎನಿಸುತ್ತದೆ.
ಊಟದ ವ್ಯವಸ್ಥೆಯಲ್ಲಿ 9 ಕೊರೊನಾ ಸೈನಿಕರು ಸಹಕಾರ ನೀಡಿದರು ಮತ್ತು ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಶ್ರಮಿಸಿದರು. ಊಟಕ್ಕೆ ಆಗಮಿಸುವವರು ಸರದಿ ಸಾಲಿನಲ್ಲಿ ನಿಲ್ಲುವಂತೆ ಮಾಡಲು ಗೆರೆಗಳನ್ನು ಹಾಕಲಾಗಿದೆ.












Click it and Unblock the Notifications