ಗೌರಿಬಿದನೂರು; ಶಿವಶಂಕರರೆಡ್ಡಿ ಗೆಲುವಿಗೆ ಬೀಳುತ್ತಾ ತಡೆ!
ವಿದುರಾಶ್ವತ್ಥ ಸ್ವಾತಂತ್ರ್ಯ ಹೋರಾಟ, ಹೆಂಡ ಬೇಡ ಭೂಮಿ ಬೇಕು ಎಂಬ ದಲಿತ ಕುಟುಂಬಗಳ ಹೋರಾಟದ ಮೂಲಕ ಎಲ್ಲರಿಗೂ ಚಿರಪರಿಚಿತವಾಗಿರುವ ಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು. ಆಂಧ್ರಪ್ರದೇಶದ ಅನಂತಪುರ ಜೊತೆಗೆ ಗಡಿಯನ್ನು ಹಂಚಿಕೊಂಡಿದೆ. ಕ್ಷೇತ್ರದಲ್ಲಿ ಕೃಷಿಯನ್ನು ನಂಬಿದವರು ಹಲವಾರು ಜನರಿದ್ದಾರೆ. ಹಣ್ಣು, ಹೂವು, ತರಕಾರಿಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ ಎಂಬುದು ಇಲ್ಲಿನ ಜನರ ಕೂಗು. ಕ್ಷೇತ್ರಕ್ಕೆ ಎತ್ತಿನಹೊಳೆ ಯೋಜನೆ ನೀರು ತರುತ್ತೇವೆ ಎಂದು ಮಾಡಿದ ಘೋಷಣೆ ಕಾಗದದಲ್ಲಿಯೇ ಉಳಿದಿದೆ. ಸರಿಯಾದ ರಸ್ತೆ ಬೇಕು, ಉದ್ಯೋಗ ಸೃಷ್ಟಿಯಾಗಬೇಕು ಎಂದು ಜನರು ಬೇಡಿಕೆ ಮುಂದಿಡುತ್ತಿದ್ದಾರೆ.
ರಾಜಕೀಯವಾಗಿ ನೋಡಿದರೆ ಗೌರಿಬಿದನೂರು ಕಾಂಗ್ರೆಸ್ ಭದ್ರಕೋಟೆ. 1999ರಿಂದ 2018ರ ತನಕ ಐದು ಬಾರಿ ಕ್ಷೇತ್ರದಲ್ಲಿ ಪಕ್ಷದ ಬಾವುಟ ಹಾರಿಸಿದ್ದಾರೆ. ಕಾಂಗ್ರೆಸ್‌ನ ಎನ್. ಎಚ್. ಶಿವಶಂಕರರೆಡ್ಡಿ. ಕಾಂಗ್ರೆಸ್ ಈ ಬಾರಿಯ ಚುನಾವಣೆಗೆ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಿದೆ. ಹಾಲಿ ಶಾಸಕ ಎನ್. ಎಚ್. ಶಿವಶಂಕರರೆಡ್ಡಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. 6ನೇ ಗೆಲುವಿನ ಉತ್ಸಾಹದಲ್ಲಿರುವ ಅವರಿಗೆ ಈ ಬಾರಿ ಸ್ಪರ್ಧೆ ಅಷ್ಟು ಸುಲಭವಾಗಿಲ್ಲ ಎಂಬುದು ತಿಳಿದಿದೆ. ಜೆಡಿಎಸ್ ಕ್ಷೇತ್ರಕ್ಕೆ ನರಸಿಂಹಮೂರ್ತಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಿಜೆಪಿ ಹುರಿಯಾಳು ಯಾರು? ಎಂಬ ಘೋಷಣೆ ಮಾತ್ರ ಬಾಕಿ ಇದೆ.

ಗೌರಿಬಿದನೂರು ಎಂದಾಗ ನೆನಪಾಗುವುದು ಕನ್ನಡದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು. ಸದ್ಯ ಅವರು ಆಮ್ ಆದ್ಮಿ ಪಕ್ಷದಲ್ಲಿದ್ದಾರೆ. ಆದರೆ ಗೌರಿಬಿದನೂರು ಕ್ಷೇತ್ರದಿಂದ ಅವರು ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು. 1985ರಲ್ಲಿ ರಾಮಕೃಷ್ಣ ಹೆಗಡೆ ಒತ್ತಾಯದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಚಂದ್ರು ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಿ. ಎನ್. ಕೆ. ಪಾಪಯ್ಯ ಅವರನ್ನು ಸೋಲಿಸಿ 6,631 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಮುಖ್ಯಮಂತ್ರಿ ಚಂದ್ರು.
ರಾಜಕೀಯ ಚಿತ್ರಣ;1957ರಲ್ಲಿ ಪಕ್ಷೇತರ ಅಭ್ಯರ್ಥಿ ಕೆ. ಎಚ್. ವೆಂಕಟರೆಡ್ಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ರೆಡ್ಡಿ ಸಮುದಾಯದ ಎನ್. ಸಿ. ನಾಗಯ್ಯರೆಡ್ಡಿ ವಿರುದ್ಧ 13,272 ಮತಗಳನ್ನು ಪಡೆದು ಜಯಗಳಿಸಿದರು. 1962ರಲ್ಲಿ ಕೆ. ಎಚ್. ವೆಂಕಟರೆಡ್ಡಿ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾದರು. ಆದರೆ ಜನರು ಜೈನ ಸಮುದಾಯಕ್ಕೆ ಸೇರಿದ ಪಕ್ಷೇತರ ಅಭ್ಯರ್ಥಿ ಆರ್. ಎನ್. ಲಕ್ಷ್ಮೀಪತಿ ಗೆಲ್ಲಿಸಿದರು. 1967ರಲ್ಲಿಯೂ ಕೆ. ಎಚ್. ವೆಂಕಟರೆಡ್ಡಿ ಸೋಲಿಸಿ ಆರ್. ಎನ್. ಲಕ್ಷ್ಮೀಪತಿ ಮತ್ತೆ ಆರಿಸಿ ಬಂದರು.
1972ರ ಚುನಾವಣೆಯಲ್ಲಿ ಗೌರಿಬಿದನೂರು ಕ್ಷೇತ್ರ ಕಾಂಗ್ರೆಸ್ ವಶವಾಯಿತು. ಕಾಂಗ್ರೆಸ್ ಅಭ್ಯರ್ಥಿ ಬಾಹ್ಮಣ ಸಮುದಾಯದ ವಿ. ಕೃಷ್ಣರಾವ್ ಸಂಸ್ಥಾ ಕಾಂಗ್ರೆಸ್ ಸೇರಿದ್ದ ಆರ್. ಎನ್. ಲಕ್ಷ್ಮೀಪತಿ ಸೋಲಿಸಿದರು. ಆದರೆ 1978ರಲ್ಲಿ ಸ್ವತಂತ್ರ ಅಭ್ಯರ್ಥಿ ಬಿ. ಎನ್. ಕೆ. ಪಾಪಯ್ಯ ಜನತಾ ಪಕ್ಷದಿಂದ ಕಣಕ್ಕಿಳಿದಿದ್ದ ಆರ್. ಎನ್. ಲಕ್ಷ್ಮೀಪತಿಯನ್ನು 3824 ಮತಗಳ ಅಂತರದಲ್ಲಿ ಸೋಲಿಸಿದರು. 1983ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾದ ಆರ್. ಎನ್. ಲಕ್ಷ್ಮೀಪತಿ ಗೆಲುವು ಕಂಡರು, 3ನೇ ಬಾರಿಗೆ ಕ್ಷೇತ್ರದ ಶಾಸಕರಾದರು. 1985ರಲ್ಲಿ ಮುಖ್ಯಮಂತ್ರಿ ಚಂದ್ರು ಗೆದ್ದರು. 1989 ರಿಂದ 2018ರ ತನಕ ರೆಡ್ಡಿ ಸಮುದಾಯದವರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ.
1989ರಲ್ಲಿ ಅಶ್ವಥನಾರಾಯಣ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ. ಜನತಾದಳದ ಜ್ಯೋತಿರೆಡ್ಡಿಯನ್ನು ಸೋಲಿಸಿ ಜಯಗಳಿಸಿದರು. 1994ರಲ್ಲಿ ಅಶ್ವಥನಾರಾಯಣ ರೆಡ್ಡಿ ಪಕ್ಷೇತರರಾದರು. ಆಗ ಜನತಾದಳದ ಜ್ಯೋತಿರೆಡ್ಡಿ 7,885 ಮತಗಳ ಅಂತರದಲ್ಲಿ ಗೆದ್ದು ಹಿಂದಿನ ಚುನಾವಣೆ ಸೋಲಿನ ಸೇಡು ತೀರಿಸಿಕೊಂಡರು. 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಎನ್. ಎಚ್. ಶಿವಶಂಕರರೆಡ್ಡಿ ಕಾಂಗ್ರೆಸ್‌ನಲ್ಲಿದ್ದ ಅಶ್ವಥನಾರಾಯಣ ರೆಡ್ಡಿ ಸೋಲಿಸಿದರು. ಕ್ಷೇತ್ರದಿಂದ ಆಯ್ಕೆಯಾದ 6ನೇ ಪಕ್ಷೇತರ ಶಾಸಕ ಎನಿಸಿಕೊಂಡರು.

