ಹೊಸಳ್ಳಿ: ಮನೆಗೆ ನುಗ್ಗಿದ ಚಿರತೆ..!, ಮುಂದೇನಾಯ್ತು ನೋಡಿ
ಹಾಸನ, ಜುಲೈ, 14: ವಾಸದ ಮನೆಗೆ ಚಿರತೆ ನುಗ್ಗಿದ ಘಟನೆ ಹಾಸನ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾಸನ ತಾಲೂಕಿನ ಹೊಸಳ್ಳಿ ಗ್ರಾಮದ ಧರ್ಮ ಎಂಬುವವರು ವಾಸವಾಗಿರುವ ಮನೆಗೆ ಚಿರತೆ ನುಗ್ಗಿದೆ. ಧರ್ಮ ಅವರ ವಾಸದ ಮನೆಗೆ ಹೊಂದಿಕೊಂಡಿರುವ ದನದ ಕೊಟ್ಟಿಗೆಯಲ್ಲಿ ಜಾನುವಾರುಗಳು ಇದ್ದ ಕಾರಣ ಅಹಾರ ಅರಸಿ ಚಿರತೆ ಮನೆಗೆ ನುಗ್ಗಿದೆ. ನಂತರ ಸ್ಥಳೀಯರ ಮಾಹಿತಿ ಆಧಾರಿಸಿ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂಧಿ ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದೆಡೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ವೇಣುಗೋಪಾಲ್ ಅಲಿಯಾಸ್ ಮುತ್ತು ಎಂಬ ಯುವಕ ತಮ್ಮ ಜಮೀನಿಗೆ ಬಂದ ಚಿರತೆಯನ್ನು ಸೆರೆಹಿಡಿದಿದ್ದಾನೆ. ನಂತರ ಸೆರೆಹಿಡಿದ ಚಿರತೆಯನ್ನು ತನ್ನ ಬೈಕ್‌ನಲ್ಲಿ ಕಟ್ಟಿಕೊಂಡು ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಅದಕ್ಕೆ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ. ಈ ಘಟನೆ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ತಂತಿ ಬೇಲಿಗೆ ಸಿಲುಕಿ ಚಿರತೆ ನರಳಾಟ
ಹಾಗೆಯೇ ಚಿರತೆಯೊಂದು ತಂತಿ ಬೇಲಿಯಲ್ಲಿ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿರುವ ಘಟನೆಯೊಂದು ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸಿಕೊಂಡು ಬಂದ ವೇಳೆ ತೋಟಕ್ಕೆ ಹಾಕಿದ ಬೇಲಿಗೆ ಚಿರತೆ ಸಿಲುಕಿಕೊಂಡು ಹೊರಬರಲಾಗದೆ ಒದ್ದಾಡುತ್ತಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡ ಚಿರತೆ ಮತ್ತೆ ಉದ್ರೇಕಕ್ಕೆ ಒಳಗಾಗಿದೆ.
ನಂತರ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಶಿವಮೊಗ್ಗದಲ್ಲಿರುವ ಅರವಳಿಕೆ ತಜ್ಞರಿಗೆ ಕರೆ ಮಾಡಿದ್ದಾರೆ. ಸದ್ಯ ಶಿವಮೊಗ್ಗ ವೈದ್ಯರು ಅರವಳಿಕೆ ಚುಚ್ಚು ಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications