ಹಾಸನ- ಮೈಸೂರು ರಸ್ತೆಯಲ್ಲಿ KSRTC ಬಸ್ ಮತ್ತು ಆಟೋ ನಡುವೆ ಭೀಕರ ಅಪಘಾತ, ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ
ಹಾಸನ, ಆಗಸ್ಟ್, 18: ಆಟೋ - ಸಾರಿಗೆ (KSRTC) ಬಸ್ ನಡುವೆ ಭೀಕರ ಅಪಘಾತವಾಗಿದ್ದು, ಈ ವೇಳೆ ಆಟೋ ಚಾಲಕ (52) ಸಾವನ್ನಪ್ಪಿರುವ ಘಟನೆ ಹಾಸನದ ಕೆಐಎಡಿಬಿ ಏರಿಯಾದ ಹಾಸನ- ಮೈಸೂರು ರಸ್ತೆಯಲ್ಲಿ ನಡೆದಿದೆ.
ಹಾಸನ- ಮೈಸೂರು ರಸ್ತೆಯಲ್ಲಿ ಆಟೋ - ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತವಾಗಿದೆ. ಇನ್ನು ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಪರಿಣಾಮ ಆಟೋ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದು, ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಾರಿಗೆ ಬಸ್ ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆಯೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಸ್ ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಮರಕ್ಕೆ ಡಿಕ್ಕಿ ಹೊಡೆದ KSRTC ಬಸ್
ಇನ್ನು ಇತ್ತೀಚೆಗಷ್ಟೇ ಎದುರು ಬಂದ ಲಾರಿಗೆ ಜಾಗ ಬಿಡಲು ಹೋಗಿ ಸಾರಿಗೆ ಬಸ್‌ವೊಂದು ಮರಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಬಸ್‌ನ ಹಿಂಬದಿಯ ಕಿಟಕಿ ಪಕ್ಕ ಕುಳಿತಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ ಬೇಲೂರಿನ ನಿಡಗೋಡು ಗ್ರಾಮದ ಬಳಿ ನಡೆದಿತ್ತು.
ಹಾಸನದಿಂದ ಮಂಗಳೂರು ಕಡೆ ತೆರಳುತ್ತಿದ್ದ ಸಾರಿಗೆ ಬಸ್ ಬೇಲೂರಿನ ನಿಡಗೋಡು ಗ್ರಾಮದ ಬಳಿ ಎದುರು ಬಂದ ಲಾರಿಗೆ ಜಾಗ ಬಿಡಲು ಎಡ ಬದಿಗೆ ಬಂದಿದೆ. ಈ ವೇಳೆ ಎಡದಲ್ಲಿದ್ದ ಮರಕ್ಕೆ ಹಿಂಬದಿಯಿಂದ ಬಸ್ ಹೊಡೆದಿದ್ದು, ಬಸ್‌ನ ಕಿಟಕಿ ಪಕ್ಕ ಕುಳಿತಿದ್ದ ಪ್ರಯಾಣಿಕನಿಗೆ ಮರ ತಗುಲಿ ಗಂಭೀರ ಗಾಯವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಪ್ರಕರಣ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಸಾವಿಗೀಡಾದ ವ್ಯಕ್ತಿ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿತ್ತು.
ರಸ್ತೆ ಪಕ್ಕದಲ್ಲೇ ಮರಗಳು ಇರುವುದರಿಂದ ಸಂಚಾರಕ್ಕೆ ಅಡಚಣೆಯಾಗುವುದಲ್ಲದೆ, ಅಪಘಾತಗಳು ಕೂಡ ಸಂಭವಿಸುತ್ತಿವೆ. ಈ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಮರ ತೆರವುಗೊಳಿಸಿಲ್ಲ. ಶೀಘ್ರವೇ ರಸ್ತೆಗೆ ಹತ್ತಿರವಿರುವ ಮರಗಳನ್ನು ತೆರವುಗೊಳಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದರು.












Click it and Unblock the Notifications