2004ರಲ್ಲಿ ಕಾಂಗ್ರೆಸ್ ಸೇರಿದ ಎನ್. ಎಚ್. ಶಿವಶಂಕರರೆಡ್ಡಿ ತಿರುಗಿ ನೋಡಿಯೇ ಇಲ್ಲ. ಇದುವರೆಗೂ 5 ಚುನಾವಣೆಯಲ್ಲಿ ಜಯಗಳಿಸಿರುವ ಅವರು 6ನೇ ಬಾರಿಗೆ ಟಿಕೆಟ್ ಪಡೆದಿದ್ದಾರೆ. 2008ರಲ್ಲಿ ಎನ್. ಎಚ್. ಶಿವಶಂಕರರೆಡ್ಡಿ 39,127 ಮತ ಪಡೆದು ಕ್ಷೇತ್ರದಲ್ಲಿ 3ನೇ ಜಯ ದಾಖಲು ಮಾಡಿದರು. ಬಿಜೆಪಿ ಅಭ್ಯರ್ಥಿ ರವಿನಾರಾಯಣರೆಡ್ಡಿ 27,959 ಮತ್ತು ಜೆಡಿಎಸ್‌ನ ಜ್ಯೋತಿರೆಡ್ಡಿ 27,480 ಮತಗಳನ್ನು ಪಡೆದರು. 2013ರಲ್ಲಿ ಪಕ್ಷೇತರ ಅಭ್ಯರ್ಥಿ ಜೈಪಾಲ್ ರೆಡ್ಡಿ 44,056 ಮತಗಳನ್ನು ಪಡೆದು ಎನ್. ಎಚ್. ಶಿವಶಂಕರರೆಡ್ಡಿಗೆ ಪ್ರಬಲ ಪೈಪೋಟಿ ನೀಡಿದರು. ಅಂತಿಮವಾಗಿ ಎನ್. ಎಚ್. ಶಿವಶಂಕರರೆಡ್ಡಿ 50,131 ಮತಗಳನ್ನು ಪಡೆದು 6075 ಮತಗಳ ಅಂತರದಲ್ಲಿ ಗೆದ್ದರು. ಕರ್ನಾಟಕ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಆಗಿ 5 ವರ್ಷ ಕೆಲಸ ಮಾಡಿದರು.
2018ರ ಚುನಾವಣೆ; ಕಾಂಗ್ರೆಸ್‌ನಿಂದ ಹಾಲಿ ಶಾಸಕ ಎನ್. ಎಚ್. ಶಿವಶಂಕರರೆಡ್ಡಿ ಅಭ್ಯರ್ಥಿಯಾದರು. ಜೆಡಿಎಸ್‌ನಿಂದ ಸಿ. ಆರ್. ನರಸಿಂಹಮೂರ್ತಿ ಕಣಕ್ಕಿಳಿದರು. 9,168 ಮತಗಳ ಅಂತರದಿಂದ ಎನ್. ಎಚ್. ಶಿವಶಂಕರರೆಡ್ಡಿ ಗೆದ್ದು 5ನೇ ಬಾರಿಗೆ ಗೆಲುವು ದಾಖಲು ಮಾಡಿದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಒಂದು ವರ್ಷ ಕೃಷಿ ಸಚಿವರಾಗಿ ಕೆಲಸ ಮಾಡಿದರು. ಬಿಜೆಪಿಯ ಜೈಪಾಲ್ ರೆಡ್ಡಿ 34,759 ಮತಗಳನ್ನು ಪಡೆದರು. 59,832 ಮತ ಪಡೆದ ಜೆಡಿಎಸ್‌ನ ಸಿ. ಆರ್. ನರಸಿಂಹಮೂರ್ತಿ 2ನೇ ಸ್ಥಾನ ಪಡೆದರು.
