ವಿಶ್ವ ಹಿಂದೂಪರಿಷತ್ ಮುಖಂಡ ಅಶೋಕ್ ಸಿಂಘಾಲ್ ಇನ್ನಿಲ್ಲ
ಗುರ್ ಗಾಂವ್, ನ.17: ವಿಶ್ವ ಹಿಂದೂ ಪರಿಷತ್ ನ ಮುಖಂಡ ಅಶೋಕ್ ಸಿಂಘಾಲ್ ಅವರು ಮಂಗಳವಾರ ಇಲ್ಲಿನ ಮೇಧಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 89 ವರ್ಷ ವಯಸ್ಸಿನ ಅಶೋಕ್ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಕಳೆದ ಕೆಲವು ತಿಂಗಳುಗಳಿಂದ ಸಿಂಘಾಲ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಕ್ಟೋಬರ್ 20ರಂದು ದೆಹಲಿ ಆಸ್ಪತ್ರೆಗೆ ದಾಖಲಾಗಿದ್ದ ಸಿಂಘಾಲ್ 2 ದಿನಗಳ ಹಿಂದಷ್ಟೇ ಡಿಸ್ಚಾರ್ಜ್ ಆಗಿದ್ದರು. ನಂತರ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಮ ಹುಟ್ಟಿದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳಬೇಕು. ಈ ಸ್ಥಳವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಆದರೆ ಸಂಪೂರ್ಣ ಜಾಗದಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದ ಅಶೋಕ್ ಅವರು ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ಹೊತ್ತವರಲ್ಲಿ ಪ್ರಮುಖರು.
ಇಲ್ಲಿನ ಮುಸ್ಲಿಮರು ಈ ದೇಶದವರಲ್ಲವೇ? ಈ ದೇಶದವರೆ ಎನ್ನುವುದಾದರೆ ಅವರು ವಂದೇ ಮಾತರಂ ಹೇಳಲಿ ಜನ್ಮಭೂಮಿಗೆ ವಂದಿಸಲು ನಿರಾಕರಿಸುವವರ ಮತದಾನದ ಹಕ್ಕನ್ನು ರದ್ದುಪಡಿಸಬೇಕೆಂದು ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ ಸಿಂಘಾಲ್ ಈ ಹಿಂದೆ ಗುಡುಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಆಗ್ರಾ ಮೂಲದ ಅಶೋಕ್ ಸಿಂಘಾಲ್ ಅವರು ಬನಾರಾಸ್ ಹಿಂದೂ ವಿಶ್ವವಿದ್ಯಾಲಯದಿಂದ 1950ರಲ್ಲಿ ಮೆಟಲರ್ಜಿಕಲ್ ಇಂಜಿನಿಯರ್ ಪದವಿ ಪಡೆದಿದ್ದರು. ಪಂಡಿತ್ ಓಂಕಾರ್ ನಾಥ್ ಠಾಕೂರ್ ಅವರ ಶಿಷ್ಯರಾಗಿ ಹಿಂದೂಸ್ತಾನಿ ಸಂಗೀತದ ಪಾಠ ಕಲಿತು ಗಾಯಕರಾದರು.
ಮತಾಂತರ ವಿರೋಧಿಸಿ ದಲಿತರಿಗೆ ದೇಗುಲ ಪ್ರವೇಶ ಕೊಡಿಸುವ ಸಲುವಾಗಿ 200ಕ್ಕೂ ಅಧಿಕ ದೇಗುಲ ನಿರ್ಮಾಣ ಕಾರ್ಯಕ್ಕೆ ವಿಎಚ್ ಪಿ ಮುಂದಾಗಲು ಕಾರಣ ಕರ್ತರಾದರು.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 1942ರಲ್ಲಿ ಸೇರ್ಪಡೆಯಾಗಿ ಪೂರ್ಣಾವಧಿ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದರು. 1984ರಲ್ಲಿ ವಿಶ್ವಹಿಂದೂ ಪರಿಷತ್ ನ ಜಂಟಿ ಪ್ರಧಾನ ಕಾರ್ಯದರ್ಶಿಯಾದರು. 2011 ರ ತನಕ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.












Click it and Unblock the Notifications