Gauribidanur Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎನ್. ಎಚ್. ಶಿವಶಂಕರರೆಡ್ಡಿ (ಕಾಂಗ್ರೆಸ್) | 69,000 | ಸಿ. ಆರ್. ನರಸಿಂಹಮೂರ್ತಿ (ಜೆಡಿಎಸ್) | 59,832 |
| 2013 | ಎನ್. ಎಚ್. ಶಿವಶಂಕರರೆಡ್ಡಿ (ಕಾಂಗ್ರೆಸ್) | 50,131 | ಕೆ. ಜೈಪಾಲ್ ರೆಡ್ಡಿ (ಪಕ್ಷೇತರ) | 44,056 |
| 2008 | ಎನ್. ಎಚ್. ಶಿವಶಂಕರರೆಡ್ಡಿ (ಕಾಂಗ್ರೆಸ್) | 39,127 | ರವಿನಾರಾಯಣರೆಡ್ಡಿ ಎನ್. ಎಂ (ಬಿಜೆಪಿ) | 27,959 |
2023ರ ಚುನಾವಣೆಗೂ ಎನ್. ಎಚ್. ಶಿವಶಂಕರರೆಡ್ಡಿ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ಜೆಡಿಎಸ್‌ನಿಂದ ನರಸಿಂಹಮೂರ್ತಿ ಅಭ್ಯರ್ಥಿ. ಜೈಪಾಲ್ ರೆಡ್ಡಿ ಎಲ್ಲರಿಗಂತ ಮೊದಲೇ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಟ್ಯಾಂಕರ್ ಮೂಲಕ ನೀರು ಪೂರೈಕೆ, ಉಚಿತ ಅನ್ನ ದಾಸೋಹ ಸಂಘಟನೆ ಮಾಡುತ್ತಿದ್ದಾರೆ. ಯುವಕರ ತಂಡ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಉದ್ಯಮಿ, ಸಮಾಜ ಸೇವಕ ಕೆ. ಎಚ್. ಪುಟ್ಟಸ್ವಾಮಿ ಗೌಡ ಸಹ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಮ್ಮ ಬೆಂಬಲಿಗರಿಗೆ ಅಧಿಕಾರ ಕೊಡಿಸಿ ಅವರು ತಂಡವನ್ನು ಕಟ್ಟಿಕೊಂಡಿದ್ದಾರೆ. ಹೊಸಕೋಟೆಯ ಶಾಸಕ ಶರತ್ ಬಚ್ಚೇಗೌಡ ಅವರ ಮಾವ ಕೆ. ಎಚ್. ಪುಟ್ಟಸ್ವಾಮಿ ಗೌಡ ಗೆಲ್ಲುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.
2008 ಮತ್ತು 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎನ್. ಎಂ. ರವಿನಾರಾಯಣರೆಡ್ಡಿ ಮಾಸನ ಆಸ್ಪತ್ರೆಗಳ ಮುಖ್ಯಸ್ಥ ಡಾ. ಎಚ್. ಎಸ್. ಶಶಿಧರ್‌ಗೆ ಬಿಜೆಪಿ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಕೊನೆ ಕ್ಷಣದಲ್ಲಿ ಚಿತ್ರಣ ಬದಲಿಸುವ ಕೆಲ ಎನ್. ಎಚ್. ಶಿವಶಂಕರರೆಡ್ಡಿ ಅವರಿಗೆ ತಿಳಿದಿದೆ. ಈ ಬಾರಿ ಅವರು ಯಾವ ದಾಳ ಪ್ರಯೋಗ ಮಾಡುತ್ತಾರೆ ಎಂದು ಜನರು ಕಾದು ಕುಳಿತಿದ್ದಾರೆ.
ಗೌರಿಬಿದನೂರು ಕ್ಷೇತ್ರದ ಒಟ್ಟು ಮತದಾರರು 2,06,241. ಪುರುಷರು 1,02,062 ಮತ್ತು ಮಹಿಳೆಯರು 1,04,179. ಎಸ್‌ಸಿ 30 ಸಾವಿರ, ಎಸ್‌ಟಿ 40 ಸಾವಿರ, ಸಾಧರ ಗೌಡ 20 ಸಾವಿರ, ರೆಡ್ಡಿ-ಒಕ್ಕಲಿಗ 18 ಸಾವಿರ, ಕುರುಬರು 25 ಸಾವಿರ ಮತದಾರರು ಇದ್ದಾರೆ. ಎನ್. ಎಚ್. ಶಿವಶಂಕರರೆಡ್ಡಿ ಗೆಲುವಿನ ಓಟಕ್ಕೆ ಯಾವ ಪಕ್ಷ ತಡೆ ಹಾಕಲಿದೆ? ಎಂದು ಕಾದು ನೋಡಬೇಕಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications